ಚಕ್ಕರ್ ಹಾಕುತ್ತಿದ್ದ ಸಚಿವರು ಬೆಂಗಳೂರು ಕಚೇರಿಗೆ ಹಾಜರ್!
ಬೆಂಗಳೂರು, ಜುಲೈ 01: ಕೊರೊನಾವೈರಸ್ ಸೋಂಕಿನಿಂದ ಸಾವಿರಾರು ಜನರು ನಿತ್ಯ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದರೆ, ನೂರಾರು ಮಂದಿ ಸಾವಿನ ಮನೆ ಸೇರುತ್ತಿದ್ದರು. ಸಾಂಕ್ರಾಮಿಕ ಪಿಡುಗಿನ ನಡುವೆ ಜನರ ಕೈಗೆ ಸಿಗಬೇಕಾದ ಸಚಿವರು ಸ್ವತಃ ತಮ್ಮದೇ ಪಕ್ಷದ ಶಾಸಕರ ಕೈಗೇ ಸಿಗುತ್ತಿರಲಿಲ್ಲ.
ಬೆಂಗಳೂರಿನ ಕಚೇರಿಗಳಿಂದ ಅಂತರ ಕಾಯ್ದುಕೊಂಡಿದ್ದ ಸಚಿವರಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರತಿ ಗುರುವಾರ ಕಚೇರಿಗೆ ಭೇಟಿ ನೀಡುವಂತೆ ನೀಡಿದ ಸೂಚನೆಯಿಂದ ಎಚ್ಚೆತ್ತುಕೊಂಡ ಹಲವು ಸಚಿವರು ತಮ್ಮ ಕಚೇರಿಗೆ ಹಾಜರ್ ಆಗಿದ್ದರು.
ಜುಲೈ 01ರ ಗುರುವಾರ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಉಮೇಶ್ ಕತ್ತಿ, ಸಚಿವ ಎಸ್ ಟಿ ಸೋಮಶೇಖರ್, ಸಚಿವ ಸಿ ಪಿ ಯೋಗೇಶ್ವರ್, ಸಚಿವ ಭೈರತಿ ಬಸವರಾಜು ಹಾಗೂ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ತಮ್ಮ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದರು.

ಸಚಿವರ ಕಚೇರಿ ಭೇಟಿ ಹಿಂದಿನ ಕಥೆ:
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಬಂಡಾಯ ಬಾವುಟ ಹಾರಿಸಿದ ಒಂದು ಬಣ ನಾಯಕತ್ವ ಬದಲಾವಣೆ ಕೂಗು ಎತ್ತಿತ್ತು. ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾದ ಬಂಡಾಯದ ಕೂಗು ಶಮನಕ್ಕಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕಚೇರಿಯಿಂದ ದೂರ ಉಳಿದ ಸಚಿವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಪ್ರತಿ ಗುರುವಾರ ಶಾಸಕರ ಭೇಟಿಗೆ ಅವಕಾಶ ನೀಡಬೇಕು. ತಪ್ಪದೇ ತಮ್ಮ ತಮ್ಮ ಕಚೇರಿಗಳಲ್ಲಿ ಹಾಜರ್ ಇರುವಂತೆ ಸೂಚನೆ ನೀಡಿದ್ದರು.
ಕೈಗೆ ಸಿಗದ ಸಚಿವರ ವಿರುದ್ಧ ಸಿಎಂಗೆ ದೂರು:
ರಾಜ್ಯ ಸರ್ಕಾರದ ಸಚಿವರು ನಮ್ಮದೇ ಪಕ್ಷದ ಶಾಸಕರ ಕೈಗೆ ಸಿಗುತ್ತಿಲ್ಲ ಎಂದು ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಆರೋಪದ ಬೆನ್ನಲ್ಲೇ ಸ್ವತಃ ಸಿಎಂ ಬಿ ಎಸ್ ಯಡಿಯೂರಪ್ಪ ಕೂಡ ಗರಂ ಆಗಿದ್ದರು. ಈ ಹಿನ್ನೆಲೆ ಬೆಂಗಳೂರಿನಲ್ಲಿ ಇರುವ ಸಚಿವರಾದರೂ ಪ್ರತಿ ಗುರುವಾರ ಕಚೇರಿಗಳಲ್ಲಿ ಹಾಜರ್ ಇರತಕ್ಕದ್ದು ಎಂದು ಸೂಚನೆ ನೀಡಿದ್ದರು ಎಂದು ಹೇಳಲಾಗುತ್ತಿದೆ.












Click it and Unblock the Notifications