ಬೆಂಗಳೂರು: ಒತ್ತುವರಿ ತೆರವಿಗೆ ಶಾಸಕರ ರಿಯಲ್ ಎಸ್ಟೇಟ್ ಸಹಭಾಗಿತ್ವವೇ ಅಡ್ಡಿ
ಬೆಂಗಳೂರು ಸೆಪ್ಟಂಬರ್ 09: ಬೆಂಗಳೂರು ಜಲಮೂಲಗಳ ಒತ್ತುವರಿ ತೆರವುಗೊಳಿಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಿರುವುದು ಇದೇ ಮೊದಲೇನಲ್ಲ. ಹೀಗಿದ್ದರೂ ಒತ್ತುವರಿ ತೆರವು ಮಾತ್ರ ಆಗುತ್ತಿಲ್ಲ. ಇದಕ್ಕೆ ನಗರವನ್ನು ಪ್ರತಿನಿಧಿಸುವ 27ಶಾಸಕರ ಪೈಕಿ ಹಲವರು ರಿಯಲ್ ಎಸ್ಟೇಟ್ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿರುವುದೇ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೌದು ಸರ್ಕಾರ ಪ್ರತಿ ಭಾರಿಯು ನಗರದಲ್ಲಿ ಮಳೆಗಾಲದಲ್ಲಿ, ಇಲ್ಲವೇ ಅನಾಹುತಗಳು ಸಂಭವಿಸಿದಾಗ, ರಾಜಕಾಲುವೆ ವಿಚಾರದ ಬಂದಾಗಲೆಲ್ಲ ಒತ್ತುವರಿ ತೆರವಿನ ಭರವಸೆ ನೀಡುತ್ತದೆ. ಆದರೆ ತೆರವು ಯೋಜನೆ ಅನುಷ್ಠಾನ ತರುವಲ್ಲಿ ಮಾತ್ರ ವಿಫಲವಾಗುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ ಎನ್ನಲಾಗಿದೆ.
ಈ ಬಾರಿ ಮಳೆಗೆ ತುತ್ತಾಗಿ ಹೆಚ್ಚು ಹಾನಿಗೀಡಾದ ಬೊಮ್ಮನಹಳ್ಳಿ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳ ನಿರ್ದೇಶಕ ಮತ್ತು ಪಾಲುದಾರ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಅವರು ತಮ್ಮ ಕಂಪನಿಗಳು ಬೆಂಗಳೂರು ನಗರ ವ್ಯಾಪ್ತಿಯ ಹೊರಗೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದ್ದಾರೆ. ಇನ್ನೂ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಅವರು ರಾಜಕೀಯಕ್ಕೆ ಬರುವ ಮುನ್ನವೇ 'ಲೇಔಟ್ ಕೃಷ್ಣಪ್ಪ' ಎಂಬ ಹೆಸರು ಗಳಿಸಿದ್ದರು. ಅವರು ಅಭಿವೃದ್ಧಿಗೆ ಸಹಾಯ ಮಾಡಿದ ಬಡಾವಣೆಗಳಲ್ಲಿ ಯಾವುದೇ ಅತಿಕ್ರಮಣ ಆರೋಪಗಳಿಲ್ಲ ಎಂದು ತಿಳಿಸಿದ್ದರು.

ಶಾಸಕರ ಮುಖ್ಯ ವ್ಯವಹಾರ ರಿಯಲ್ ಎಸ್ಟೇಟ್
ಅದೇ ರೀತಿ ಚಿಕ್ಕಪೇಟೆಯ ಬಿಜೆಪಿ ಶಾಸಕರಾದ ಉದಯ್ ಬಿ.ಗರುಡಾಚಾರ್ ಅವರು ತಮ್ಮ ಮುಖ್ಯ ವ್ಯವಹಾರ ರಿಯಲ್ ಎಸ್ಟೇಟ್ ಎಂದು ಹೇಳಿಕೊಂಡಿದ್ದರು. ಜತೆಗೆ ಅವರು ತಮ್ಮ ಕ್ಷೇತ್ರದಲ್ಲಿ ಮೂಲಸೌಕರ್ಯ ಕುರಿತಾದ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿರುವುದಾಗಿಯೂ ತಿಳಿಸಿದ್ದರು. ಅಲ್ಲದೇ ರಿಯಲ್ ಎಸ್ಟೇಟ್ ಎಂಬುದು ಕಾನೂನುಬದ್ಧ ಉದ್ಯೋಗ, ಇದರಿಂದ ನಾನು ಜೀವನೋಪಾಯ ಕಂಡಿದ್ದೇವೆ. ವಿಭಿನ್ನವಾಗಿರುವ ರಾಜಕೀಯ ಜನರ ಸೇವೆಗಾಗಿ ಎಂದು ಶಾಸಕ ಉದಯ್ ಗರುಡಾಚಾರ್ ಅಭಿಪ್ರಾಯಪಟ್ಟಿದ್ದಾರೆ.

ಶಾಸಕರ ಮೇಲೆ ಅತಿಕ್ರಮದ ಆರೋಪ
ತಜ್ಞರ ಪ್ರಕಾರ, ಅನೇಕ ಶಾಸಕರ ಮೇಲೆಯೇ ವಿವಿಧ ಪ್ರದೇಶಗಳಲ್ಲಿ ಅತಿಕ್ರಮಣದ ಆರೋಪವಿದೆ. ಅತಿಕ್ರಮಣ ತಡೆ ಸಮಿತಿಗಳು ಸರೋವರ, ಜೌಗು ಪ್ರದೇಶಗಳು, ಜಲಾನಯನ ಪ್ರದೇಶಗಳು ಮತ್ತು ಮಳೆನೀರು ಚರಂಡಿಗಳ ಬಫರ್ ವಲಯಗಳು ಸೇರಿದಂತೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿವೆ. ಈ ಪ್ರಕರಣಗಳು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಗೆ ಬರುತ್ತವೆ ಎಂದು ತಜ್ಞರು, ಒತ್ತುವರಿ ತೆರವು ಕಾರ್ಯಪಡೆ ಮುಖ್ಯಸ್ಥರು ಹೇಳಿದ್ದಾರೆ.

ಒತ್ತುವರಿ ತೆರವಿನ ಕೆಲ ಶಾಸಕರ ಅಡ್ಡಿ
ಅತಿಕ್ರಮಣ ಭೂಮಿ ಮರುಪಡೆಯುವ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರು 2011ರಲ್ಲಿ ವರದಿ ಸಲ್ಲಿಸಿದ್ದರು. ಆದರೆ ಅದು ಅನುಷ್ಠಾನಗೊಂಡಿಲ್ಲ. ಈ ಶಾಸಕರು ಅತಿಕ್ರಮಣಗಳನ್ನು ತೆರವುಗೊಳಿಸಲು ಮತ್ತು ನಗರದ ಜಲಮೂಲಗಳು ಮತ್ತು ಬಫರ್ ವಲಯಗಳ ರಕ್ಷಣೆ ಸೇರಿದಂತೆ ನಗರವನ್ನು ಮೂಲಭೂತ, ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ಸರ್ಕಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರಣದಿಂದಲೇ ಸರ್ಕಾರ ಒತ್ತುವರಿ ತೆರವಿನ ಹೇಳಿಕೆ ಕೇವಲ ಹೇಳಿಕೆಯಾಗಿ, ಭರವಸೆಯಾಗಿಯೇ ಉಳಿಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಉಂಟಾಗಿದೆ.

ಒತ್ತುವರಿಯ ಭೂಮಿಯ ಕಾಲು ಭಾಗ ತೆರವಾಗಿಲ್ಲ
ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 94,000 ಎಕರೆ ಒತ್ತುವರಿ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ಸರ್ಕಾರ ಸುಮಾರು 15,000 ಎಕರೆಗಳನ್ನು ಮಾತ್ರ ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ ಎಂದು ಬಾಲಸುಬ್ರಮಣಿಯನ್ ಮಾಹಿತಿ ನೀಡಿದ್ದಾರೆ.
ದೊರೆತ ಅಂಕಿ ಅಂಶ ನೋಡಿದರೆ ಸರ್ಕಾರದಿಂದ ಒತ್ತುವರಿ ಜಾಗದ ಅರ್ಧದಷ್ಟು ಕೂಡ ರಕ್ಷಿಸಲಾಗಿಲ್ಲ ಎಂಬುದು ತಿಳಿಯುತ್ತದೆ. ಇದಕ್ಕೆ ಬೆಂಗಳೂರು ಪ್ರತಿನಿಧಿಸುವ ಅನೇಕ ಶಾಸಕರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾಲನ್ನು ಹೊಂದಿದ್ದಾರೆ. ಶಾಸಕ ಸತೀಶ್ ರೆಡ್ಡಿ ಅವರನ್ನು ಹೊರತುಪಡಿಸಿದರೆ ಬೇರಾವುದೇ ಶಾಸಕರು ತಮ್ಮ ರಿಯಲ್ ಎಸ್ಟೇಟ್ ಉದ್ಯೋಗ ಬಗ್ಗೆ ಅಧಿಕೃತಪಡಿಸಿಲ್ಲ. ಆದರೆ, ಶಾಸಕರು ರಿಯಲ್ ಎಸ್ಟೇಟ್ ಪಾಲುದಾರಿಕೆಯ ವಾಸ್ತವವನ್ನು ಮರೆಮಾಚಿಲ್ಲ. ಬೆಂಗಳೂರಿನ ಶಾಸಕರ ಪೈಕಿ 11 ಶಾಸಕರು ಕೆಲ ಉದ್ಯಮಗಳನ್ನು ತಮ್ಮ ವೃತ್ತಿ ಎಂದು ಘೋಷಿಸಿದ್ದು, ಅದರಲ್ಲಿ ರಿಯಲ್ ಎಸ್ಟೇಟ್ ಸಹ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಕೆಲ ಜನಪ್ರತಿನಿಧಿಗಳು ಲೇಔಟ್ ಅಭಿವೃದ್ಧಿಯಲ್ಲಿ ತೊಡಗಿದ್ದರೆ, ಇನ್ನು ಕೆಲವರು ನಿರ್ಮಾಣ ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆದರೆ ಇದು ಬಹಿರಂಗವಾಗಿಲ್ಲ. ಅವರು ನಗರದ ಅಭಿವೃದ್ಧಿಗಿಂತ ತಮ್ಮ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ನಗರದ ಒಳಿತಿಗಾಗಿ ಸರ್ಕಾರಕ್ಕೆ ಈ ಶಾಸಕರು ಸೂಕ್ತವಾಗಿ ಸಹಕರಿಸಬೇಕಿದೆ ಎಂಬುದು ಜನರ ಆಶಯವಾಗಿದೆ.












Click it and Unblock the Notifications