ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದೇನು?
ಬೆಂಗಳೂರು, ಜನವರಿ 24: ಸ್ನೇಹಿತರಂತಿದ್ದ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಮತ್ತು ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮಧ್ಯೆ ತೀವ್ರ ಆರೋಪ ಪ್ರತ್ಯಾರೋಪಗಳು ನಡೆದಿವೆ. ಇವರಿಬ್ಬರು ಬಿಜೆಪಿ ನಾಯಕರಾಗಿದ್ದು, ಇವರ ಜಗಳ ಕಾಂಗ್ರೆಸ್‌ಗೆ ವರದಾನವಾಗಿದೆ. ಇತ್ತಿಚೆಗೆ ಜನಾರ್ಧನ್ ರೆಡ್ಡಿ ಅವರು ಶ್ರೀರಾಮುಲು ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ದೂರಿದ್ದರು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಪಕ್ಷದ್ದು, ಮನೆಯೊಂದು ಮೂರು ಬಾಗಿಲಲ್ಲ, ಬದಲಿಗೆ 6 ಬಾಗಿಲು ಎಂದು ಅವರು ವ್ಯಂಗ್ಯವಾಡಿದ್ದಾರೆ. ಮಾಜಿ ಸಚಿವ ಶ್ರೀರಾಮುಲು ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸಲಾಗುವುದು. ಅವರನ್ನು ಸ್ವಾಗತಿಸುವುದು ಆಡಳಿತ ಪಕ್ಷ ಕಾಂಗ್ರೆಸ್ ಅಧ್ಯಕ್ಷರು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ. ವೈಯಕ್ತಿಕವಾಗಿ ರಾಮುಲು ಕಾಂಗ್ರೆಸ್ ಗೆ ಸೇರ್ಪಡೆಗೊಂಡರೆ ಸ್ವಾಗತ ಎಂದು ಅವರು ಹೇಳಿದರು.

ರೆಡ್ಡಿಯವರ ಸುಳ್ಳಿನ ಕಂತೆ ಬಿಟ್ಟಿಟ್ಟಿದ್ದಾರೆ ಶ್ರೀರಾಮುಲು
ಕಾಂಗ್ರೆಸ್‌ನಲ್ಲಿ ಶ್ರೀರಾಮುಲು ಅವರಿಗೆ ಬಾಗಿಲು ತೆರೆದಿದ್ದು, ಬಂದರೆ ಕಾಂಗ್ರೆಸ್ ಸ್ವಾಗತಿಸಲಿದೆ ಎಂಬ ಮಾತುಗಳು ಸಚಿವರ ಮಾತಿನಿಂದ ನಿಜ ಎನ್ನಿಸುತ್ತಿದೆ. ಮುಂದುವರೆದು ಮಾತನಾಡಿದ ಸಚಿವರು ಜನಾರ್ದನ್ ರೆಡ್ಡಿ ಅವರು ಸುಳ್ಳಿನ ಮನೆಯನ್ನು ಕಟ್ಟುತ್ತಿದ್ದಾರೆ ಎಂದು ಈ ಹಿಂದೆ ಹಲವು ಬಾರಿ ನಾನು ಹೇಳಿದ್ದೆ. ಇದೀಗ ಶ್ರೀರಾಮುಲು ಅವರು ರೆಡ್ಡಿಯವರ ಸುಳ್ಳಿತನ ಕಂತೆ ಬಗ್ಗೆ ಎಳೆ- ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮಾಜಿ ಸಚಿವ ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ ಅವರು ಹಲವು ವರ್ಷಗಳ ಸ್ನೇಹಿತರು. ಇದೀಗ ಅವರವರ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿನ ವಾಸ್ತವ ಸತ್ಯಾಂಶಗಳು ನಾಡಿನ ಜನರೆಲ್ಲರಿಗೂ ಇದೀಗ ತಿಳಿಯುತ್ತಿದೆ ಎಂದು ಅವರು ತೀಕ್ಷ್ಣವಾಗಿ ಹೇಳಿದರು.
ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ವರದಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರಕ್ಕೆ ಯಾವುದೇ ಭಯ ಇಲ್ಲ. ಈ ಹಿಂದೆ ವರದಿಯನ್ನು ಸ್ವೀಕಾರ ಮಾಡಿಲ್ಲ ಎಂದು ಹೇಳುತ್ತಿದ್ದರು. ಇದೀಗ ಸರ್ಕಾರ ವರದಿಯನ್ನು ಸ್ವೀಕಾರ ಮಾಡಿದ್ದು, ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ತರಲಾಗುವುದು. ಇಲ್ಲಿ ತನಕ ನಾವು ಯಾರು ವರದಿಯನ್ನು ನೋಡಿಲ್ಲ. ಈ ಬಗ್ಗೆ ಅನಗತ್ಯವಾಗಿ ಸುಳ್ಳು ಅಂಕಿ ಅಂಶವನ್ನು ಹೇಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ವದರಿ ಬಗ್ಗೆ ಪರ- ವಿರೋಧ ಇರುವುದು ಸಹಜ. ವರದಿಯನ್ನು ಯಾರು ನೋಡಿಯೇ ಇಲ್ಲ, ಮೊದಲೇ ವಿರೋಧ ಏಕೆ? ಎಂದು ಸಚಿವರು ಮಾರ್ಮಿಕವಾಗಿ ಪ್ರಶ್ನಿಸಿದರು.












Click it and Unblock the Notifications