Bengaluru Second Airport: 2ನೇ ವಿಮಾನ ನಿಲ್ದಾಣದ ಬಗ್ಗೆ ಯಾವುದನ್ನೂ ಸ್ಪಷ್ಟವಾಗಿ ಹೇಳದ ಎಂಬಿ ಪಾಟೀಲ್: ಅಷ್ಟಕ್ಕೂ ಏನಾಯ್ತು?
ಬೆಂಗಳೂರು, ಜುಲೈ 25: ರಾಜ್ಯದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿಳಂಬವಾಗುತ್ತಿದ್ದ ಹಿನ್ನಲೆ ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ತಮ್ಮ ಅಧಿಕಾರಿಗಳೊಂದಿಗೆ ಕೇಂದ್ರ ವಿಮಾನಯಾನ ಖಾತೆ ಸಚಿವ ಕೆ ರಾಂ ಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಎರಡನೇ ವಿಮಾನ ನಿಲ್ದಾಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ಎಂ ಬಿ ಪಾಟೀಲ್ ಅವರು ತಿಳಿಸಿದ್ದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಎಂ ಬಿ ಪಾಟೀಲ್ ಅವರು, ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಸಚಿವರೊಂದಿಗೆ ಚರ್ಚೆಯಾಗಿದೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದ್ದಾರೆ, ವರದಿಯನ್ನು ಆದಷ್ಟು ಬೇಗ ತಮಗೆ ನೀಡಿದರೆ ಮುಂದಿನ ತಯಾರಿಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾಗಿ ಪಾಟೀಲ್ ತಿಳಿಸಿದರು.

ತಾವು ಇತ್ತೀಚೆಗೆ ಅಧಿಕಾರಿಗಳ ನಿಯೋಗದ ಜೊತೆ ದೆಹಲಿಗೆ ಭೇಟಿ ನೀಡಿದ್ದು, ಅಲ್ಲಿ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿದ್ದೇನೆ. ಕೇಂದ್ರದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರಿಗೆ ಬಂದು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಸಮೀಕ್ಷೆ ನಡೆಸಿದರು. ಅದರ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದ್ದೇವೆ. ನಿರ್ಧಿಷ್ಠ ಸ್ಥಳವನ್ನು ಗುರುತಿಸಿದರೆ, ಮುಖ್ಯಮಂತ್ರಿ ಅವರ ಜೊತೆ ಚರ್ಚೆ ಮಾಡಿ ಮುಂದಿನ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದೇನೆ. ಹಾಗೆಯೇ ಮೈಸೂರು, ವಿಜಯಪುರ, ಶಿವಮೊಗ್ಗ, ಹಾಸನ, ಕಲಬುರಗಿ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಆಣೆಕಟ್ಟೆ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರ ಈಗಾಗಲೇ ಔಪಚಾರಿಕ ಅನುಮತಿ ನೀಡಿತ್ತು. ಗೋವಾದ ತಕರಾರು ಸರಿಯಲ್ಲ. ಕೇಂದ್ರ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ಇದನ್ನು ದುರುಪಯೋಗ ಪಡಿಸಿಕೊಂಡು ಯೋಜನೆಗೆ ಅಡ್ಡಿಪಡಿಸಲಾಗಿದೆ. ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವವರು, ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತಬೇಕು ಸರ್ವಪಕ್ಷ ಸಭೆಯ ಬಗ್ಗೆ ಉಪಮುಖ್ಯಮಂತ್ರಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಮಹದಾಯಿ ವಿಚಾರವಾಗಿ ಈಗಾಗಲೇ ಟ್ರಿಬ್ಯುನಲ್ ಆರ್ಡರ್ ಆಗಿದೆ. ಈ ರೀತಿ ಗೋವಾ ತಗಾದೆ ತೆಗೆಯೋದು ಸರಿಯಲ್ಲ, ಕೇಂದ್ರ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರ ಇರೋದ್ರಿಂದ ದುರುಪಯೋಗ ಪಡಿಸಿಕೊಳ್ತಾ ಇದ್ದಾರೆ
ಅದಕ್ಕೆ ನಾವು ಏನು ಉತ್ತರ ಕೊಡಬೇಕೋ ಕೊಡ್ತೀವಿ. ನಮ್ಮ ಸಂಸದರು ಹಾಗೂ ರಾಜ್ಯದ ಕೇಂದ್ರ ಸಚಿವರ ಜೊತೆ ಮಾತನಾಡ್ತೀವಿ. ಜಗದೀಶ್ ಶೆಟ್ಟರ್, ಬೊಮ್ಮಾಯಿ ಮತ್ತು ಪ್ರಹ್ಲಾದ್ ಜೋಷಿ ಮಹದಾಯಿ ಹೋರಾಟದಲ್ಲಿ ಇದ್ದವರು. ಬೇಗ ಅನುಮತಿ ಕೊಡುವಂತ ಒತ್ತಡ ಹಾಕ್ತೀವಿ ಎಂದು ಹೇಳಿದರು.
ರಾಜ್ಯ ಖಾತೆ ಸಚಿವರು ಅವರು ನಮಗೆ ಸಹಾಯ ಮಾಡ್ತಾರೆ ಅನ್ನೋದು ಇದೆ. ಸರ್ವ ಪಕ್ಷದ ಸಭೆ ಕರೆಯೋ ಬಗ್ಗೆ ಡಿಸಿಎಂ ನಿರ್ಧಾರ ಮಾಡ್ತಾರೆ, ಎರಡು ಕಡೆ ಅವರದೇ ಸರ್ಕಾರ ಇರೋದ್ರಿಂದ ಹೀಗೆ ಮಾಡ್ತಾ ಇದ್ದಾರೆ
ನಾವು ಇದರಲ್ಲಿ ಏನು ರಾಜಕಾರಣ ಮಾಡುವುದಿಲ್ಲ. ನಾವೇನು ರಾಜಕಾರಣ ಮಾಡಿಲ್ಲ. ಗೆಜೆಟ್ ನೊಟಿಫಿಕೇಷನ್ ಆಗಬೇಕಿತ್ತು ಆಗಿದೆ, ಇದರಲ್ಲಿ ತಗಾದೆ ತೆಗೆಯೋದು ಏನು? ಕೆಲಸ ಮುಂದುವರೆಸೋ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆಗೆ ಅವರೇ ಸ್ಪಷ್ಟನೆ ಕೊಡುತ್ತಾರೆ ಎಂದು ಎಂ ಬಿ ಪಾಟೀಲ್ ಹೇಳಿದರು.












Click it and Unblock the Notifications