ಹೆಂಡತಿ ನೋಡಲು ಬೆಂಗಳೂರಿಗೆ ಬಂದವನ ವಿರುದ್ಧ ಕ್ರಿಮಿನಲ್ ಕೇಸ್!
ಬೆಂಗಳೂರು, ಮೇ 26 : ಆತ ಕೊರೊನಾ ಹಾಟ್ ಸ್ಪಾಟ್ ಮುಂಬೈನಲ್ಲಿ ಚಾಲಕನ ಕೆಲಸ ಮಾಡುತ್ತಿದ್ದ. ಲಾಕ್ ಡೌನ್ ಘೋಷಣೆಯಾದ ಬಳಿಕ ಬೆಂಗಳೂರಿಗೆ ಬರಲಾಗದೆ ಪರಿತಪಿಸುತ್ತಿದ್ದ. ಲಾರಿಯೊಂದರಲ್ಲಿ ಕುಳಿತು ಪಾಸು ಇಲ್ಲದೇ ಬೆಂಗಳೂರಿಗೆ ಬಂದ. ಈಗ ಆತನ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದಾರೆ.
Recommended Video
ಮೊಹಮ್ಮದ್ ಅಯೂಬ್ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮನೆ ಹೊಂದಿದ್ದಾರೆ. ಮರಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಮುಂಬೈನಿಂದ ಬೆಂಗಳೂರಿಗೆ ಬಂದ ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹೊರ ರಾಜ್ಯದಿಂದ ಯಾರೇ ಬೆಂಗಳೂರು ನಗರಕ್ಕೆ ಬಂದರೆ ಕ್ವಾರಂಟೈನ್ ಕಡ್ಡಾಯವಾಗಿದೆ. ಮುಂಬೈನಂತಹ ಕೊರೊನಾ ಹಾಟ್ ಸ್ಪಾಟ್ ಪ್ರದೇಶದಿಂದ ನಗರಕ್ಕೆ ಬಂದರೂ ಮೊಹಮ್ಮದ್ ಅಯೂಬ್ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ.

ಕ್ವಾರಂಟೈನ್ ಮಾಡುತ್ತಾರೆ ಎಂಬ ಭಯದಿಂದ ಮನೆಗೆ ಬಂದವನೆ ಅಡಗಿ ಕುಳಿತಿದ್ದ. ಪೊಲೀಸ್ ಪೇದೆಯೊಬ್ಬರ ಸಮಯ ಪ್ರಜ್ಞೆಯಿಂದ ಮೊಹಮ್ಮದ್ ಅಯೂಬ್ ಸಿಕ್ಕಿಬಿದಿದ್ದಾನೆ. ಆರೋಗ್ಯ ಇಲಾಖೆ ಅಧಿಕಾರಿಗಳು ಆತನನ್ನು ಕ್ವಾರಂಟೈನ್‌ಗೆ ಹಾಕಿದ್ದು, ಆತನ ಜೊತೆ ಸಂಪರ್ಕದಲ್ಲಿ ಇದ್ದವರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಹೆಂಡತಿ ನೋಡಲು ಬಂದ : ಲಾಕ್ ಡೌನ್ ಘೋಷಣೆಯಾದ ಬಳಿಕ ಮೊಹಮ್ಮದ್ ಅಯೂಬ್ ಮನೆಗೆ ಬರಲು ಆಗಿರಲಿಲ್ಲ. ಕಳೆದ ವಾರ ಲಾರಿಯಲ್ಲಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ. ಮಧ್ಯರಾತ್ರಿ ಲಾರಿಯಿಂದ ಇಳಿದು ಆತ ಮನೆಗೆ ಹೋಗುವುದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ನೋಡಿದ್ದರು.
ಮರುದಿನ ಬೆಳಗ್ಗೆ ಆ ಪ್ರದೇಶದಲ್ಲಿ ಪೊಲೀಸರು ಹುಡುಕಾಟ ನಡೆಸಿದಾಗ ಮೊಹಮ್ಮದ್ ಅಯೂಬ್ ಯಾವುದೇ ಪಾಸು ಇಲ್ಲದೇ, ಅಧಿಕಾರಿಗಳಿಗೆ ಮಾಹಿತಿ ನೀಡದೆ ಆಗಮಿಸಿರುವುದು ಬೆಳಕಿಗೆ ಬಂದಿದೆ. ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications