'ಏಪ್ರಿಲ್ 1ಕ್ಕೆ ಜನರು ಮೂರ್ಖರಾಗಿದ್ದನ್ನು ನೆನಪಿಸಿದ ರಾಜ್ಯ ಸರ್ಕಾರ'
ಬೆಂಗಳೂರು, ಏಪ್ರಿಲ್ 01: ಕರ್ನಾಟಕ ರಾಜ್ಯ ಸರ್ಕಾರ ಇಂದು ಏಪ್ರಿಲ್ 1ರಿಂದ ಹಾಲಿನ ದರ, ವಿದ್ಯುತ್ ಪ್ರತಿ ಯೂನಿಟ್ ದರ ಏರಿಕೆ ಮಾಡಿದೆ. ಇದಲ್ಲದೇ ಬೆಂಗಳೂರಿನ ಜನರ ಮೇಲೆ ಕಸದ ಸೆಸ್ ವಿಧಿಸಿದೆ. ಕನಿಷ್ಠ 10 ರಿಂದ 400 ರೂಪಾಯಿ ವಿಧಿಸಲು ಮುಂದಾಗಿದೆ. ಇದಕ್ಕೆ ವಿಪಕ್ಷ ನಾಯಕರು ಸೇರಿದಂತೆ ಅನೇಕರು ಆಕ್ಷೇಪಿಸಿದ್ದಾರೆ. ಕಸದ ಸೆಸ್ ವಿಧಿಸಲು ಸರ್ಕಾರ ಏಪ್ರಿಲ್ ಮೊದಲ ದಿನ ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ಸಂಸದ ಪಿಸಿ ಮೋಹನ್ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿರುವ ಸಂಸದ ಪಿಸಿ ಮೋಹನ್ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಬೆಂಗಳೂರಿನ ಮೇಲೆ ಹೊಸ ಕಸದ ಸೆಸ್ ವಿಧಿಸಲು ಏಪ್ರಿಲ್ ಮೂರ್ಖರ ದಿನವನ್ನು ಆರಿಸಿಕೊಂಡಿದೆ. ಏಕೆಂದರೆ ಜನರು ಮತ್ತೊಮ್ಮೆ ಮೂರ್ಖರಾಗಿದ್ದೇವೆ ಎಂದು ನೆನಪಿಸಲು ಸರ್ಕಾರ ಹೀಗೆ ಮಾಡಿದೆ ಎಂದು ಅವರು ದೂರಿದ್ದಾರೆ.

ಕಟ್ಟಡಗಳ ವಿಸ್ತೀರ್ಣ ಆದಾರದಲ್ಲಿ ಕಸ ನಿರ್ವಹಣೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಶುಲ್ಕ ವಿಧಿಸಿದೆ. ಇದರಿಂದ ವರ್ಷಕ್ಕೆ ₹600 ಕೋಟಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ ಎಂದು ಸಂಸದರು ಸರ್ಕಾರ ನಡೆಯನ್ನು ಖಂಡಿಸಿದರು.
ಇದೇ ವಿಚಾರವಾಗಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ದರ ಬೀಜಾಸುರ ಸರ್ಕಾರ ಇದೆ. ದಿನಕ್ಕೊಂದು ಸುಳ್ಳು ಹೇಳಿಕೊಂಡು ಅಗತ್ಯ ವಸ್ತುಗಳ ದರ ಏರಿಕೆ ಮಾಡುತ್ತಿದೆ. ಈಸ್ಟ್ ಇಂಡಿಯಾ ಕಂಪನಿಯಂತೆ ಕಾಂಗ್ರೆಸ ಕಂಪನಿಯು ಕಸ ನಿರ್ವಹಣೆ ಹೆಸರಿನಲ್ಲಿ ಸೆಸ್ ವಿಧಿಸುತ್ತಾ, ಕೋಟಿ ಕೋಟಿ ಸುಲಿಗೆಗೆ ಮುಂದಾಗಿದೆ. ಪಂಚ ಯೋಜನೆಗಳನ್ನು ಜಾರಿಗೆ ತಂದ ಸರ್ಕಾರವು ಅದನ್ನು ಮುಂದಿಟ್ಟುಕೊಂಡು ದರ ಏರಿಕೆ ಮಾಡುತ್ತಿದೆ ಎಂದರು.

2025ರ ಆರ್ಥಿಕ ವರ್ಷದಿಂದ ಹಾಲಿನ ದರ ಪ್ರತಿ ಲೀಟರ್ 4ರೂಪಾಯಿ ಏರಿಕೆ ಆಗಿದೆ. ಇದರಿಂದ ಮೊಸರಿನ ಬೆಲೆ ಸಹ ಅದರಷ್ಟೇ ದುಬಾರಿಯಾಗಿದೆ. ಇದರೊಂದಿಗೆ ಹಾಲಿನ ಇತರ ಎಲ್ಲ ಉತ್ಪನ್ನಗಳ ದರ ಏರಿಕೆ ಆಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬರೆ ದೊರೆತಿದೆ.
ಒಂದು ಕೈಲಿ ಕೊಟ್ಟು, ಮತ್ತೆ ಕಿತ್ತುಕೊಳ್ಳುವ ಸರ್ಕಾರ
ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಪ್ರತಿ ಯೂನಿಟ್ ದರ ಮುಂದಿನ ಮೂರು ವರ್ಷಕ್ಕೆ ಹೆಚ್ಚಿಸಿದ ಆದೇಶಿಸಿದೆ. ಈ ವರ್ಷ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ ಏರಿಕೆಗೆ ಸರ್ಕಾರ ಮುಂದಾಗಿದೆ. ಒಟ್ಟಾರೆ, ಪಂಚ ಗ್ಯಾರೆಂಟಿ ಯೋಜನೆಗಳಿಗೆ, ನೌಕರರ ಗ್ಯಾಚುಟಿ, ವೇತನ ಮುಂದಾದವುಗಳಿಗೆ ಹಣ ಹೊಂದಿಸಲು ಸರ್ಕಾರ ಮುಂದಾಗಿದೆ. ಒಂದು ಕೈಲಿ ಕೊಟ್ಟು, ಮತ್ತೊಂದು ಕೈಲಿ ದರ ಹೆಚ್ಚಿಸಿ ಕಿತ್ತುಕೊಳ್ಳುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ.












Click it and Unblock the Notifications