ನನ್ನ ಸಿದ್ದರಾಮಯ್ಯ ನಡುವಿನ ಜಗಳಕ್ಕೆ ಸಾಕ್ಷ್ಯ ಕೊಡಿ: ಪರಮೇಶ್ವರ್
ಬೆಂಗಳೂರು, ಸೆಪ್ಟೆಂಬರ್ 24: ಜಿ.ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಮನಸ್ತಾಪದ ವಿಷಯವನ್ನು ಇಬ್ಬರೂ ನಾಯಕರು ಅಲ್ಲಗಳೆದರಲ್ಲದೆ, ತಮಾಷೆಯಾಗಿಯೇ ಮಾಧ್ಯಮದವರನ್ನೂ ಛೇಡಿಸಿದರು.
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆದಿತ್ತು. ಸಭೆಯ ವರದಿಗೆ ತೆರಳಿದ್ದ ಮಾಧ್ಯಮ ಛಾಯಾಗ್ರಾಹಕರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿಡಿಯೋ ಮಾಡುತ್ತಿದ್ದರು. ಆಗ ಅವರನ್ನು ತಡೆದ ದಿನೇಶ್ ಗುಂಡೂರಾವ್ ಪರಮೇಶ್ವರ್ ಇಲ್ಲೇ ಹೊರಗಿದ್ದಾರೆ ಅವರು ಬರಲಿ ಆಮೇಲೆ ವಿಡಿಯೋ ಮಾಡಿ ಎಂದರು.
ಇದೇ ಸಮಯದಲ್ಲಿ ತಮಾಷೆಯಾಗಿ ಮಾತನಾಡಿದ ಸಿದ್ದರಾಮಯ್ಯ, ಹೌದು ಪರಮೇಶ್ವರ್ ಬರಲಿ, ಇಲ್ಲದಿದ್ದರೆ ನನಗೆ ಅವರಿಗೆ ನಡುವೆ ಅಸಮಾಧಾನ ಇದೆ ಎಂದು ವರದಿ ಮಾಡಿಬಿಡುತ್ತೀರಾ ಎಂದು ನಕ್ಕರು.

ಇದೇ ಸಮಯದಲ್ಲಿ ಒಳಕ್ಕೆ ಬಂದ ಪರಮೇಶ್ವರ್ ಅವರನ್ನು ಮಾತನಾಡಿಸಿದ ಸಿದ್ದರಾಮಯ್ಯ, 'ನನ್ನ ನಿಮ್ಮ ನಡುವೆ ಯಾವುದಾದರೂ ಮನಸ್ತಾಪಗಳಿದೆಯಾ?' ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ನಗುತ್ತಲೇ ಉತ್ತಿರಿಸಿದ ಪರಮೇಶ್ವರ್, 'ನನ್ನ ನಿಮ್ಮ ನಡುವೆ ಜಗಳ ಆಗಿದೆಯಂತೆ, ಜಗಳಕ್ಕೆ, ಅಸಮಾಧಾನಕ್ಕೆ ಯಾವುದಾದರೂ ಸಾಕ್ಷ್ಯ ಇದ್ದರೆ ಕೊಡಿ ಎಂದು ಕೇಳುತ್ತಿದ್ದೇನೆ, ಯಾರೂ ಕೊಡುತ್ತಿಲ್ಲ' ಎಂದು ಹೇಳಿದರು.
ಆ ಮೂಲಕ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಅಸಮಾಧಾನ ಇಲ್ಲವೆಂದು ಇಬ್ಬರೂ ಸ್ಪಷ್ಟಪಡಿಸಿದರು.
ಕೆಲವು ದಿನಗಳ ಹಿಂದೆಯಷ್ಟೆ ಪರಮೇಶ್ವರ್ ಅವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗಿ ಬಂದರು. ಇದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ಕಂದಕ ಹೆಚ್ಚಿಸಿದೆ ಎನ್ನಲಾಗಿತ್ತು. ಆದರೆ ಈ ಸುದ್ದಿಯನ್ನು ಇಬ್ಬರೂ ನಾಯಕರು ತಳ್ಳಿ ಹಾಕಿದ್ದಾರೆ.












Click it and Unblock the Notifications