ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ಯಾಮ್ ಭಟ್ ನೇಮಕಾತಿ ಸಮರ್ಥಿಸಿಕೊಂಡ ಕಾಂಗ್ರೆಸ್, ಪ್ರತಾಪ್ ಕಿಡಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 01: ಕೊಡಗು ಹಾಗೂ ಮೈಸೂರು ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ಅವರು ಕೆಪಿಎಸ್ಸಿ ಅಧ್ಯಕ್ಷರ ನೇಮಕಾತಿ, ವೇತನ ತಾರತಮ್ಯ, ಮಾನವ ಹಕ್ಕು ಉಲ್ಲಂಘನೆ, ಪೊಲೀಸರ ಪ್ರತಿಭಟನೆ ಬಗ್ಗೆ ತಮ್ಮ ಅಭಿಪ್ರಾಯ ಪ್ರಕಟಿಸಿದ್ದಾರೆ. ಪ್ರತಾಪ್ ಸಿಂಹ ಅವರು ಹೊರಡಿಸಿರುವ ಆಗ್ರಹಪೂರ್ವಕ ಪ್ರಕಟಣೆ ನಿಮ್ಮ ಮುಂದೆ...

ಮಾನ್ಯರೇ,
ಆಡಳಿತದ ಪ್ರತಿ ಹಂತದಲ್ಲೂ ಎಡವುತ್ತಿರುವ ರಾಜ್ಯ ಸರ್ಕಾರ ಈಗಾಗಲೇ ಲೋಕಾಯುಕ್ತವನ್ನು ಮೂಲೆಗುಂಪು ಮಾಡಿದೆ. ಇದೀಗ ಕೆಪಿಎಸ್ ಸಿ ಅಧ್ಯಕ್ಷರ ನೇಮಕಾತಿಯಲ್ಲೂ ಅವಾಂತರ ಮಾಡಲು ಹೊರಟಿದೆ. ಲಕ್ಷಾಂತರ ಯುವಕರ ಉದ್ಯೋಗದ ಕನಸಾಗಿರುವ ಸಾಂವಿಧಾನಿಕ ಸಂಸ್ಥೆಯಾದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಗಾದಿಗೆ ಹಲವಾರು ಭ್ರಷ್ಟಾಚಾರ ಪ್ರಕರಣದಲ್ಲಿ ಗಂಭೀರ ಆರೋಪವನ್ನು ಎದುರಿಸುತ್ತಿರುವ ಟಿ. ಶ್ಯಾಮ್ ಭಟ್ ಅವರನ್ನು ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ.

ರಾಜ್ಯದಲ್ಲಿ ಸರ್ಕಾರಿ ಸೇವೆ ಮಾಡಲು ಬಯಸುವ ಯುವಕರಿಗೆ ಕೆಪಿಎಸ್ಸಿಯ ಆಯ್ಕೆ ಏಕೈಕ ಮಾರ್ಗ. ಪ್ರವೇಶದ ಹಂತದಲ್ಲಿಯೇ ಭ್ರಷ್ಟಾಚಾರವಿದ್ದರೆ ಆಯ್ಕೆಯಾದವರಿಂದ ಪ್ರಾಮಾಣಿಕತೆಯನ್ನು ನಿರೀಕ್ಷೆ ಮಾಡುವುದು ಕಷ್ಟ.[ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಗೆ ಶ್ಯಾಂ ಭಟ್ ಹೆಸರು ಶಿಫಾರಸು]

MP Pratap Simha on KPSC Sham Bhat and Police protest

ಪಾರದರ್ಶಕತೆ ಬೇಕಿದೆ: ಆ ಕಾರಣಕ್ಕಾಗಿಯೇ ಕೆಪಿಎಸ್ಸಿಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕೆಂದು, ಕೇಂದ್ರದ ಯುಪಿಎಸ್ಸಿ ಮಾದರಿಯಲ್ಲಿ ಪಾರದರ್ಶಕತೆಯನ್ನು ತರಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹಿಂದೆ ಆಯೋಗದಲ್ಲಿದ್ದ ಕೆಲವು ಸದಸ್ಯರ ಮೇಲೆ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದು ಅವರ ಮೇಲಿನ ತನಿಖೆ ಇನ್ನು ಪ್ರಗತಿಯಲ್ಲಿರುವಾಗಲೇ ಮತ್ತೊಬ್ಬ ಭ್ರಷ್ಟಾಚಾರ ಆರೋಪಿತರನ್ನು ಶಿಫಾರಸ್ಸು ಮಾಡಿರುವುದು ಖಂಡನೀಯ.[ಪೊಲೀಸರ ಪ್ರತಿಭಟನೆ, ಎಚ್ಚರಿಕೆ ನೀಡಿದ ಸಿದ್ದರಾಮಯ್ಯ]

ಹಾಗೆಯೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ ಟೇಬಲ್ ಗಳು ಹಾಗೂ ಹೆಡ್ ಕಾನ್ಸ್ ಟೇಬಲ್ ಗಳು ಕಳೆದ ಹತ್ತಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ, ಕಡತದಲ್ಲೇ ಉಳಿದಿರುವ ಪೊಲೀಸ್ ಸೇವಾ ನಿಯಮಗಳಲ್ಲಿ ಸುಧಾರಣೆಗಳನ್ನು ಮಾಡುವಂತೆ ಪೊಲೀಸರ ಪ್ರಮುಖ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂನ್ 4 ರಂದು ರಾಜ್ಯಾದ್ಯಂತ ಸಾಮೂಹಿಕ ರಜೆ ಹಾಕಲು ತೀರ್ಮಾನಿಸಿದ್ದಾರೆ.

ಯುವ ಮೋರ್ಚಾದಿಂದ ಆಗ್ರಹ: ವೇತನ ತಾರತಮ್ಯ, ಮಾನವಹಕ್ಕು ಉಲ್ಲಂಘನೆ, ಅಭದ್ರತೆ, ಹಾಗೂ ರಾಜಕೀಯ ಪ್ರಭಾವದಂಥ ಪ್ರಮುಖ ಬೇಡಿಕೆಗಳನ್ನು ಪೊಲೀಸರು ಮುಂದಿಟ್ಟಿದ್ದಾರೆ. ಸಮಾಜದ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸರ ಯೋಗಕ್ಷೇಮವನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತರಾಗಬೇಕೆಂದು, ಪೊಲೀಸರ ಮನವಿಯನ್ನು ಈಡೇರಿಸಬೇಕೆಂದು ಯುವ ಮೋರ್ಚಾ ಆಗ್ರಹಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಪ್ರತಿಭಟನೆಯ ಪರವಾಗಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳು ರಾಜ್ಯದ ಗೃಹ ಸಚಿವರು ಹೇಳಿಕೆ ನೀಡಿದ್ದು, ವ್ಯಕ್ತಿಯ ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವ ಗೃಹ ಸಚಿವರು ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸುತ್ತೇವೆ. [ಕರ್ನಾಟಕದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ: ಪ್ರತಾಪ್ ಸಿಂಹ]

ರಾಜ್ಯ ಸರ್ಕಾರವು ಈ ಕೂಡಲೇ ಟಿ. ಶ್ಯಾಮ್ ಭಟ್ ಅವರ ಹೆಸರನ್ನು ವಾಪಾಸ್ ಪಡೆಯಬೇಕು ಮತ್ತು ಆ ಸ್ಥಾನಕ್ಕೆ ಪ್ರಾಮಾಣಿಕ ಸಜ್ಜನ ವ್ಯಕ್ತಿಯನ್ನು ಶಿಫಾರಸ್ಸು ಮಾಡಬೇಕು ಹಾಗೂ ರಾಜ್ಯದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತಿರುವ ಪೊಲೀಸರ ಮನವಿಯನ್ನು ಈಡೇರಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ ಯುವ ಮೋರ್ಚಾ ರಾಜ್ಯಾದ್ಯಂತ ಪ್ರತಿಭಟನೆಯನ್ನು ಕೈಗೆತ್ತಿಕೊಳ್ಳಲಿದೆ.

ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ,
ಪ್ರತಾಪ್ ಸಿಂಹ
ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ, ಕರ್ನಾಟಕ
ಸಂಸದರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ.

English summary
BJP Yuva Morcha President, Kodagu Mysore MP Pratap Simha slammed CM Siddaramaiah for defending the appointment of 'tainted' civil servant Sham Bhat as Karnataka Public Service Commission Chairman. Pratap Simha also demanded congress government to fulfil the demands of Police department
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X