Bengaluru 2nd Airport: 2ನೇ ವಿಮಾನ ನಿಲ್ದಾಣದ ಚರ್ಚೆ, ಸಂಸದರ ಸಲಹೆ ಏನು
ಬೆಂಗಳೂರು, ಜನವರಿ 25: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣ ಮಾಡಲಾಗುತ್ತದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ. ತುಮಕೂರು, ನೆಲಮಂಗಲ, ರಾಮನಗರ, ಬೆಂಗಳೂರು ದಕ್ಷಿಣ ಭಾಗದಲ್ಲಿ ಹೀಗೆ ಚರ್ಚೆಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಲಹೆಯೊಂದನ್ನು ನೀಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ದೆಹಲಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣವನ್ನು ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಆಯ್ದ ಸಂಸದರು ಇರುವ ಸಮಿತಿ ಕೇಂದ್ರ ಸರ್ಕಾರದ ಆದಾಯ ಮತ್ತು ವೆಚ್ಚದ ಕುರಿತು ಉಸ್ತುವಾರಿ ನೋಡಿಕೊಳ್ಳುತ್ತದೆ.

2ನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು, ಸ್ಥಳ ಗುರುತಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣ ಪುನಃ ಆರಂಭಿಸುವ ಆಯ್ಕೆಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮೂರು ವಿಮಾನ ನಿಲ್ದಾಣ ಅಗತ್ಯವಿದೆ: ಸಂಸದ ತೇಜಸ್ವಿ ಸೂರ್ಯ ಮಾತನಾಡಿದ ವಿಶ್ವದಲ್ಲಿ ನ್ಯೂಯಾರ್ಕ್, ಲಂಡನ್ ಸೇರಿದಂತೆ ವಿವಿಧ ನಗರಗಳು ಒಂದಕ್ಕಿಂತ ಅಧಿಕ ಏರ್‌ಪೋರ್ಟ್‌ಗಳನ್ನು ಹೊಂದಿವೆ. ಬೆಂಗಳೂರು ನಗರದಲ್ಲಿಯೂ ಮೂರು ಏರ್‌ಪೋರ್ಟ್ ಕಾರ್ಯಾಚರಣೆ ನಡೆಸಿದರೆ ಅನುಕೂಲವಾಗಲಿದೆ" ಎಂದು ತಿಳಿಸಿದ್ದಾರೆ.
" ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡುವ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್ ಅವರನ್ನು ಎರಡು ವಾರಗಳ ಹಿಂದೆ ಭೇಟಿ ಮಾಡಿದ್ದೆ" ಎಂದು ಸಂಸದರು ಹೇಳಿದ್ದಾರೆ.
"ಬಿಐಎಎಲ್ ಕೆಐಎನ 150 ಕಿ. ಮೀ. ವ್ಯಾಪ್ತಿಯಲ್ಲಿ ಮೇ 24, 2032ರ ತನಕ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಿಲ್ಲ, ಇರುವ ಏರ್‌ಪೋರ್ಟ್ ಅಭಿವೃದ್ಧಿ ಮಾಡುವುದಿಲ್ಲ ಎಂದು ಕೇಂದ್ರ ವಿಮಾನಯಾನ ಸಚಿವಾಲಯದ ಜೊತೆ ಒಪ್ಪಂದ ಮಾಡಿಕೊಂಡಿದೆ. 2033ರ ಬಳಿಕ ಹೊಸ ಏರ್‌ಪೋರ್ಟ್ ಮಾಡಬಹುದು" ಎಂದರು.
"ಒಪ್ಪಂದದ ಪ್ರಕಾರವೇ ಬಿಐಎಎಲ್ ಹೆಚ್‌ಎಎಲ್ ವಿಮಾನ ನಿಲ್ದಾಣದ ವಾಣಿಜ್ಯ ಹಾರಾಟದ ವ್ಯವಸ್ಥೆಯನ್ನು ನೋಡಿಕೊಳ್ಳಬಹುದೇ? ಎಂಬ ಸಾಧ್ಯತೆಯ ಕುರಿತು ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇನೆ. ಅಲ್ಲದೇ 6 ತಿಂಗಳ ಹಿಂದೆ ಬೆಂಗಳೂರು ದಕ್ಷಿಣದಲ್ಲಿಯೇ 2ನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವಂತೆ ವಿಮಾನಯಾನ ಸಚಿವರಿಗೆ ಪತ್ರವನ್ನು ಬರೆದಿದ್ದೇನೆ" ಎಂದು ತೇಜಸ್ವಿ ಸೂರ್ಯ ಹೇಳಿದರು.
ಸದ್ಯ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸೇವೆ ಇಲ್ಲ. ಗಣ್ಯರ ವಿಮಾನಗಳ ಸಂಚಾರಕ್ಕೆ ಮಾತ್ರ ವಿಮಾನ ನಿಲ್ದಾಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ವಿಮಾನ ನಿಲ್ದಾಣದಲ್ಲಿಯೂ ವಿಮಾನ ಸೇವೆ ಪುನಃ ಆರಂಭಿಸಬೇಕು ಎಂದು ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ವಿ. ಸೋಮಣ್ಣ ಸಹ ಸಲಹೆ ನೀಡಿದ್ದರು.
ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ನಗರದ 2ನೇ ವಿಮಾನ ನಿಲ್ದಾಣವನ್ನು ಆನೇಕಲ್ ಅಥವ ಬಿಡದಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದರಿಂದಾಗಿ ದಕ್ಷಿಣ ಬೆಂಗಳೂರಿನ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸದ್ಯ ಬೆಂಗಳೂರು ದಕ್ಷಿಣ ಭಾಗದ ಜನರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲು ಪೀಕ್ ಅವರ್‌ನಲ್ಲಿ 2 ರಿಂದ 2.30 ಗಂಟೆ ಪ್ರಯಾಣ ಮಾಡಬೇಕಿದೆ. ಆದ್ದರಿಂದ ನಗರ ದಕ್ಷಿಣ ಭಾಗದಲ್ಲಿಯೇ ಹೊಸ ಏರ್‌ಪೋರ್ಟ್ ನಿರ್ಮಾಣವಾದರೆ ಜನರ ಪ್ರಯಾಣದ ಸಮಯ ಉಳಿತಾಯವಾಗಲಿದೆ ಎಂದು ಸಂಸದರು ವಿವರಣೆ ನೀಡಿದ್ದಾರೆ.












Click it and Unblock the Notifications