ವಿಧಾನಸಭೆ ಚುನಾವಣೆ 2023: ಜೆಡಿಎಸ್‌ನಿಂದ 'ಮಿಷನ್ 123'
ಬೆಂಗಳೂರು, ಆಗಸ್ಟ್ 12: "2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಗುರಿ ಏನಿದ್ದರೂ 123 ಮಾತ್ರ. 2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ರಾಷ್ಟ್ರೀಯ ಪಕ್ಷಗಳಿಗೆ ಪ್ರಾದೇಶಿಕ ಪಕ್ಷ ಜೆಡಿಎಸ್ ಕಂಡರೆ ಭಯವಿದೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
"ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಶಿಸಿ ಹೋಗಿದೆ ಎನ್ನುವವರಿಗೆ ಮುಂದಿನ ರಾಜ್ಯ ರಾಜಕಾರಣ ಜೆಡಿಎಸ್‌ನಿಂದಲೇ ಉಳಿಯಲಿದೆ ಎಂದು ಉತ್ತರ ಕೊಡಬಯಸುತ್ತೇನೆ. ರಾಜ್ಯದ ಮುಂದಿನ ರಾಜಕಾರಣದಲ್ಲಿ ಜೆಡಿಎಸ್ ಪಕ್ಷ ರಾರಾಜಿಸಲಿದೆ ಎಂಬ ಭಾವನೆ ರಾಜ್ಯದ ಜನರಲ್ಲಿದೆ," ಎಂದು ಎಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು ಜೆಡಿಎಸ್ ಪಕ್ಷ ಭರ್ಜರಿ ತಯಾರು ನಡೆಸುತ್ತಿದ್ದು, ಸಭೆಗಳ ಮೇಲೆ ಸಭೆ ಮಾಡುತ್ತಿದೆ. ಗುರುವಾರ ಕಲಬುರಗಿ ವಿಭಾಗದ ಮುಖಂಡರ ಸಭೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಸಲಾಯಿತು. ಸದ್ಯದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಲಾಗಿದೆ.

ಚುನಾವಣಾ ಸಿದ್ಧತಾ ಸಭೆಯ ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, "ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ್ದು ಮಿಷನ್ 123 ಆಗಿದೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ನ ಭಯ ಶುರುವಾಗಿದ್ದು, ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅನ್ನುವ ಭಯ ಅವರಿಗಿದೆ," ಎಂದು ಟಾಂಗ್ ನೀಡಿದರು.
ಕರ್ನಾಟಕದಲ್ಲಿ 2023ಕ್ಕೆ ಜನತಾದಳ ಟಾರ್ಗೆಟ್ ಮಿಷನ್ 123ಯಲ್ಲಿ ಜೆಡಿಎಸ್ ಕೆಲಸ ಮಾಡಲಿದೆ ಎಂದು ತಿಳಿಸಿದ ಅವರು, ಅದು ಹೇಗೆ ಸಾಕಾರವಾಗುತ್ತದೆ ಅಂತ ಕಾದು ನೋಡಿ ಎನ್ನುವ ಮೂಲಕ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದಾರೆ.
ಬಿಜೆಪಿ ಸರ್ಕಾರದ ಸಚಿವ ಖಾತೆ ಕಿತ್ತಾಟದ ನಾಟಕಕ್ಕೆ ಕಿಡಿಕಾರಿದ ಮಾಜಿ ಸಿಎಂ ಕುಮಾರಸ್ವಾಮಿ, "ಬಿಜೆಪಿಯ ಬೆಳವಣಿಗೆಗಳು ನೋಡಿದರೆ ಮುಂದೆ ಯಾರೇ ಸಿಎಂ ಆದರೂ ಮಕ್ಕಳ ಆಟಿಕೆಯಂತೆ ವಾತಾವರಣ ನಿರ್ಮಾಣವಾಗಿದೆ. ಶಿಸ್ತುಬದ್ಧ ಪಕ್ಷದಲ್ಲಿ ಖಾತೆ ಕಿತ್ತಾಟ ನಡೆಯುತ್ತಿರುವುದು ಬಿಜೆಪಿ ಪಕ್ಷದ ಅಪಹಾಸ್ಯಕ್ಕೆ ಕಾರಣವಾಗಿದೆ," ಎಂದು ತಮ್ಮ ಆಕ್ರೋಶ ಹೊರಹಾಕಿದರು.

"ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಯೇ ಎಚ್.ಡಿ. ಕುಮಾರಸ್ವಾಮಿ ಕಾಲದಲ್ಲಿ ಹೆಚ್ಚಿನ ಕೆಲಸ ಆಗುತ್ತಿದ್ದವು. ಅಲ್ಲದೆ ಗೌರವ ಸಿಗುತ್ತಿತ್ತು ಅಂತ ಹೇಳಿದ್ದಾರೆ. ನಮ್ಮದೇ ಸರ್ಕಾರ ಇದ್ದರೂ ಕೆಲಸ ಆಗುತ್ತಿಲ್ಲ. ಹೀಗೆ ಬಿಜೆಪಿ ಹಲವಾರು ಶಾಸಕರಲ್ಲಿ ಅದೇ ಭಾವನೆ ಇದೆ. ನನ್ನ ಕಾಲದಲ್ಲಿ ನಾನು ಎಲ್ಲರಿಗೂ ಗೌರವ ಕೊಡುತ್ತಿದ್ದೆ," ಎಂದು ಮಾಜಿ ಸಿಎಂ ಎಚ್‌ಡಿಕೆ ಹೇಳಿದರು.
"ಈಗಿನ ಬಿಜೆಪಿ ಸರ್ಕಾರ ರಕ್ಷಣೆ ಪಡೆಯಲು ಜೆಡಿಎಸ್ ಪಕ್ಷವನ್ನು ಬಳಸಿಕೊಳ್ಳುತ್ತಿದೆ. ಯಾವ ಪಕ್ಷ ರಾಜ್ಯದಲ್ಲಿ ಮುಗಿದೇ ಹೋಯ್ತು ಅಂತ ಹೇಳಿದರೋ ಅದೇ ಪಕ್ಷದ ವ್ಯಕ್ತಿಗಳು ಮುಂದಿನ ರಾಜಕಾರಣ ಜೆಡಿಎಸ್‌ನಿಂದಲೇ ಉಳಿಯುತ್ತೆ ಅನ್ನುವ ಭಾವನೆ ಇಟ್ಟುಕೊಂಡಿದ್ದಾರೆ. ಈ ಸರ್ಕಾರ ಉಳಿಬೇಕಾದರೆ ಜೆಡಿಎಸ್ ಇದೆ ಅನ್ನುವ ಗುಮ್ಮ ಬಿಟ್ಟುಕೊಂಡು ಕೆಲವರು ಮಾತನಾಡುತ್ತಿದ್ದಾರೆ."
"ಬಂಡಾಯ ಶಾಸಕರಿಗೆ ನೀವೇನಾದರೂ ಮಾಡಿದರೆ, ರಾಜೀನಾಮೆ ನೀಡುತ್ತೇವೆ ಅಂತ ಹೇಳಿದರೆ, ಜೆಡಿಎಸ್ ರಕ್ಷಣೆಗೆ ಇದೆ ಅಂತ ಮಾತನಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ನೆರಳು, ಜೆಡಿಎಸ್ ಪಕ್ಷದ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡುವ ಅನಿವಾರ್ಯ ಉಂಟಾಗಿದೆ," ಎಂದು ಬಿಜೆಪಿಗೆ ತಿರುಗೇಟು ನೀಡಿದರು.

"ಬಿಜೆಪಿಗೆ ಬೆಂಬಲ ಕೊಡುವ ಪರಿಸ್ಥಿತಿ ಬಂದರೆ ಆ ಸಮಯದಲ್ಲಿ ತೀರ್ಮಾನ ಮಾಡುತ್ತೇವೆ. ಈಗ ಅದರ ಬಗ್ಗೆ ನಾನು ಮಾತಾಡಲ್ಲ. ಆ ಸಮಯ ಬಂದಾಗ ಮಾತಾಡ್ತೀನಿ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
Recommended Video
"ದೇವೇಗೌಡರು ಹೇಳಿರುವ ಬೆಂಬಲದ ವಿಷಯವೇ ಬೇರೆ. ನಮ್ಮ ಜೆಡಿಎಸ್ ಪ್ರಾದೇಶಿಕ ನೆಲಗಟ್ಟು ಹೊಂದಿರುವ ಪಕ್ಷ. ಬೆಂಗಳೂರು, ಉತ್ತರ ಕರ್ನಾಟಕದ ಜನರಿಗೆ ನೀರಾವರಿ ಕೊಡುಗೆ ಕೊಟ್ಟವರು ದೇವೇಗೌಡರು. ಆದರೆ ಜನ ಕಾಂಗ್ರೆಸ್, ಬಿಜೆಪಿಗೆ ಮತ ಹಾಕುತ್ತಾರೆ, ಜೆಡಿಎಸ್ ಮರೆಯುತ್ತಾರೆ."
"ಬೆಂಗಳೂರು ಜನ ಕಾವೇರಿ ನೀರು ಕುಡಿಯುತ್ತಿದ್ದರೆ ಅದು ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ. ಇದನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಜನರು ಈಗಲಾದರೂ ಎಚ್ಚೆತ್ತುಕೊಳ್ಳಲಿ. ರಾಷ್ಟ್ರೀಯ ಪಕ್ಷಗಳಿಂದ ನಾಡಿಗೆ ಅಪಮಾನ ಆಗುತ್ತಿದೆ. ಇದಕ್ಕೆ ಜನ ಅವಕಾಶ ಕೊಡಬೇಡಿ," ಎಂದು ಎಚ್‌ಡಿಕೆ ಮನವಿ ಮಾಡಿದರು.












Click it and Unblock the Notifications