ಚುನಾವಣಾ ಪ್ರಣಾಳಿಕೆಯಲ್ಲಿ ಖಾಸಗಿ ಸಾರಿಗೆ ಉದ್ಯಮದ ಬೇಡಿಕೆ ಸೇರಿಸಲು ಮನವಿ: 10 ಅಂಶಗಳು ತಿಳಿಯಿರಿ
ಬೆಂಗಳೂರು, ಏಪ್ರಿಲ್ 19: ರಾಜ್ಯದಲ್ಲಿ ಚುನಾವಣೆ ಕಾವು ಚುರುಕಾಗಿದೆ. ಎಲ್ಲ ಪಕ್ಷಗಳು ಪ್ರಚಾರದಲ್ಲಿ ತೊಡಗಿದ್ದು, ಮತದಾರರಿಗೆ ಅಭಿವೃದ್ಧಿಯ ಭರವಸೆ ನೀಡುತ್ತಿವೆ. ಈ ಸಂಬಂಧ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘವು ಎಲ್ಲ ರಾಜಕೀಯ ಪಕ್ಷಗಳಿಗೆ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದೆ.
ಕರ್ನಾಟಕ ರಾಜ್ಯದಲ್ಲಿ 30 ಲಕ್ಷಕ್ಕಿಂತಲೂ ಹೆಚ್ಚು ವಾಣಿಜ್ಯ ವಾಹನಗಳು ನೊಂದವಣೆ ಆಗಿವೆ. ಅದರಲ್ಲಿ ಚಿಕ್ಕ ಉದ್ಯಮಿಗಳು, ಅತೀ ಚಿಕ್ಕ ಉದ್ಯಮಿಗಳು, ಸ್ವಯಂ ಉದ್ಯೋಗಿಗಳು ಮತ್ತು ನುರಿತ ಉದ್ಯೋಗಿಗಳು ಇದ್ದಾರೆ. ನಿತ್ಯ ವಾಹನ ಸೇವೆಯಿಂದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಈ ಉದ್ಯಮದಲ್ಲಿ ಅಟೋರಿಕ್ಷ, ಟ್ಯಾಕ್ಷಿ, ಮಿನಿಬಸ್ಸು, ಪ್ರವಾಸಿ ಬಸ್ಸುಗಳಿದ್ದು, ಅವು ಗ್ರಾಮೀಣ ಭಾಗದಲ್ಲಿ ಸೇವೆ ನೀಡುತ್ತಿವೆ.
ಇವರೆಲ್ಲ ಹಿತ ದೃಷ್ಟಿಗಾಗಿ ಖಾಸಗಿ ಸಾರಿಗೆ ಉದ್ಯಮದಲ್ಲಿನ ಸಮಸ್ಯೆಗಳ ನಿವಾರಣೆ, ಉದ್ಯಮದ ಅಭಿವೃದ್ಧಿಗೆ ಪೂರಕವಾದ ಬೇಡಿಕೆಗಳ ಈಡೇರಿಕೆಗಳನ್ನು ಚುನಾವಣಾ ಪ್ರಣಾಳಿಕೆ ಪ್ರಕಟಿಸಲು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಕೆ ರಾಧಾಕೃಷ್ಣ ಹೊಳ್ಳ ಅವರು ಮನವಿ ಮಾಡಿಕೊಂಡಿದ್ದಾರೆ. ಮನವಿಯ ಒಟ್ಟು ಹತ್ತು ಅಂಶಗಳನ್ನು ತಿಳಿಸಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲು ಕೋರಿದ 10 ಅಂಶಗಳು ಇವು
1. ನಾಲ್ಕು ಮೀಟರ್‌ನ ಚಿಕ್ಕ ವಾಹನಗಳಿಗೆ ಮತ್ತು ಕಾರ್ಖಾನೆಗಳಿಗೆ ಕಾರ್ಮಿಕರ ಒಯ್ಯುವ ವಾಹನಗಳಿಗೆ, ಗಾರ್ಮೆಂಟ್ಸ್ ವಾಹನಗಳಿಗೆ ರಹದಾರಿ ಮುಕ್ತವಾದ ನೀತಿ ರೂಪಿಸಬೇಕು.
2. ಅಂತರರಾಜ್ಯ ಚೆಕ್ ಪೋಸ್ಟ್‌ಗಳನ್ನು ಡಿಜಿಟಲ್ ಚೆಕ್‌ಪೋಸ್ಟ್‌ಗಳಾಗಿ ಪರಿವರ್ತಿಸುವುದು.
3. ದಕ್ಷಿಣ ಭಾರತದಲ್ಲಿ ಸಂಚರಿಸುವ ಪ್ರವಾಸಿ ವಾಹನಗಳಿಗೆ ಇತರ ದಕ್ಷಿಣದ ರಾಜ್ಯಗಳಂತೆ ನಮ್ಮ ರಾಜ್ಯವನ್ನೂ ದ್ವಿಪಕ್ಷೀಯ ಅಂತರರಾಜ್ಯ ರಹದಾರಿ ಸಾರಿಗೆ ಒಪ್ಪಂದದಲ್ಲಿ ಸೇರಿಸಬೇಕು.

4. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪ್ರತಿ 100 ಕಿ.ಮೀ ದೂರದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪೆಟ್ರೋಲ್ ಪಂಪ್, ಹೋಟೆಲ್, ಎಲೆಕ್ಟ್ರಿಕ್ ರೀಚಾರ್ಜ್, ವೈದ್ಯಕೀಯ, ಆಂಬ್ಯುಲೆನ್ಸ್, ಎಟಿಎಂ, ಗ್ರಾಹಕ ಅಗತ್ಯ ವಸ್ತುಗಳ ಸೌಲಭ್ಯ ಕಲ್ಪಿಸುವುದು. ಜೊತೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶೌಚಾಲಯ, ವಸತಿ ನಿಲಯ, ಕರಕುಶಲ ಅಂಗಡಿಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು.
5. ಹೊಸದಾಗಿ ಪ್ರವಾಸಿ ವಾಹನಗಳನ್ನು ಕರ್ನಾಟಕ ರಾಜ್ಯದಲ್ಲಿ ನೊಂದಾಯಿಸುವ ಸಂದರ್ಭದಲ್ಲಿ ಹೊರ ರಾಜ್ಯಗಳಂತೆ ಜೀವಿತಾವಧಿಯ ತೆರಿಗೆಯಿಂದ ವಾರ್ಷಿಕ ತೆರಿಗೆಗೆ ಬದಲಾವಣೆ ಮಾಡುವುದು. ಅಂತಾರಾಷ್ಟ್ರೀಯ ನವೋದ್ಯಮಗಳ ಹೆಸರಲ್ಲಿ ನಗರದಲ್ಲಿ ವ್ಯಾಪಾರ ಮಾಡುವ ಬಹುರಾಷ್ಟ್ರೀಯ ಕಂಪೆನಿಗಳ ಜೊತೆಗೆ ಸ್ಥಳೀಯ ಟ್ರಾವೆಲ್ಸ್ ಸೇವೆಯಲ್ಲಿ ತೊಡಗಿರುವವರು ಪೈಪೋಟಿ ನಡೆಸಲು ಸಮರ್ಥರಾಗುವಂತೆ ಅರ್ಥಿಕ ಬೆಂಬಲ ನೀಡಬೇಕಿದೆ.
6. ಖಾಸಗಿ ವಾಹನ ಚಾಲಕರಿಗೆ ನಿಗಮ, ಮಂಡಳಿ ನಿರ್ಮಾಣ, ಬಡ್ಡಿ ರಹಿತ ಸಾಲ ಯೋಜನೆ, ಹಿಂದುಳಿದ ವರ್ಗದ ವಿದ್ಯಾವಂತ ಯುವಕರಿಗೆ ಬಹುಭಾಷಾ ಮಾರ್ಗದರ್ಶಿ ಬೋಧನಾ ತರಗತಿ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಚಾಲಕರ ಮಕ್ಕಳಿಗೆ ಉನ್ನತ ಪದವಿ ಶಿಕ್ಷಣಕ್ಕಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಹಂಚಿಕೆಯನ್ನು ಉಚಿತವಾಗಿ ಹಾಗೂ ಪ್ರತ್ಯೇಕವಾಗಿ ನೀಡುವುದು.
7. ಕೆಲವೊಂದು ಖಾಸಗಿ ಸಾರಿಗೆ ಸಂಸ್ಥೆಗಳು ಕೊರೊನಾದಿಂದ ಆರ್ಥಿಕ ನಷ್ಟದಿಂದ ಅಳಿವಿನಂಚಿನಲ್ಲಿ ಇರುವ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಲು ರಾಜ್ಯ ಸಾರಿಗೆ ನಿಗಮಗಳಂತೆ ಆರ್ಥಿಕ ಪುಷ್ಟಿ ನೀಡುವ ಕೆಲಸ ಸರ್ಕಾರ ಮಾಡಬೇಕು.
8. ಮೆಟ್ರೊ ರೈಲು, ವಂದೇ ಭಾರತ್ ರೈಲು, ಉಡಾನ್ ವಿಮಾನ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸೇವೆ ರಾಜ್ಯದಲ್ಲಿ ಉನ್ನತ ಗುಣಮಟ್ಟದ್ದಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಸೌಲಭ್ಯಗಳನ್ನು ಒದಗಿಸುತ್ತಿರುವ ಖಾಸಗಿ ಸಾರಿಗೆ ಉದ್ಯಮಿಗಳು, ನೌಕರರು ರಾಜಕೀಯ ಪಕ್ಷಗಳು ಉತ್ತಮ ನೀತಿಗಳನ್ನು ತರುತ್ತವೆ ಎಂದು ನಂಬಲಾಗಿದೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಪ್ರಯತ್ನಿಸಬೇಕಿದೆ.
9. ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಖಾಸಗಿ ಸಾರಿಗೆಯಲ್ಲಿ ಅಳವಡಿಕೆ ಮಾಡುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದಿಂದ ವಿಶೇಷ ಆರ್ಥಿಕ ನೆರವು, ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ, ಹೆಚ್ಚಿನ ಚಾರ್ಜಿಂಗ್ ಪಾಯಿಂಟ್ ಗಳ ನಿರ್ಮಾಣ ಮಾಡುವುದು.
10. ನವೋದ್ಯಮದ ಹೆಸರಲ್ಲಿ ಪರವಾನಗಿ ಹೊಂದದೆ ಆನ್ ಲೈನ್‌ನಲ್ಲಿ ಸಾರ್ವಜನಿಕ ಸೇವೆ ಕೊಡುವ ವಾಹನಗಳನ್ನು ಸಾರಿಗೆ ರೆಗ್ಯುಲೇಟರಿಗೆ ಒಳಪಡಿಸುವುದು. (ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ) ವಾಹನಗಳ ಸಂಖ್ಯೆಗಳನ್ನು ಹೆಚ್ಚಿಸುವುದು.
ಒಟ್ಟು 9000 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿರುವ ಸಾರಿಗೆ ಕ್ಷೇತ್ರ ದಿಂದ ರಾಜ್ಯ ವಿಧಾನ ಪರಿಷತ್ತಿಗೆ ಉದ್ಯಮದ ಹಿರಿಯ, ಅನುಭವಿ ವ್ಯಕ್ತಿಯನ್ನು ನಾಮಕರಣಗೊಳಿಸುವ ಮೂಲಕ ಗೌರವ ನೀಡಬೇಕೆಂದು ಸಂಘದ ರಾಧಾಕೃಷ್ಣ ಹೊಳ್ಳ ಮನವಿ ಮಾಡಿದ್ದಾರೆ.












Click it and Unblock the Notifications