ಮಾರತ್ತಹಳ್ಳಿ ಮಿನಿ ಆಂಧ್ರ, ಇಲ್ಲಿ ಶೇ.99ರಷ್ಟು ಜನ ತೆಲುಗಿನವರೇ ಇದ್ದೀವಿ: ಯುವತಿ ವಿಡಿಯೋ ವೈರಲ್, ವಲಸೆ ಬಗ್ಗೆ ಜೋರು ಚರ್ಚೆ
ಬೆಂಗಳೂರು: ರಾಜಧಾನಿ ಬೆಂಗಳೂರು ವಲಸಿಗರ ತವರಾಗುತ್ತಿದೆ ಎಂಬ ಆತಂಕದ ನಡುವೆಯೇ, ಆಂಧ್ರದ ಯುವತಿಯೊಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನಗರದಲ್ಲಿನ ಮಿತಿ ಮೀರಿದ ವಲಸೆ, ಸ್ಥಳೀಯರ ಅಸ್ತಿತ್ವ ಹಾಗೂ ಭಾಷಾ-ಸಾಂಸ್ಕೃತಿಕ ಸಮತೋಲನ ಕುರಿತು ಮತ್ತೆ ತೀವ್ರ ಚರ್ಚೆಗೆ ಕಾರಣವಾಗಿದೆ. ನಗರದ ಮಾರತ್ತಹಳ್ಳಿಯನ್ನು (Marathahalli) "ಮಿನಿ ಆಂಧ್ರ" ಎಂದು ಕರೆದಿರುವ ಯುವತಿ, "ಇಲ್ಲಿ ಶೇ 99.9ರಷ್ಟು ಜನ ಆಂಧ್ರದವರೇ ಇದ್ದೇವೆ" ಎಂದಿದ್ದಾರೆ.
ಅನಂತಪುರ ಜಿಲ್ಲೆಯವರೇ ಹೆಚ್ಚಾಗಿದ್ದೇವೆ
ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬರು, ಪೂರ್ವ ಬೆಂಗಳೂರಿನ ಪ್ರಮುಖ ಐಟಿ ಹಬ್ ಆಗಿರುವ ಮಾರತ್ತಹಳ್ಳಿಯನ್ನು "ಮಿನಿ ಆಂಧ್ರ" ಎಂದು ಕರೆಯಲಾಗುತ್ತಿದೆ ಎಂದು ಹೇಳಿದ್ದು, ಇಲ್ಲಿ ಬಹುಪಾಲು ಜನ ಆಂಧ್ರಪ್ರದೇಶದವರೇ ಇದ್ದಾರೆ ಎಂದು ಹೇಳಿದ್ದಾರೆ. ವಿಶೇಷವಾಗಿ ರಾಯಲಸೀಮಾ ಪ್ರದೇಶದ, ಅದರಲ್ಲೂ ಅನಂತಪುರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ತೆಲುಗು ಭಾಷಿಕರು ಇಲ್ಲಿ ವಾಸವಾಗಿರುವುದಾಗಿ ಅವರು ಉಲ್ಲೇಖಿಸಿದ್ದಾರೆ.

ಈ ವಿಡಿಯೋವನ್ನು 'ಕನ್ನಡ್ವಿರಾಟ' ಎಂಬ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, "ವಲಸಿಗರ ವಶವಾಗುತ್ತಿದೆ ಬೆಂಗಳೂರು, ಇನ್ನಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು" ಎಂಬ ಸಂದೇಶದೊಂದಿಗೆ ಪೋಸ್ಟ್ ಮಾಡಲಾಗಿದೆ. ಇದಾದ ಬಳಿಕ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. "ಮಾರತ್ತಹಳ್ಳಿ ಇಂದು ಮಿನಿ ಆಂಧ್ರವಾಗಿದೆ. ಇದೇ ರೀತಿ ಮಿನಿ ತಮಿಳುನಾಡು, ಮಿನಿ ಮಹಾರಾಷ್ಟ್ರ, ಮಿನಿ ಕೇರಳ, ಮಿನಿ ಬಿಹಾರ, ಮಿನಿ ಉತ್ತರ ಪ್ರದೇಶ ಎನ್ನುವ ಸ್ಥಿತಿಗೆ ಬೆಂಗಳೂರು ತಲುಪುವ ಮುನ್ನವೇ ವಲಸೆ ನಿಯಂತ್ರಣ ಕಾಯ್ದೆ ತರಬೇಕು" ಎಂದು ಆಗ್ರಹಿಸಿದ್ದಾರೆ.
ಆಂಧ್ರದಲ್ಲೇ ಬದುಕು ಕಟ್ಟಿಕೊಳ್ಳುವ ಅವಕಾಶವಿಲ್ಲವೇ?
ಅವರು ತಮ್ಮ ಅಭಿಪ್ರಾಯದಲ್ಲಿ, "ನಮ್ಮ ಕನ್ನಡನಾಡಿನ ಜಾಗದಲ್ಲಿ ನಿಂತುಕೊಂಡು, ಇಲ್ಲಿ ಅವರ ನಾಡಿನ ಜನರೇ ಹೆಚ್ಚಾಗಿ ಇದ್ದಾರೆ ಎಂಬ ಕಾರಣಕ್ಕೆ 'ಮಿನಿ ಆಂಧ್ರ' ಎಂದು ಕರೆಯಬೇಕಾದ ಪರಿಸ್ಥಿತಿ ಬಂದಿರುವುದು ಆತಂಕಕಾರಿ. ದಶಕಗಳಿಂದ ಎಷ್ಟು ಪ್ರಮಾಣದಲ್ಲಿ ಆಂಧ್ರ ವಲಸಿಗರು ಬೆಂಗಳೂರಿಗೆ ಬಂದಿದ್ದಾರೆ ಎಂಬುದನ್ನು ಲೆಕ್ಕ ಹಾಕಬೇಕು" ಎಂದು ಹೇಳಿದ್ದಾರೆ. ಇದಲ್ಲದೆ, "ಆಂಧ್ರದವರು ಯಾಕೆ ನಮ್ಮ ನಾಡಿಗೆ ವಲಸೆ ಬಂದರು? ತಮ್ಮ ನಾಡಿನಲ್ಲಿ ಜೀವನ ಕಟ್ಟಿಕೊಳ್ಳುವ ಅವಕಾಶಗಳಿರಲಿಲ್ಲವೇ? ನಾವು ಕನ್ನಡಿಗರು ಯಾವತ್ತೂ ಬೇರೆ ರಾಜ್ಯಗಳಿಗೆ ಹೋಗಿ 'ಇದು ಮಿನಿ ಕರ್ನಾಟಕ' ಎಂದು ಹೇಳಿಕೊಂಡಿಲ್ಲ. ನಮ್ಮ ನಾಡು ನಮಗೆ ಬದುಕಲು ಸಾಕಷ್ಟು ಸಮೃದ್ಧವಾಗಿದೆ" ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತವಾಗಿರುವ ಆಕ್ರೋಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಬೆಂಗಳೂರಿನ ಮೂಲಸೌಕರ್ಯ, ಉದ್ಯೋಗ, ಭಾಷೆ ಮತ್ತು ಸಂಸ್ಕೃತಿಯ ಮೇಲೆ ವಲಸೆಯ ಒತ್ತಡ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವರು ವಲಸೆ ಎನ್ನುವುದು ನಗರಗಳ ಸಹಜ ಲಕ್ಷಣ ಎಂದು ಪ್ರತಿಕ್ರಿಯಿಸಿದ್ದಾರೆ. "ನಾನು ಮಾರತ್ತಹಳ್ಳಿಯಲ್ಲಿ 8 ವರ್ಷ ಇದ್ದೆ, ಅಲ್ಲಿ ಇರೋರು ಎಲ್ಲರೂ ತೆಲುಗಿನವರು, ಪಿಜಿ ಬಿಲ್ಡಿಂಗ್, ಹೋಟೆಲ್ ಎಲ್ಲ ಅವರದ್ದೇ ಇದೆ. ಹಿಂಗೇ ಆದ್ರೆ ಬೆಂಗಳೂರು ಗೋವಿಂದ" ಎಂದು ರಿಪ್ಲೈ ಮಾಡಿದ್ದಾರೆ.
🚨ವಲಸಿಗರ ವಶವಾಗುತಿದೆ ಬೆಂಗಳೂರು
— ಕನ್ನಡ್ವಿರಾಟ (@kohlificationn) January 27, 2026
ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕು
ಕನ್ನಡಿಗರು🚨
ಮಾರತಹಳ್ಳಿ ❌❌❌❌
ಮಿನಿ ಆಂಧ್ರ ✅✅✅✅
ಮಿನಿ ತಮಿಳುನಾಡು
ಮಿನಿ ಮಹಾರಾಷ್ಟ್ರ
ಮಿನಿ ಕೇರಳ
ಮಿನಿ ಬಿಹಾರ
ಮಿನಿ ಉತ್ತರ ಪ್ರದೇಶ
ನಿರ್ಮಾಣ ಆಗುವ ಮುಂಚೆ ವಲಸೆ ನಿಯಂತ್ರಣ ಕಾಯ್ದೆ ತನ್ನಿ.
ನಮ್ಮ ನಾಡಿನ ಜಾಗದಲ್ಲಿ… pic.twitter.com/lxr5iY7Xc9
ಭಾಷಾ ಹೋರಾಟಗಾರರು ಮತ್ತು ಕೆಲ ಕನ್ನಡಪರ ಸಂಘಟನೆಗಳು, "ವಲಸೆ ವಿರೋಧವಲ್ಲ, ಆದರೆ ಸ್ಥಳೀಯರ ಹಕ್ಕು, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ರಕ್ಷಣೆಯ ಅಗತ್ಯವಿದೆ" ಎಂಬ ನಿಲುವು ವ್ಯಕ್ತಪಡಿಸುತ್ತಿವೆ. ಇನ್ನು ಕೆಲವರು ಈ ರೀತಿಯ ವಿಡಿಯೋಗಳು ಸಮಾಜದಲ್ಲಿ ವಿಭಜನೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಬೆಂಗಳೂರಿನಲ್ಲಿ ವಲಸೆ, ಸ್ಥಳೀಯರ ಅಸ್ತಿತ್ವ, ಉದ್ಯೋಗ, ಭಾಷಾ ಗೌರವ ಮತ್ತು ನಗರ ಯೋಜನೆ ಕುರಿತಂತೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಆಡಳಿತ ವಲಯ ಯಾವ ರೀತಿಯ ನಿಲುವು ತಾಳುತ್ತದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.












Click it and Unblock the Notifications