Namma Metro Yellow Line: ಇನ್ಫೋಸಿಸ್ ಉದ್ಯೋಗಿಗಳಿಗೆ ಸಿಹಿ ಸುದ್ದಿ
ನಮ್ಮ ಮೆಟ್ರೋ ಯೆಲ್ಲೋ ಮಾರ್ಗದಲ್ಲಿ ರೈಲು ಸಂಚಾರ ಯಾವಾಗ ಆರಂಭವಾಗುತ್ತದೆ ಎನ್ನುವ ಕಾತರ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗಾಗಲೇ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿರಬೇಕಿತ್ತು. ಆದರೆ ರೈಲುಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವ ಕಾರಣ ಈ ಮಾರ್ಗದಲ್ಲಿ ರೈಲು ಸೇವೆ ಆರಂಭವಾಗಲು ಇನ್ನೂ ಕೆಲವು ತಿಂಗಳು ಕಾಯಬೇಕಾಗುತ್ತದೆ.
ಆರ್‌ವಿ ರಸ್ತೆ - ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ರೇಖೆ ಆರಂಭಗೊಂಡರೆ ಪ್ರಮುಖ ಐಟಿ ಕಂಪನಿಗಳಿಗೆ ಸಂಪರ್ಕ ಸುಲಭವಾಗುತ್ತದೆ. ಸಾವಿರಾರು ಐಟಿ ಉದ್ಯೋಗಿಗಳ ಸಮಯ ಉಳಿತಾಯವಾಗುತ್ತದೆ. ಪ್ರಮುಖ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಉದ್ಯೋಗಿಗಳಿಗೆ ಭಾರಿ ಅನುಕೂಲವಾಗಲಿದೆ. ಇನ್ಫೋಸಿಸ್ ಉದ್ಯೋಗಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು ಇನ್ಫೋಸಿಸ್ ಎಲೆಕ್ಟ್ರಾನಿಕ್ಸ್ ಸಿಟಿ ಕ್ಯಾಂಪಸ್‌ನಲ್ಲಿರುವ ಉದ್ಯೋಗಿಗಳು ಮೆಟ್ರೋ ನಿಲ್ದಾಣಕ್ಕೆ ನೇರ ಪ್ರವೇಶ ಪಡೆಯಬಹುದಾಗಿದೆ.

ಮನಿಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಈಗ ಮುಗಿದಿರುವ ಮೆಟ್ರೋ ಪ್ಲಾಜಾ, ಇನ್ಫೋಸಿಸ್ ಫೌಂಡೇಶನ್ ಅನುದಾನದಡಿ ನಿರ್ಮಾಣವಾಗಿರುವ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ನೇರವಾಗಿ ಇನ್ಫೋಸಿಸ್ ಕ್ಯಾಂಪಸ್‌ಗೆ ಪ್ರವೇಶ ನೀಡುತ್ತದೆ. ಉದ್ಯೋಗಿಗಳು ಇನ್ಫೋಸಿಸ್ ಕ್ಯಾಂಪಸ್‌ಗೆ ಪ್ರವೇಶಿಸು ಮತ್ತು ನಿರ್ಗಮಿಸುವ ಮೊದಲು ಈ ಪ್ಲಾಜಾದಲ್ಲಿ ತಮ್ಮ ಕಾರ್ಡ್‌ಗಳನ್ನು ಸ್ವೈಪ್ ಮಾಡಿ ಅಲ್ಲಿಂದ ನೇರವಾಗಿ ಮೆಟ್ರೋ ನಿಲ್ದಾಣಕ್ಕೆ, ಇನ್ಫೋಸಿಸ್ ಕ್ಯಾಂಪಸ್‌ಗೆ ತೆರಳಬಹುದು ಎಂದು ಮೂಲಗಳು ತಿಳಿಸಿವೆ.
ಉದ್ಯೋಗಿಗಳ ಸಮಯ ಉಳಿತಾಯ
ಇನ್ಫೋಸಿಸ್ ಈ ಮೆಟ್ರೋ ಪ್ಲಾಜಾ ನಿರ್ಮಾಣಕ್ಕೆ ಅನುದಾನ ನೀಡಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ಸಂಸ್ಥೆಯ ಉದ್ಯೋಗಿಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ಗುರಿ ಹೊಂದಿದ್ದು, ಸಾರ್ವಜನಿಕರಿಗೆ ಪ್ರತ್ಯೇಕ ಪ್ರವೇಶ ಹೊಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮನಿ ಕಂಟ್ರೋಲ್ ವರದಿ ಮಾಡಿದೆ.
ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ಇನ್ಫೋಸಿಸ್ ಫೌಂಡೇಶನ್ 115 ಕೋಟಿ ರೂಪಾಯಿ ನೀಡಿದೆ. ಇದರಲ್ಲಿ 100 ಕೋಟಿ ರೂಪಾಯಿ ಮೆಟ್ರೊ ನಿಲ್ದಾಣಕ್ಕಾಗಿ ಬಳಕೆಯಾಗಿದ್ದರೆ ಇನ್ನು 15 ಕೋಟಿ ರೂಪಾಯಿ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷತಾ ಪರದೆಗಳನ್ನು ನಿರ್ಮಿಸಲು ಖರ್ಚು ಮಾಡಲಾಗಿದೆ.
ಡಿಸೆಂಬರ್ 2021ರಲ್ಲೇ ಆರಂಭವಾಗಬೇಕಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗವು ಹಲವು ಕಾರಣಗಳಿಂದ 4 ವರ್ಷ ತಡವಾಗಿದೆ. ಡಿಸೆಂಬರ್ 2024ರ ವೇಳೆಗೆ ಆರಂಭವಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದ್ದರೂ ರೈಲುಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. 2025ರ ಜನವರಿ ವೇಳೆಗೆ ಕಾರ್ಯ ನಿರ್ವಹಿಸಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದ್ದರೂ ಈಗಿನ ಪರಿಸ್ಥಿತಿ ನೋಡಿದರೆ ಅದು ಕೂಡ ಅನುಮಾನ ಎನ್ನಲಾಗಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರತಿ ದಿನ 2 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 20 ಸಾವಿರ ಪ್ರಯಾಣಿಕರು ಸಂಚರಿಸುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ 15,000ಕ್ಕಿಂತ ಹೆಚ್ಚಿನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಕಂಪನಿ ಉದ್ಯೋಗಿಗಳಿಗೆ ಹಳದಿ ಮಾರ್ಗ ಹೆಚ್ಚಿನ ಪ್ರಯೋಜನ ನೀಡಲಿದೆ.












Click it and Unblock the Notifications