ಮಾಸ್ತಿಗುಡಿ ಆರೋಪಿ ನಾಪತ್ತೆಗೆ ನೆರವು: ದುನಿಯಾ ವಿಜಯ್ ಬಂಧನ
ಬೆಂಗಳೂರು, ಜೂನ್ 08: ಮಾಸ್ತಿಗುಡಿ ಪ್ರಕರಣದ ಆರೋಪಿ ನಿರ್ಮಾಪಕ ಸುಂದರ್ ಗೌಡ ಅವರು ನಾಪತ್ತೆಯಾಗಲು ನೆರವು ನೀಡಿದ ಆರೋಪ ಎದುರಿಸುತ್ತಿದ್ದ ನಟ ದುನಿಯಾ ವಿಜಯ್ ಅವರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು, ತಮಿಳುನಾಡಿನ ರೆಸಾರ್ಟ್ ವೊಂದರಲ್ಲಿ ಅಡಗಿದ್ದ ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ.
ಮಾಸ್ತಿಗುಡಿ ಚಿತ್ರೀಕರಣದ ಕ್ಲೈಮ್ಯಾಕ್ಸ್ ನಲ್ಲಿ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಅನಿಲ್ ಮತ್ತು ಉದಯ್ ಎಂಬ ಇಬ್ಬರು ನಟರು ದುರಂತ ಸಾವು ಕಂಡಿದ್ದರು. ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ತಿಪ್ಪಗೊಂಡನಹಳ್ಳಿ ಕೆರೆಗೆ ಹೆಲಿಕಾಪ್ಟರ್ ನಿಂದ ಧುಮುಕಿದ್ದ ಅನಿಲ್ ಮತ್ತು ಉದಯ್ ದುರಂತ ಅಂತ್ಯ ಕಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ ಅವರನ್ನು ಪೊಲೀಸರು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಅವರು ತಪ್ಪಿಸಿಕೊಳ್ಳಲು ದುನಿಯಾ ವಿಜಯ್ ನೆರವು ನೀಡಿದ್ದರು, ಅಷ್ಟೇ ಅಲ್ಲ, ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿ ವಿಜಯ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ಮೂರ್ನಾಲ್ಕು ದಿನದ ಹಿಂದೆ ವಿಜಯ್ ಅವರನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಅವರು ನಾಪತ್ತೆಯಾಗಿದ್ದ ವಿಷಯ ತಿಳಿದುಬಂದಿತ್ತು.
ತಮಿಳುನಾಡಿನ ರೆಸಾರ್ಟ್ ವೊಂದರಲ್ಲಿ ವಿಜಯ್ ಇದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದ ಪೊಲಿಸರು ವಿಜಯ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !