ಅನ್ನಭಾಗ್ಯ ಯೋಜನೆ: ಹಣ ವರ್ಗಾವಣೆಗೆ ಸೋಮವಾರ ಸಿಎಂ ಸಿದ್ದರಾಮಯ್ಯ ಚಾಲನೆ
ಬೆಂಗಳೂರು, ಜುಲೈ 8: ಅನ್ನ ಭಾಗ್ಯ ಯೋಜನೆಯಡಿ ನೇರ ಲಾಭ ವರ್ಗಾವಣೆಗೆ (ಡಿಬಿಟಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಜೆ ಚಾಲನೆ ನೀಡಲಿದ್ದಾರೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದ್ದಾರೆ.
15 ದಿನಗಳಲ್ಲಿ ಸಂಪೂರ್ಣ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು ಎಂದು ಸಚಿವ ಮುನಿಯಪ್ಪ ಹೇಳಿದರು. ಜುಲೈ 10 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಮುನಿಯಪ್ಪ ನಗರ ಹೊರವಲಯದ ದೇವನಹಳ್ಳಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅನ್ನಭಾಗ್ಯ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. 15 ದಿನಗಳಲ್ಲಿ ಪ್ರತಿಯೊಬ್ಬ ಫಲಾನುಭವಿಗೂ ಹಣ ಸಿಗಲಿದೆ ಎಂದು ಅವರು ಭರವಸೆ ನೀಡಿದರು.
ಬಿಪಿಎಲ್ ಕಾರ್ಡ್ ಪ್ರತಿ ಸದಸ್ಯರಿಗೆ 170 ರೂಪಾಯಿ
ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದು ಕಾಂಗ್ರೆಸ್ ಸರ್ಕಾರದ ಐದು ಚುನಾವಣಾ ಪೂರ್ವ ಭರವಸೆಗಳಲ್ಲಿ ಒಂದಾಗಿತ್ತು. ಸದ್ಯ ಹೆಚ್ಚುವರಿ ಅಕ್ಕಿ ಲಭ್ಯವಿಲ್ಲದ ಕಾರಣ ಹಣ ಹಾಕುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಪ್ರತಿ ಕೆ.ಜಿ. ಅಕ್ಕಿಗೆ 34 ರೂಪಾಯಿಗಳಂತೆ 170 ರೂಪಾಯಿ ನೀಡಲುನಿರ್ಧರಿಸಲಾಗಿದೆ.
ಮುನಿಯಪ್ಪ ಮಾತನಾಡಿ, ರಾಜ್ಯದ ಅಕ್ಕಿ ಪಡೆಯಲು ಯತ್ನಿಸಿದರೂ ಕೇಂದ್ರ ನೀಡಲಿಲ್ಲ. ಕರ್ನಾಟಕವೂ ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳನ್ನು ಸಂಪರ್ಕಿಸಿದರೂ ದರ ಹೆಚ್ಚಿತ್ತು. ಅದರಂತೆ ಅಕ್ಕಿ ಲಭ್ಯವಾಗುವವರೆಗೆ ಅಕ್ಕಿಯ ಬದಲಿಗೆ ಹಣ ಪಾವತಿಸಲು ರಾಜ್ಯ ನಿರ್ಧರಿಸಿದೆ ಎಂದು ಸಚಿವರು ಹೇಳಿದರು.
ಬಿಪಿಎಲ್ ಕಾರ್ಡ್‌ನಲ್ಲಿ ಇರುವ ಎಲ್ಲರಿಗೂ ಹಣ
ಬಿಪಿಎಲ್ ಕಾರ್ಡ್‌ನಲ್ಲಿ ಹೆಸರು ಇರುವ ಕುಟುಂಬದ ಎಲ್ಲಾ ಸದಸ್ಯರಿಗೂ 170 ರೂಪಾಯಿಗಳಂತೆ ಹಣ ಹಾಕಲಾಗುತ್ತದೆ. ಒಬ್ಬರ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದಾಗಿ ಸಚಿವ ಮುನಿಯಪ್ಪ ಹೇಳಿದ್ದಾರೆ. ಅಕ್ಕಿ ದೊರೆಯುವವರೆಗೂ ಮಾತ್ರವೇ ಹಣ ಹಾಕುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಅಕ್ಕಿಯ ದೊರೆತ ನಂತರ ಮುಂದಿನ ದಿನಗಳಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿಗೆ 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿದ್ದಾರೆ.
ಕುಟುಂಬದ ಮುಖ್ಯಸ್ಥರನ್ನು ಗುರುತಿಸಿರುವ, ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತವೆ ಎಂದು ಹೇಳಲಾಗಿದೆ.
ಹಣವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ ನಂತರ ಪ್ರತಿ ಫಲಾನುಭವಿ/ ಕುಟುಂಬಕ್ಕೆ ಮೊಬೈಲ್ ಎಸ್‌ಎಂಎಸ್ ಮತ್ತು ವಾಟ್ಸಪ್ ಮುಖಾಂತರ ಮಾಹಿತಿ ತಲುಪಲಿದೆ.












Click it and Unblock the Notifications