ಇಂತಹ ಸಂಕಷ್ಟದ ಸಮಯದಲ್ಲೇ ಮೇಕೆದಾಟು ಯೋಜನೆ ನೆರವಾಗಲಿದೆ, ಸಹಕರಿಸಿ: ತಮಿಳುನಾಡಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ
ಬೆಂಗಳೂರು ಆಗಸ್ಟ್ 15: "ಮಳೆ ಕೈಕೊಟ್ಟ ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಲು ಮೇಕೆದಾಟು ಯೋಜನೆ ನೆರವಾಗಲಿದ್ದು, ಈ ಯೋಜನೆ ಜಾರಿಗೆ ಸಹಕಾರ ನೀಡಬೇಕು" ಎಂದು ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ತಮಿಳುನಾಡಿಗೆ ಮನವಿ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;'ನಾವು ತಮಿಳುನಾಡಿಗೆ 10 ಟಿಎಂಸಿ ನೀರನ್ನು ನೀಡಲು ತಯಾರಿದ್ದೇವೆ. ನಾವು ಈಗ ಎಷ್ಟು ನೀರು ಲಭ್ಯವಿದೆಯೊ ಅಷ್ಟು ನೀರನ್ನು ಕೊಟ್ಟಿದ್ದೇವೆ. ನಮ್ಮ ರೈತರಿಗೂ ನೀರನ್ನು ಕೊಟ್ಟಿದ್ದೇವೆ' ಎಂದರು.

'ನೀರು ಹಂಚಿಕೆ ವಿಚಾರವಾಗಿ ಯಾವುದೇ ಗದ್ದಲ ಬೇಡ, ಮಳೆ ಬಂದರೆ ಖಂಡಿತವಾಗಿ ನೀರನ್ನು ಕೊಡುತ್ತೇವೆ. ಕಳೆದ ಬಾರಿ 400 ಟಿಎಂಸಿ ನೀರನ್ನು ಸಮುದ್ರಕ್ಕೆ ಸೇರಿದೆ, ಗೊಂದಲಕ್ಕೆ ಅವಕಾಶ ಬೇಡ ಎಂದು ತಮಿಳುನಾಡಿನ ಬಳಿ ನಾವು ಮನವಿ ಮಾಡಿಕೊಳ್ಳುತ್ತೇವೆ. ಮೇಕೆದಾಟು ಯೋಜನೆ ಜಾರಿ ವಿಚಾರಕ್ಕೂ ನೀವು ಸಹಕಾರ ನೀಡುತ್ತಿಲ್ಲ. ಈ ರೀತಿಯ ಸಂಕಷ್ಟದ ಕಾಲದಲ್ಲಿ ಮೇಕೆದಾಟು ಯೋಜನೆ ನಿಮ್ಮ ಉಪಯೋಗಕ್ಕೆ ಬರುತ್ತದೆ' ಎಂದರು.
ಇದೇ ವೇಳೆ, "ಈ ಸ್ವಾತಂತ್ರ್ಯ ದಿನದಂದು ನಮ್ಮ ಜನರು "ಇಂಡಿಯಾ" ವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು. ದೇಶವನ್ನ ರಕ್ಷಿಸುವ ಸಾಮರ್ಥ್ಯ ಕಾಂಗ್ರೆಸ್ ನಾಯಕತ್ವಕ್ಕೆ ಇದೆ. ಬೆಂಗಳೂರು ಇದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಖಂಡಿತಾ" ಎಂದು ಭವಿಷ್ಯ ನುಡಿದರು.
ಏನಿದು ಮೇಕಾದಾಟು ಯೋಜನೆ?
ಬೆಂಗಳೂರು ನಗರಕ್ಕಿಂತ ಸುಮಾರು 90 ಕಿಲೋ ಮೀಟರ್ ದೂರದಲ್ಲಿರುವ ರಾಮನಗರದ ಜಿಲ್ಲೆಯ ಹನೂರು ಅರಣ್ಯ ವಲಯದ ಗುಡ್ಡೆಯ ನಡುವೆ ಒಂಟಿಗುಂಡು ಸ್ಥಳದಲ್ಲಿ ಹರಿಯುವ ಕಾವೇರಿ ನದಿ ಪ್ರದೇಶಕ್ಕೆ ಮೇಕೆ ದಾಟು ಎಂಬ ಹೆಸರು. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಮಳೆಗಾಲದ ಸಂದರ್ಭದಲ್ಲಿ ಸಮುದ್ರ ಪಾಲಾಗುವ ಅಂದಾಜು 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ರಾಜ್ಯದ ಉದ್ದೇಶ. ಅಷ್ಟೇ ಅಲ್ಲದೆ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆಗೂಈ ಯೋಜನೆಯಿಂದ ಅನುಕೂಲವಾಗಲಿದೆ.
ಈ ಮೂಲಕ ಕುಡಿಯುವ ನೀರಿನ ಪೂರೈಕೆ ಹಾಗೂ ವಿದ್ಯುತ್ ಉತ್ಪಾದನೆ ಈ ಯೋಜನೆಯ ಗುರಿಯಾಗಿದೆ. ಒಟ್ಟು 5252.40 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುವ ಯೋಜನೆಗೆ 3181.9 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಪ್ರದೇಶ ಬೇಕಾಗಿದೆ. ಅಷ್ಟೇ ಅಲ್ಲದೆ 1869.5 ಹೆಕ್ಟೇರ್ ಅರಣ್ಯ ಭೂಮಿ ಸ್ವಾಧೀನಪಡಿಸಬೇಕಾಗಿದೆ. 201 ಹೆಕ್ಟೇರ್ ಜಮೀನು ಕಂದಾಯ ಹಾಗೂ ಖಾಸಗಿ ಭೂಮಿಯಾಗಿದೆ. ಒಟ್ಟು 5 ಹಳ್ಳಿಗಳಾದ ಮಡವಾಳ, ಕೊಂಗೆದೊಡ್ಡಿ, ಸಂಗಮ, ಮುಥತ್ತಿ, ಬೊಮ್ಮಸಂದ್ರ ಈ ಯೋಜನೆಯಿಂದ ಮುಳುಗಡೆಯಾಗಲಿವೆ.
ವಿವಾದವೇನು?
67.16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟನ್ನು ಮೇಕೆದಾಟಿನಲ್ಲಿ ನಿರ್ಮಿಸುವ ಕರ್ನಾಕಟ ಸರ್ಕಾರದ ನಿಲುವಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಡ್ಯಾಂ ನಿರ್ಮಾಣದಿಂದ ತಮಿಳುನಾಡಿನ ರೈತರಿಗೆ ನೀರಿನ ಕೊರತೆ ಉಂಟಾಗುತ್ತದೆ ಅನ್ನೋದು ಸ್ಟಾಲಿನ್ ಸರ್ಕಾರದ ವಾದವಾಗಿದೆ. ಅಷ್ಟೇ ಅಲ್ಲ, ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಾಣವಾಗುತ್ತಿರುವ ಪ್ರದೇಶ ಬೆಂಗಳೂರು ನಗರಕ್ಕಿಂತ ಸಾಕಷ್ಟು ದೂರದಲ್ಲಿದೆ. ಹೀಗಾಗಿ, ಈ ಯೋಜನೆಯ ಉದ್ದೇಶ ಕುಡಿಯುವ ನೀರನ್ನು ಬೆಂಗಳೂರು ನಗರಕ್ಕೆ ಪೂರೈಕೆ ಮಾಡುವುದು ಅಲ್ಲ, ಕರ್ನಾಟಕ ಕೊಡುತ್ತಿರುವ ಕಾರಣ ಒಪ್ಪಲು ಸಾಧ್ಯವಿಲ್ಲ ಎಂಬುವುದು ತಮಿಳುನಾಡಿನ ವಾದ.












Click it and Unblock the Notifications