ಬೆಂಗಳೂರಿನಲ್ಲಿ ಮಂಗಗಳ ಹಾವಳಿ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ?
ಬೆಂಗಳೂರು,ಜು.29. ಬೆಂಗಳೂರು ನಗರದಲ್ಲಿ ಮಂಗಗಳ ಹಾವಳಿ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಹೈಕೋರ್ಟ್, ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಕೋರ್ಟ್ ಆದೇಶ ನೀಡಿ ಒಂದು ವರ್ಷವಾದರೂ ಕ್ರಮ ಕೈಗೊಂಡಿಲ್ಲವೇಕೆ? ಸಭೆ ನಡೆಸಿ ವರದಿ ಸಲ್ಲಿಸಿಲ್ಲವೇಕೆ ಎಂದು ಖಾರವಾಗಿ ಪ್ರಶ್ನಿಸಿದೆ.
ಅಲ್ಲದೆ, ಆಹಾರಕ್ಕಾಗಿ ಜನವಸತಿ ಪ್ರದೇಶಗಳಿಗೆ ಬರುವ ಕೋತಿಗಳ ಕಾಟದಿಂದ ಬೆಂಗಳೂರು ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸುವ ಸಂಬಂಧ ನ್ಯಾಯಾಲಯ 2021ರ ಆ.4ರಂದು ಹೊರಡಿಸಿರುವ ಆದೇಶ ಪಾಲಿಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.

ವಕೀಲ ರಾಧಾನಂದನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಮಂಗಗಳ ರಕ್ಷಣೆಯೂ ಮುಖ್ಯ:
ಅರ್ಜಿದಾರ ವಕೀಲರು, ಹಾಸನ ಜಿಲ್ಲೆಯ ಬೇಲೂರು ಸಮೀಪದ ಚೌಡೇನಹಳ್ಳಿ ಬಳಿ 38 ಮಂಗಳಗಳ ಮಾರಣ ಹೋಮ ನಡೆಯಿತು. 2021ರ ಸೆ.30ರಂದು ಕೋಲಾರದಲ್ಲಿ 20ಕ್ಕೂ ಮಂಗಗಳನ್ನು ವಿಷ ಹಾಕಿ ಕೊಲ್ಲಲಾಯಿತು. ಮಂಗಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಉಪಟಳ ತಡೆಯುವುದು ಎಷ್ಟು ಮುಖ್ಯವೋ, ಅವುಗಳ ರಕ್ಷಣೆ ಮತ್ತು ಕಾಡಿನಲ್ಲಿಪುನರ್ವಸತಿ ಸಹ ಅಷ್ಟೇ ಮುಖ್ಯವಾಗಿದೆ ಎಂದರು.
ಬೆಂಗಳೂರು ಸುತ್ತ ಹೆಚ್ಚಾಗಿ ಕಾಣಿಸಿಕೊಳ್ಳುವ ಅಪರೂಪದ 'ಬಾನೆಟ್ ಮಂಕಿ' (ಉದ್ದ ಬಾಲದ ಕೋತಿ) ತಳಿಯು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರಡಿ ಸಂರಕ್ಷಿತ ತಳಿ ಎಂದು ಘೋಷಿಸಲಾಗಿದೆ. ಆದರೆ, ಕೋತಿಗಳನ್ನು ಸೆರೆ ಹಿಡಿಯುವ ಅನಧಿಕೃತ ಗುಂಪು ಹುಟ್ಟಿಕೊಂಡಿವೆ. ನಿರ್ದಾಕ್ಷಿಣ್ಯವಾಗಿ ಮಂಗಗಳನ್ನು ಕೊಲ್ಲಲಾಗುತ್ತಿದೆ. ಈ ನಿಟ್ಟಿನಲ್ಲಿನ್ಯಾಯಾಲಯ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿದರು.
ಬಳಿಕ ನ್ಯಾಯಾಲಯ 2021ರ ಆ.8ರಂದು ಹೊರಡಿಸಿರುವ ಆದೇಶದ ಬಗ್ಗೆ ನ್ಯಾಯಪೀಠದ ಗಮನ ಸೆಳೆದರು.
ಎಲ್ಲಿದೆ ಕಾರ್ಯಯೋಜನೆ?
ಆ ಬಗ್ಗೆ ಬಿಬಿಎಂಪಿ ವಕೀಲರು ಸಮರ್ಪಕ ಉತ್ತರ ನೀಡದ್ದಕ್ಕೆ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ನಗರದಲ್ಲಿ ಮಂಗಗಳ ಉಪಟಳ ತಪ್ಪಿಸಲು ಸಂಬಂಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಕಾರ್ಯಯೋಜನೆ ರೂಪಿಸಬೇಕು. ಮಂಗಗಳ ಹಾವಳಿ ಬಗ್ಗೆ ದೂರು ನೀಡಲು ಸ್ಥಾಪಿಸಲಾಗಿರುವ ಹೆಲ್ಪ್‌ಲೈನ್ ಹಾಗೂ ದೂರವಾಣಿ ಸಂಖ್ಯೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು, ಆದರೆ ಏನು ಮಾಡಲಾಗಿದೆ ಎಂದು ಕೇಳಿತು. ಸರ್ಕಾರದ ಮಾಹಿತಿ ಗಮನಿಸಿದರೆ, ಏನೂ ಆಗಿಲ್ಲ. ಆದ್ದರಿಂದ ನ್ಯಾಯಾಲಯ 2021ರ ಆ.4ರಂದು ಹೊರಡಿಸಿರುವ ಆದೇಶವನ್ನು ಪಾಲಿಸಿರುವ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿ ಮತ್ತು ಅರಣ್ಯ ಇಲಾಖೆಗೆ ತಾಕೀತು ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಆ.10ಕ್ಕೆ ಮುಂದೂಡಿತು.












Click it and Unblock the Notifications