ಟ್ರಾಫಿಕ್ ಪೊಲೀಸ್ ಆಗಿಬಿಟ್ಟಿದ್ದಾರೆ ಮೊಹಮ್ಮದ್ ನಲಪಾಡ್!
ಬೆಂಗಳೂರು, ಜೂನ್ 22: ವಿದ್ವತ್‌ಗೆ ಅಮಾನುಷವಾಗಿ ಹೊಡೆದು ಭಾರಿ ಸುದ್ದಿಗೆ ಗ್ರಾಸವಾಗಿದ್ದ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ಇಂದು ಏಕಾ-ಏಕಿ ಟ್ರಾಫಿಕ್ ಪೊಲೀಸ್ ಆಗಿಬಿಟ್ಟಿದ್ದಾರೆ.
ನಗರದ ಬ್ಯುಸಿ ರಸ್ತೆಯೊಂದರ ಮಧ್ಯೆ ನಿಂತು ಮೊಹಮ್ಮದ್ ನಲಪಾಡ್ ಅವರು ಸುಗಮ ಸಂಚಾರ ವ್ಯವಸ್ಥೆಗೆಂದು ವಾಹನಗಳನ್ನು ನಿಯಂತ್ರಿಸುತ್ತಿರುವುದು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ವೈರಲ್ ಆಗಿದೆ.
ನಲಪಾಡ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಸಂಚಾರ ಅಸ್ತವ್ಯವಸ್ಥವಾಗಿರುವುದನ್ನು ಗಮನಿಸಿ ಕಾರಿಳಿದು ಬಂದು ವಾಹನಗಳನ್ನು ಕ್ರಮಬದ್ಧವಾಗಿ ಚಲಿಸುವಂತೆ ಸಂಜ್ಞೆಗಳನ್ನು ತೋರಿ ಸುಗಮ ಸಂಚಾರಕ್ಕೆ ಸಹಾಯ ಮಾಡಿದ್ದಾರೆ.

ನಲಪಾಡ್ ಅವರು ಸಂಚಾರಿ ಪೊಲೀಸ್ ಕಾನ್‌ಸ್ಟೇಬಲ್ ಅವರ ಜೊತೆಗೂಡಿ ಸಂಚಾರ ನಿಯಂತ್ರಣ ಮಾಡಿದ್ದಾರೆ. ಹಲವು ಸಮಯ ನಡು ರಸ್ತೆಯಲ್ಲಿ ನಿಂತು ಸಂಚಾರ ನಿಯಂತ್ರಣ ಮಾಡಿದ ನಂತರ ತಮ್ಮ ಕಾರು ಹತ್ತಿ ಹೊರಟರು.
ಮೊಹಮ್ಮದ್ ನಲಪಾಡ್ ಅವರು ವಿದ್ವತ್ ಎಂಬುವರಿಗೆ ಚರ್ಚ್ ಸ್ಟ್ರೀಟ್‌ನ ಬಾರ್ ಒಂದರಲ್ಲಿ ಹಲ್ಲೆ ಮಾಡಿ ಭಾರಿ ಸುದ್ದಿ ಆಗಿದ್ದರು. ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ನಲಪಾಡ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಮೊಹಮ್ಮದ್ ನಲಪಾಡ್ ಅವರು ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಅವರ ಮಗ.












Click it and Unblock the Notifications