ಪ್ರತಾಪ್ ಸಿಂಹಗೆ ಶಾಕ್ ಕೊಟ್ಟರಾ ಎಚ್.ಡಿ. ಕುಮಾರಸ್ವಾಮಿ?
ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ ಹೊಸ ಸಂಚಲನ ಸೃಷ್ಟಿಯಾಗಿ, ಕರ್ನಾಟಕ ರಾಜಕೀಯವೇ ಶೇಕ್ ಆಗುತ್ತಿದೆ. ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ದೋಸ್ತಿ ನಡೆದಿರುವುದು ಇದೀಗ ದೊಡ್ಡ ಮಟ್ಟದಲ್ಲಿ ಹಲ್‌ಚಲ್ ಎಬ್ಬಿಸಿದೆ. ಮೈಸೂರಲ್ಲಿ ಸ್ಥಾನ ಉಳಿಸಿಕೊಳ್ಳಲು ಹಾಲಿ ಸಂಸದ ಪ್ರತಾಪ್ ಸಿಂಹ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಜೆಡಿಎಸ್‌ಗೆ ಮೈಸೂರು ಲೋಕಸಭಾ ಕ್ಷೇತ್ರ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ!
ಹೌದು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಕ್ಷೇತ್ರ ಬಿಟ್ಟುಕೊಡುವ ಬದಲಿಗೆ ಆ ಪಕ್ಷದ ಪ್ರಮುಖರನ್ನ ತಮ್ಮ ಚಿಹ್ನೆಯಲ್ಲೇ ಕಣಕ್ಕಿಳಿಸುವ ತಂತ್ರ ರೂಪಿಸಿದೆ. ಈ ಪ್ರಯೋಗವನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳಲು ರಣತಂತ್ರ ರೂಪಿಸಲಾಗಿದೆ ಅಂತ ಹೇಳಲಾಗಿದೆ. ಮಾಜಿ ಸಚಿವರಾದ ಜೆಡಿಎಸ್ ಪಕ್ಷದ ನಾಯಕ ಸಾ.ರಾ. ಮಹೇಶ್‌ಗೆ ಟಿಕೆಟ್ ನೀಡಿ, ಮೈಸೂರು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ತಯಾರಿ ಸಾಗಿದೆ ಎನ್ನಲಾಗಿದೆ. ಈ ಮೂಲಕ ಪ್ರತಾಪ್ ಸಿಂಹಗೆ ದೊಡ್ಡ ಶಾಕ್ ಎದುರಾಗಿದೆ.

ಪ್ರತಾಪ್ ಸಿಂಹ ಭವಿಷ್ಯ ಏನು?
ಬಿಜೆಪಿ ಈಗ ಹೊಸ ಹೊಸ ಪ್ರಯೋಗಕ್ಕೆ ಕೈಹಾಕುತ್ತಿದೆ. ವರಿಷ್ಠರ ಲೆಕ್ಕಾಚಾರದಂತೆ ರಣತಂತ್ರ ವರ್ಕೌಟ್ ಆದರೆ ಮೈಸೂರು & ಕೊಡಗು ಕ್ಷೇತ್ರದ ಹಾಲಿ ಸಂಸದ, ಬಿಜೆಪಿಯ ಪ್ರತಾಪ ಸಿಂಹ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ. ಕುಮಾರಸ್ವಾಮಿ ಅವ್ರು ಸಮ್ಮತಿ ಸೂಚಿಸಿದ್ರೆ ಕ್ಷೇತ್ರದಲ್ಲಿ ಹೊಸ ಆಟ ಶುರುವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆಯ ಮಾಡಿಕೊಂಡಿರುವ ಜೆಡಿಎಸ್, ಮೈಸೂರು - ಕೊಡಗು ಕ್ಷೇತ್ರವನ್ನ ತಮಗೆ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದೆ.
ಯಡಿಯೂರಪ್ಪ ರೂಪಿಸಿದ ರಣತಂತ್ರ ಏನು?
ತಮ್ಮ ಆಪ್ತ ಸಾ.ರಾ. ಮಹೇಶ್ ಅವರನ್ನ ಕಣಕ್ಕಿಳಿಸಬೇಕು ಎಂಬುದು ಎಚ್.ಡಿ. ದೇವೇಗೌಡ ಅವರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಆಸೆ. ಆದ್ರೆ ಮೈಸೂರು ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಇದರಿಂದ ಎದುರಾದ ಗೊಂದಲ ಸರಿ ಮಾಡೋಕೆ, ಹೊಸ ಸೂತ್ರವನ್ನ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಅವರೀಗ ಸಿದ್ಧ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಫರ್ ಮುಂದಿಟ್ಟಿದ್ದಾರೆ.
ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಹೇಶ್ ಅವರ ಜೊತೆ ಚರ್ಚೆಯನ್ನ ನಡೆಸಿದ್ದಾರೆ ಎನ್ನಲಾಗಿದೆ. ಇದೆಲ್ಲವೂ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ ಎನ್ನಲಾಗಿದ್ದು, ಅಧಿಕೃತ ಮಾಹಿತಿಗಳು ಹೊರಗೆ ಬರಬೇಕಿದೆ. ಮಹೇಶ್ ಅವರು ಕೂಡ ವರಿಷ್ಠರ ಮಾತನ್ನು ಕೇಳುವೆ ಎಂದಿದ್ದಾರೆ. ಈ ಮೂಲಕ ಕೊಡಗು & ಮೈಸೂರು ಲೋಕಸಭೆ ಕ್ಷೇತ್ರದ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತಿದೆ.

ಪ್ರತಾಪ್ ಸಿಂಹ ಹೇಳೋದು ಏನು?
ಈ ಬಗ್ಗೆ ಮೈಸೂರು & ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಕೂಡ ಪ್ರತಿಕ್ರಿಯೆ ನೀಡಿದ್ದು, ಇಂತಹ ಇನ್ನೂ ಹತ್ತಾರು ಗಾಳಿಸುದ್ದಿ ಹರಡುತ್ತಿರುತ್ತವೆ. 10 ವರ್ಷಗಳಿಂದ ನಿಷ್ಠೆ, ಪ್ರಾಮಾಣಿಕತೆಯಿಂದ ಕೊಡಗು-ಮೈಸೂರು ಜನರ ಸೇವೆ ಮಾಡಿದ್ದೇನೆ. ಗಾಳಿ ಸುದ್ದಿಗೆ ನಾನು ತಲೆಕೆಡಿಸಿಕೊಳ್ಳದೇ ಚುನಾವಣೆ ಸಿದ್ಧತೆಯಲ್ಲಿ ತೊಡಗಿದ್ದೇನೆ ಎಂದಿದ್ದಾರೆ. ಹೀಗಾಗಿ ಮೈಸೂರು & ಕೊಡಗು ಲೋಕಸಭೆ ಕ್ಷೇತ್ರದ ಚುನಾವಣೆ ಇದೀಗ ಭಾರಿ ಕುತೂಹಲ ಕೆರಳಿಸಿದೆ. ಅಲ್ಲದೆ ಬಿಜೆಪಿ & ಜೆಡಿಎಸ್ ದೋಸ್ತಿ ನಡುವೆ, ಲೋಕಸಭೆ ಚುನಾವಣೆ ಏನಾಗುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications