Bengaluru Rain Effect: ಬೆಂಗಳೂರು ಮಳೆಯಿಂದಾಗಿ 20ಕ್ಕೂ ಹೆಚ್ಚು ವಿಮಾನಗಳು ವಿಳಂಬ!
ಬೆಂಗಳೂರು ಅಕ್ಟೋಬರ್ 22: ಬೆಂಗಳೂರಿನಲ್ಲಿಂದು ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಕೆಲವು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.
ಡಾನಾ ಚಂಡಮಾರುತದ ಪರಿಣಾಮ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲಿ ವಿಮಾನಗಳು ವಿಳಂಬವಾಗಿವೆ. ಅಲ್ಲದೆ ನಗರದಲ್ಲಿನ ಬಹುತೇಕ ಅಂಡರ್‌ಪಾಸ್‌ಗಳು ನದಿಗಳಂತಾಗಿದ್ದು, ಕೋಗಿಲು ಜಂಕ್ಷನ್ ಸೇರಿದಂತೆ ಏರ್ ಫೋರ್ಸ್ ಬೇಸ್‌ಗೆ ಹೋಗುವ ಸರ್ವಿಸ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ವಾಹನ ಸವಾರರು ಹಾಗೂ ಸ್ಥಳೀಯರಿಗೆ ಈಶಾನ್ಯ ಬೆಂಗಳೂರು ಸಂಚಾರ ಪೊಲೀಸರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ದೋಣಿಗಳ ಮೂಲಕ ಜನರನ್ನು ಸ್ಥಳಾಂತರಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಬೆಂಗಳೂರು ನಗರ ಪ್ರದೇಶದಲ್ಲಿ 157 ಮಿ.ಮೀ ವರೆಗೆ ಮಳೆ
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಬೆಂಗಳೂರು ನಗರ ಪ್ರದೇಶದಲ್ಲಿ 157 ಮಿಲಿಮೀಟರ್ (ಮಿಮೀ) ವರೆಗೆ ಮಳೆಯಾಗಿದ್ದರೆ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 176.5 ಮಿಮೀ ಮಳೆಯಾಗಿದ್ದು ಬೆಂಗಳೂರಿನ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಹೀಗಾಗಿ ಸ್ಥಳೀಯ ನಾಗರಿಕ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಹಲವೆಡೆ ಒಳಚರಂಡಿ ನೀರು ಕೂಡ ರಸ್ತೆ ಹಾಗೂ ಮನೆಗಳಿಗೆ ನುಗ್ಗಿದ್ದು ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಮಳೆ ಮುಂದುವರೆಯುವ ಎಚ್ಚರಿಕೆ, ಶಾಲೆಗಳಿಗೆ ರಜೆ
ಮಳೆ ಮುಂದುವರೆಯುವ ಎಚ್ಚರಿಕೆ ಇದ್ದು, ಹಲವೆಡೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 20 ಕ್ಕೂ ಹೆಚ್ಚು ವಿಮಾನಗಳು ಪ್ರವಾಹದಿಂದಾಗಿ ವಿಳಂಬಗೊಂಡಿವೆ. ಪ್ರತಿಕೂಲ ಹವಾಮಾನದಿಂದಾಗಿ ಹಲವಾರು ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ.
ಅಲ್ಲದೆ ಒಂದು ವಾರದಲ್ಲಿ ಎರಡನೇ ಬಾರಿಗೆ ನಗರದಾದ್ಯಂತ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಅಧಿಕಾರಿಗಳು ಮಳೆ ಮುಂದುವರೆಯುವ ಎಚ್ಚರಿಕೆಯನ್ನು ನೀಡಿದ್ದು, ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಸ್ಥಳೀಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಭಾರೀ ಮಳೆಗೆ ಕಾಣದ ರಸ್ತೆ
ಬೆಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದು ಹಲವು ದಿನಗಳೇ ಕಳೆದಿವೆ. ಇನ್ನೂ ನಿತ್ಯ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಕಾಣದೆ ಅಪಘಾತ ಸಂಭವಿಸುವ ಆತಂಕ ಸವಾರರಲ್ಲಿ ಹೆಚ್ಚಾಗಿದೆ. ಒಂದೆಡೆ ರಸ್ತೆ ಗುಂಡಿಗಳು ಕಾಣಿಸುತ್ತಿಲ್ಲ. ಇನ್ನೊಂದೆಡೆ ಮುಂಭಾಗದಲ್ಲಿ ಬರುವ ವಾಹನಗಳು ಕಾಣಿಸುತ್ತಿಲ್ಲ. ಹೀಗಾಗಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದಕ್ಕೊಂದು ವಾಹನಗಳು ಡಿಕ್ಕಿ ಹೊಡೆಯುವ ಅಪಾಯದಲ್ಲೇ ವಾಹನ ಸವಾರರು ರಸ್ತೆಗಿಳಿಯುವಂತಾಗಿದೆ.











Click it and Unblock the Notifications