ಶುಲ್ಕ ಇಳಿಕೆ: ಜಕ್ಕೂರು ನೆಚ್ಚಿನ ಟೇಕ್ಆಫ್ ತಾಣವಾಯ್ತು!
ಬೆಂಗಳೂರು, ಮೇ 13: ಈ ಬಾರಿ ಜಕ್ಕೂರು ಏರೋಡ್ರಮ್ ರಾಜಕಾರಣಿಗಳಿಗೆ ನೆಚ್ಚಿನ ಟೇಕ್ ಆಫ್ ತಾಣವಾಗಿತ್ತು. ಏಕೆ ಗೊತ್ತಾ ? ಜಕ್ಕೂರು ಏರೋಡ್ರಮ್‌ನಲ್ಲಿ ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್ ಮತ್ತು ಟೇಕ್‌ಆಫ್‌ಗಾಗಿ ವಿಧಿಸುವ ಶುಲ್ಕ ಇಳಿದ ಕಾರಣ ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಇದು ಉತ್ತಮ ಟೇಕ್ಆಫ್ ತಾಣವಾಗಿತ್ತು.
ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಗಾಗಿ 3 ಸಾವಿರ ರು. ಇದ್ದ ಶುಲ್ಕವನ್ನು 500 ರೂ.ಗೆ ಇಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಜಕ್ಕೂರು ಏರೋಡ್ರಮ್ ನೂರಾರು ಬಾರಿ ಬಳಕೆಯಾಗಿದೆ. ಅದರಲ್ಲಿ ಬಹುತೇಕ ರಾಜಕಾರಣಿಗಳ ಬಳಕೆಯ ಹೆಲಿಕಾಪ್ಟರ್‌ಗಳಾಗಿವೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜಕ್ಕೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಪ್ರವಾಸ ನಡೆಸಿದ್ದರು.

ಈ ಮೊದಲು ತಿಂಗಳಿಗೆ ಒಂದೆರೆಡು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾತ್ರ ಆಗುತ್ತಿದ್ದವು. ಜತೆಗೆ ಶುಲ್ಕವೂ ಜಾಸ್ತಿ ಎನಿಸುತ್ತಿತ್ತಿ. ಹೀಗಾಗಿ ಕಳೆದ ವರ್ಷಾಂತ್ಯದಲ್ಲಿ ಶುಲ್ಕವನ್ನು 3 ಸಾವಿರ ರೂ. ಇಂದ 500 ರೂ.ಗೆ ಇಳಿಸಲಾಗಿದೆ. ಇದರ ಜತೆಗೆ ಚುನಾವಣೆಯು ಇದ್ದ ಕಾರಣ ಏರೋಡ್ರಮ್ ಬಳಕೆ ತೀವ್ರಗತಿಯಲ್ಲಿ ಏರಿಕೆಯಾಗಿದೆ.
ಶುಲ್ಕ ಕಡಿತವೂ ಕೇವಲ ಚುನಾವಣೆ ಉದ್ದೇಶದಿಂದ ಮಾಡಿರಲಿಲ್ಲ. ಈ ಹಿಂದೆ ಶುಲ್ಕ ಹೆಚ್ಚಳ ಎನ್ನುವ ಕಾರಣಕ್ಕೆ ಸಾಕಷ್ಟು ಹೆಲಿಕಾಪ್ಟರ್ ಕಂಪನಿಗಳು ಬೇರೆ ಪ್ರದೇಶಗಳನ್ನು ಆಯ್ದುಕೊಳ್ಳುತ್ತಿದ್ದವು. ಆದರೆ, ಶುಲ್ಕ ಇಳಿಕೆಯ ಬಳಿಕ ಜಕ್ಕೂರನ್ನು ಆಯ್ಕೆ ಮಾಡಿಕೊಂಡಿವೆ. ಅಲ್ಲದೆ, ಈಗಾಘಲೇ ಸೂಕ್ತ ಮೂಲಸೌಕರ್ಯ ಲಭ್ಯವಿರುವ ಬಳಕೆ ಹೆಚ್ಚಲು ಕಾರಣವಾಗಿದೆ. 82 ಸ್ಥಳಗಳಿಗೆ ಹೆಲಿಕಾಪ್ಟರ್ ಬಳಕೆ ಮಾಡಲು ಬಿಜೆಪಿಗೆ ಅನುಮತಿ ಸಿಕ್ಕಿದೆ, ಕಾಮಗ್ರೆಸ್‌ಗೆ 32 ಸ್ಥಳಗಳು ಹಾಗೂ ಜೆಡಿಎಸ್‌ಗೆ 28 ಸ್ಥಳಗಳಲ್ಲಿ ಹಾರಾಟ ಮಾಡಲು ಅನುಮತಿ ಪಡೆದುಕೊಂಡಿದ್ದವು ಎಂದು ತಿಳಿದುಬಂದಿದೆ.












Click it and Unblock the Notifications