ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ ಶಾಸಕ ಎಸ್.ರಘುಗೆ ಕುಕ್ಕರ್ ಹಂಚುವ ಸ್ಥಿತಿ ಬರುತ್ತಿರಲಿಲ್ಲ: ಎಎಪಿ
ಬೆಂಗಳೂರು, ಜನವರಿ 20: ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಕಡೆಗಣಿಸಿದ್ದರಿಂದಲೇ ಚುಣಾವಣೆ ಸಮೀಪಿಸುತ್ತಿದ್ದಂತೆ ಶಾಸಕ ರಘು ಅವರು ಕುಕ್ಕರ್ ಮೊರೆ ಹೋಗಿದ್ದಾರೆ. ಕ್ಷೇತ್ರದಲ್ಲಿ ಕುಕ್ಕರ್ ತಂದು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಕಿಡಿ ಕಾರಿದೆ.
ಬೆಂಗಳೂರಿನಲ್ಲಿ ಗುರುವಾರ ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಾಧ್ಯಕ್ಷ ಮೋಹನ್ ದಾಸರಿ ಅವರು, ಕ್ಷೇತ್ರದ ಮತದಾರರಿಗೆ ಹಂಚಲು ಎಸ್.ರಘು ತಂದಿರುವ ಕುಕ್ಕರ್‌ವೊಂದನ್ನು ಪ್ರದರ್ಶಿಸಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ ಕುಕ್ಕರ್ ಹಂಚುವ ಸ್ಥಿತಿ ಶಾಸಕ ಎಸ್.ರಘು ಅವರಿಗೆ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಸರ್ ಸಿ.ವಿ.ರಾಮನ್ ಕ್ಷೇತ್ರದ ಅಭಿವೃದ್ಧಿಯನ್ನು ಶಾಸಕರು ಕಡೆಗಣಿಸುತ್ತಲೇ ಬಂದರು. ಈಗ ಅವರಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಕುಕ್ಕರ್ ಮೊರೆ ಹೋಗಿದ್ದಾರೆ. ಮತದಾರರಿಗೆ ಆಮಿಷವೊಡ್ಡಲು ಹಲವು ಕಂಟೈನರ್ ವಾಹನಗಳಲ್ಲಿ ಕುಕ್ಕರ್‌ಗಳನ್ನು ತಂದು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ನಿಂಬಂಧನೆಗಳ ಪ್ರಕಾರ ಇದು ಅಪರಾಧವಾಗಿದೆ. ಹೀಗಿದ್ದರು ಕುಣಿಗಲ್‌ನಲ್ಲಿ ಇಂತಹದ್ದೇ ಪ್ರಕರಣದಲ್ಲಿ ದಾಳಿ ಮಾಡಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳು, ಸರ್ ಸಿ.ವಿ.ರಾಮನ್ ಕ್ಷೇತ್ರದಲ್ಲಿ ಏಕೆ ದಾಳಿ ಮಾಡುತ್ತಿಲ್ಲ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಭಾರೀ ಪ್ರಮಾಣದಲ್ಲಿ ಆಮಿಷವೊಡ್ಡಲು ಸಜ್ಜಾಗುತ್ತಿರುವ ಶಾಸಕ ರಘುರವರಿಗೆ ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತಿದೆ? ಅವರಿಗೆ ಸಿಗುತ್ತಿರುವ ಸಂಬಳದಿಂದ ಇವೆಲ್ಲ ಸಾಧ್ಯವೇ? ಅಥವಾ 40ಪರ್ಸೆಂಟ್ ಕಮಿಷನ್ ಹಣದಲ್ಲಿ ಆಮಿಷವೊಡ್ಡಿ ಚುನಾವಣೆ ಗೆದ್ದು ಮತ್ತಷ್ಟು ಕಮಿಷನ್ ಲೂಟಿ ಮಾಡುವ ಯೋಜನೆ ಇದೆಯಾ? ಎಂದರು.
ಬಿಜೆಪಿ ವಿರೋಧಿ ಅಲೆ
ಸಿ.ವಿ.ರಾಮನ್ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆಯಿರುವುದನ್ನು ಗಮನಿಸಿದ ಅವರು ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕೆಂದು ಎಲ್ಲ ಕುಟಿಲ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಜನರು ಕೊಟ್ಟ ಅಧಿಕಾರವನ್ನು ಜನರ ಹಿತಕ್ಕಾಗಿ ಬಳಸಿಕೊಂಡಿದ್ದರೆ ಅವರಿಗೆ ಇಂದು ಕುಕ್ಕರ್ ಹಂಚಿ ಮತ ಸೆಳೆಯುವ ಸ್ಥಿತಿ ಬಂದಿದೆ ಎಂದು ತಿಳಿಸಿದರು.

ಬಿಜೆಪಿಯು ಅಧಿಕಾರಕ್ಕೆ ಬಂದಿರುವುದರ ಹಿಂದೆ ಇಂತಹ ಆಮಿಷಗಳು, ಸುಳ್ಳು ಭರವಸೆಗಳು, ಕೋಮು ದ್ವೇಷದ ರಾಜಕೀಯ, ಆಪರೇಷನ್ ಕಮಲ ಮುಂತಾದ ಅನೇಕ ಕಳ್ಳ ಮಾರ್ಗ ಸೃಷ್ಟಿಯಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತೀ ದೊಡ್ಡ ಸವಾಲಾಗಿ ಬಿಜೆಪಿ ಪರಿಣಮಿಸಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಆಮಿಷಗಳಿಗೆ ಮರುಳಾಗದೇ ಪ್ರಾಮಾಣಿಕ ಹಾಗೂ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನರು ಪಣತೊಡಬೇಕು ಎಂದು ಅವರು ಕರೆ ನೀಡಿದರು.











Click it and Unblock the Notifications