ಕರ್ನಾಟಕದಲ್ಲಿ ಮೊಬೈಲ್-ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ವಿಸ್ತರಣೆ: $150 ಬಿಲಿಯನ್ ಟಾರ್ಗೆಟ್...ಎಂಬಿ ಪಾಟೀಲ್
ಬೆಂಗಳೂರು, ಡಿಸೆಂಬರ್ 04: ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಈಗಾಗಲೇ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆ ಘೋಷಿಸಿತ್ತು. ಅದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರ ಸಹ ಒಂದು ಯೋಜನೆ ರೂಪಿಸಲಿದೆ. ಅದಕ್ಕಾಗಿ ಕಾರ್ಯಸಾಧ್ಯತೆಯನ್ನು ಕುರಿತು ಅಧ್ಯಯನ ಮಾಡುತ್ತಿದ್ದು, ಅದು ಕರಡು ಹಂತದಲ್ಲಿದೆ. ಈ ಸಂಬಂದ ಅಧಿಕಾರಿಗಳಿಗೆ ಮಹತ್ವ ಸೂಚನೆ ನೀಡಲಾಗಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಹೇಳಿದರು.
ಇಂದು ಗುರುವಾರ ವಿಧಾನಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷ ಪಂಕಜ್ ಮಹೀಂದ್ರೂ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಅವರು ಮಾತುಕತೆ ನಡೆಸಿದರು. ಈ ವೇಳೆ ಕರ್ನಾಟಕದ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಗೆ ಐಸಿಇಎ ನೀಡುವ ಸಲಹೆ ಸ್ವಾಗತಿಸುತ್ತೇವೆ ಎಂದರು.

ಪ್ರಮುಖವಾಗಿ ಕರ್ನಾಟಕದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ವಿನ್ಯಾಸ ಕ್ಷೇತ್ರದ ವಿಸ್ತರಣೆಯನ್ನು ಗುರಿಯಾಗಿ ಇಟ್ಟುಕೊಳ್ಳಬೇಕು. ಒಟ್ಟು 150 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ಹಾಗೂ ಹೂಡಿಕೆ ಸಾಧ್ಯವಾಗುವಂತೆ ವಿಷನ್ ಡಾಕ್ಯುಮೆಂಟ್ ತಯಾರಿಸಲು ಅವರು ಅಧಿಕಾರಿಗಳಿಗೆ ಈ ವೇಳೆ ಸೂಚನೆ ನೀಡಿದರು.
ಕರ್ನಾಟಕದಲ್ಲಿ ಮೊಬೈಲ್ ಫೋನ್ ಬಿಡಿಭಾಗಗಳು ಮಾತ್ರವಲ್ಲದೆ ಕೈಗಾರಿಕಾ ಎಲೆಕ್ಟ್ರಾನಿಕ್ಸ್, ಕಾರ್ಯತಂತ್ರ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕೂಡ ಅಪಾರ ಅವಕಾಶಗಳಿವೆ. ಅಧಿಕಾರಿಗಳಿಗೆ ಕೇಂದ್ರದ ಯೋಜನೆ ಮತ್ತು ಇತರ ರಾಜ್ಯಗಳಲ್ಲಿ ಇರುವ ಇಂತಹ ಯೋಜನೆಗಳ ಅಧ್ಯಯನ ಮಾಡುವಂತೆ ನಿರ್ದೇಶಿಸಲಾಗಿದೆ.
ಭಾರೀ ಹೂಡಿಕೆ: 11,800 ಉದ್ಯೋಗಗಳು
ಪಂಕಜ್ ಮಹೀಂದ್ರೂ ಅವರು, ಯೋಜನೆಗೆ ಕೇಂದ್ರ ಸರ್ಕಾರ 22,900 ಕೋಟಿ ರೂ. ಬಳಸುತ್ತಿದೆ. ಕೇಂದ್ರದ ಯೋಜನೆಯಡಿಯಲ್ಲಿ ಸಬ್-ಅಸೆಂಬ್ಲಿ (ಡಿಸ್-ಪ್ಲೇ, ಕ್ಯಾಮರಾ ಮಾಡ್ಯೂಲ್ಸ್), ಬೇರ್ ಕಾಂಪೊನೆಂಟ್ಸ್ ಮತ್ತು ತಯಾರಿಕೆಗೆ ಬೇಕಾಗುವ ಸಾಧನಗಳಿಗೆ ಆದ್ಯತೆ ನೀಡಲಾಗಿದೆ. ವ್ಯಾಪಾರ ವಹಿವಾಟನ್ನು ಆಧರಿಸಿ ಪ್ರೋತ್ಸಾಹ ಭತ್ಯೆ, ಶೇ. 25ರಷ್ಟು ಬಂಡವಾಳ ಸಹಾಯ ಧನ (ಸಬ್ಸಿಡಿ) ನೀಡಲಾಗುವುದು ಎಂದು ವಿವರಿಸಿದರು.
ಈ ವರ್ಷದ ನವೆಂಬರ್ ತನಕ 7,172 ಕೋಟಿ ರೂ. ಮೊತ್ತದ 17 ಹೂಡಿಕೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದಿಸಿದೆ. ಇದರಿಂದ 11,800 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. 65 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಉತ್ಪನ್ನಗಳು ತಯಾರಾಗಲಿವೆ ಎಂದು ತಿಳಿಸಿದರು.












Click it and Unblock the Notifications