ಮಾಯಕೊಂಡ ಕ್ಷೇತ್ರದ ಶಾಸಕರ ಪುತ್ರಿ ನಾಪತ್ತೆ, ದೂರು
ಬೆಂಗಳೂರು, ಮಾರ್ಚ್ 08 : ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ನಾಪತ್ತೆಯಾಗಿದ್ದಾರೆ. ಪುತ್ರಿ ನಾಪತ್ತೆಯಾಗಿರುವ ಕುರಿತು ಶಾಸಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಶಿವಮೂರ್ತಿ ನಾಯ್ಕ್ ಪುತ್ರಿ ಲಕ್ಷ್ಮೀ ನಾಯಕ್ ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ ಎಂದು ಯಲಹಂಕ ನ್ಯೂಟೌನ್ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ. ಪುತ್ರಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಶಿವಮೂರ್ತಿ ನಾಯ್ಕ್ ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕರು. ಲಕ್ಷ್ಮೀ ನಾಯಕ್ ಅವರಿಗೆ ಮದುವೆ ನಿಶ್ಚಯವಾಗಿತ್ತು.
'ಮಾಸ್ತಿಗುಡಿ' ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರನ್ನು ಪ್ರೀತಿಸುತ್ತಿದ್ದೇನೆ, ಅವರನ್ನು ವಿವಾಹವಾಗುತ್ತೇನೆ ಎಂದು ಲಕ್ಷ್ಮೀ ನಾಯಕ್ ಸ್ನೇಹಿತೆಯರ ಜೊತೆ ಹೇಳಿದ್ದರು ಎಂದು ತಿಳಿದುಬಂದಿದೆ.

ಬುಧವಾರ ಸಂಜೆಯಿಂದ ಲಕ್ಷ್ಮೀ ನಾಯಕ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಆಕೆಯನ್ನು ಹುಡುಕಿಕೊಡಿ ಎಂದು ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಮೈಸೂರಿಗೆ ಹೋಗಿದ್ದರು : ಸುಂದರ್ ಗೌಡ ಮತ್ತು ಲಕ್ಷ್ಮೀ ನಾಯ್ಕ್ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬುಧವಾರ ಮೈಸೂರಿಗೆ ಹೋಗುವುದಾಗಿ ಸ್ನೇಹಿತರ ಬಳಿ ಲಕ್ಷ್ಮೀ ಹೇಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರು ದೂರು ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ. ಮೈಸೂರಿಗೂ ತೆರಳಿ ತನಿಖೆ ನಡೆಸಲು ತಂಡವನ್ನು ರಚನೆ ಮಾಡಲಾಗಿದೆ. ಮೈಸೂರು ಪೊಲೀಸರ ಸಹಕಾರವನ್ನು ಪಡೆಯಲಾಗುತ್ತದೆ.












Click it and Unblock the Notifications