12 ಸಾವಿರಕ್ಕೆ ಮಗನಿಗೆ ಬೆಂಕಿ ಇಟ್ಟ ಕಿರಾತಕ ಅಪ್ಪ: ಮಗ ಆಸ್ಪತ್ರೆಯಲ್ಲಿ ಸಾವು
ಬೆಂಗಳೂರು, ಏ. 07: ಕೇವಲ 12 ಸಾವಿರ ರೂ. ಕಳೆದ ಕಾರಣಕ್ಕೆ ಕೋಪಗೊಂಡ ಅಪ್ಪ ತನ್ನ ಮಗನಿಗೆ ಬೆಂಕಿ ಹಚ್ಚಿ ಕೊಂದಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಬೆಂಕಿ ಹಚ್ಚಿ ಕೊಲ್ಲುವ ದೃಶ್ಯ ವೈರಲ್ ಆಗಿದೆ.
ಬೆಂಗಳೂರಿನ ಆಜಾದ್ ನಗರ ನಿವಾಸಿ ಸುರೇಂದ್ರ ಕೊಲೆ ಮಾಡಿದ ಪಾಪಿ ತಂದೆ. ಅರ್ಪಿತ್ ಕೊಲೆಯಾದ ಪುತ್ರ. ಸುಮಾರು ಒಂದೂವರೆ ಕೋಟಿ ರೂ. ವಹಿವಾಟಿನ ಸಂಬಂಧ ಹಣಕಾಸಿನಲ್ಲಿ ವ್ಯತ್ಯಯವಾಗಿತ್ತು. 12 ಸಾವಿರ ರೂ. ವ್ಯತ್ಯಾಸ ಬಂದಿತ್ತು. ಈ ವಿಚಾರವಾಗಿ ಅಪ್ಪ ಮಗನ ನಡುವೆ ಜಗಳ ನಡೆದಿದೆ. ಅಪ್ಪನ ಅವಾಚ್ಯ ಪದಗಳ ನಿಂದನೆ ಕೇಳಿಸಿಕೊಳ್ಳಲಾಗದೇ ಹೊರ ಬಂದ ಅರ್ಪಿತ್ ಮೇಲೆ ತಂದೆ ಸುರೇಂದ್ರ ತಿನ್ನರ್ ಸುರಿದು ಬೆಂಕಿ ಹಚ್ಚಿದ್ದಾನೆ. ನಡು ಬೀದಿಯಲ್ಲಿ ಬೆಂಕಿ ಹೊತ್ತುಕೊಂಡು ಅರ್ಪಿತ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಅರ್ಪಿತ್ ಮೃತಪಟ್ಟಿದ್ದು, ಈ ಸಂಬಂಧ ಚಾಮರಾಜಪೇಟೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬ್ಯುಸಿನೆಸ್ ವಿಚಾರವಾಗಿ ಅಪ್ಪ ಮಗನ ನಡುವೆ ಗಲಾಟೆ ನಡೆದಿದ್ದು ಈ ಅವಘಡ ಸಂಭವಿಸಿದೆ. ಮುಂದಿನ ತನಿಖೆಯಲ್ಲಿ ಈ ಕುರಿತ ಮತ್ತಷ್ಟು ಸತ್ಯಾಂಶಗಳು ಹೊರ ಬರಬೇಕಿದೆ. ಸ್ವಂತ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ವೈರಲ್ ಆಗಿದೆ. ಈ ಕುರಿತು ಲಾರಿ ಚಾಲಕ ಅಂಬರೀಶ್ ಎಂಬುವರು ನೀಡಿದ ದೂರಿನ ವಿವರ ಇಲ್ಲಿದೆ.

ಸುರೇಂದ್ರ ಅವರು ಸುಮಾರು 20 ವರ್ಷಗಳಿಂದ ಲಾರಿ ಫೈನಾನ್ಸ್ ವಹಿವಾಟು ಮಾಡುತ್ತಿದ್ದರು. ಅವರ ಬಳಿ ಅಂಬರೀಶ್ ಆದ ನಾನು ಸಾಲವನ್ನು ಪಡೆದುಕೊಂಡಿದ್ದರಿಂದ ಅವರು ನನಗೆ ಪರಿಚಯವಿರುತ್ತಾರೆ. ಸುರೇಂದ್ರ ಅವರ ತಂದೆ ತೀರಿಕೊಂಡ ಬಳಿಕ ಲಾರಿ ಫೈನಾನ್ಸ್ ಜತೆಗೆ ಕನ್‌ಸ್ಟ್ರಕ್ಷನ್ ಮತ್ತು ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು.

ಯುಗಾದಿ ಹಬ್ಬದ ದಿನ ಅಮಾವಾಸ್ಯೆ ಇದ್ದಿದ್ದರಿಂದ ನಾನು ಲಾರಿ ಚಾಲಕ ಕೆಲಸಕ್ಕೆ ಹೋಗಿರಲಿಲ್ಲ. ನಾನು ಮತ್ತು ನನ್ನ ಸ್ನೇಹಿತ ಮಾದೇಶ ಎಂಬುವರು ಸುರೇಂದ್ರ ಅವರ ಬಿಲ್ಡಿಂಗ್ ಮುಂದೆ ಇದ್ದ ಗ್ಯಾರೇಜ್ ಬಳಿ ಕೂತಿದ್ದೆವು. ಬ್ಯುಜಿನೆಸ್ ವಿಚಾರವಾಗಿ ಸುರೇಂದ್ರ ಮತ್ತು ಅವರ ಮಗ ಅರ್ಪಿತ್ ಜಗಳ ಮಾಡಿಕೊಂಡು ಸುಮಾರು 20 ನಿಮಿಷದಿಂದ ಕೂಗಾಡುತ್ತಿದ್ದರು.

ಅರ್ಪಿತ್ ಬಿಲ್ಡಿಂಗ್ ನಿಂದ ಹೊರ ಬಂದ ಬಳಿಕ ಅವರ ಹಿಂದೆಯೇ ಬಂದ ಸುರೇಂದ್ರ ಅವರು, ತನ್ನ ಕೈಯಲ್ಲಿದ್ದ ಬೆಂಕಿ ಪಟ್ಟಣದಿಂದ ಬೆಂಕಿ ಹಚ್ಚಿದರು. ಈ ವೇಳೆ ಅರ್ಪಿತ್ ಕಿರುಚಾಡಿದ್ದು, ಅಕ್ಕ ಪಕ್ಕದವರು ಸೇರಿ ಬೆಂಕಿ ನಂದಿಸಿದರು. ಅನಂತರ ಅರ್ಪಿತ್ ಅವರನ್ನು ಅವರ ತಂದೆ ಸುರೇಂದ್ರ ಅವರೇ ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಅರ್ಪಿತ್ ಮೃತಪಟ್ಟಿದ್ದಾರೆ ಎಂಬ ವಿಚಾರ ತಿಳಿದು ಬಂದಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರುದಾರ ಮನವಿ ಮಾಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬರಬೇಕಿದೆ.












Click it and Unblock the Notifications