ಮಲ್ಲೇಶ್ವರ ಮಾರುಕಟ್ಟೆ ಖಾಲಿ ಮಾಡುವಂತೆ ನೋಟಿಸ್
ಬೆಂಗಳೂರು, ಡಿ.4: ನಗರದ ಪ್ರಮುಖ ಬಡಾವಣೆ ಮಲ್ಲೇಶ್ವರ ಮಾರುಕಟ್ಟೆ ತೆರವು ವಿವಾದ ಮತ್ತೆ ಭುಗಿಲೆದ್ದಿದೆ. ಗುರುವಾರ ಬೆಳ್ಳಂಬೆಳ್ಳಗೆ ಇಲ್ಲಿನ ವ್ಯಾಪರಸ್ಥರಿಗೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ನೀಡಿರುವ ನೋಟಿಸ್ ಕೈ ಸೇರಿದೆ. ಅಂಗಡಿ ಖಾಲಿ ಮಾಡಲು ಒಂದು ವಾರದ ಗಡುವು ವಿಧಿಸಲಾಗಿದೆ ಎಂಬುದನ್ನು ಓದಿ ವ್ಯಾಪರಸ್ಥರು ಕಂಗಲಾಗಿದ್ದಾರೆ.
ಮಲ್ಲೇಶ್ವರದಲ್ಲಿರುವ ಮಾರುಕಟ್ಟೆಯ ಸುಮಾರು 48 ವ್ಯಾಪಾರಸ್ಥರಿಗೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು 7 ದಿನಗಳೊಳಗೆ ಜಾಗ ಖಾಲಿ ಮಾಡಬೇಕು ಎಂದು ನೋಟಿಸ್ ನೀಡಿದ್ದಾರೆ.[ಮಲ್ಲೇಶ್ವರಂ ಮಾರುಕಟ್ಟೆ ವಿವಾದ]
ಹಲವು ವರ್ಷಗಳಿಂದ ಇರುವ ಮಾರುಕಟ್ಟೆ ಪ್ರದೇಶದಲ್ಲಿ ಮಾಲ್ ನಿರ್ಮಾಣ ಮಾಡಲು ಬಿಬಿಎಂಪಿ ಮತ್ತು ಬಿಡಿಎ ಮುಂದಾಗಿದೆ. ಇದನ್ನು ವಿರೋಧಿಸಿ ವ್ಯಾಪರಸ್ಥರು ಹೈಕೋಟ್ ಮೆಟ್ಟಿಲೇರಿದ್ದರು. ಆದರೆ, ಮಲ್ಲೇಶ್ವರ ಮಾರುಕಟ್ಟೆ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ತಾತ್ಕಾಲಿಕ ಮಾರುಕಟ್ಟೆಗೆ ವ್ಯಾಪಾರಿಗಳು ಸ್ಥಳಾಂತರಗೊಳ್ಳಬೇಕು ಎಂದು ಕೋರ್ಟ್ ಬಿಡಿಎಗೆ ಸೂಚಿಸಿತ್ತು.

ಇಲ್ಲಿನ ಮಾರುಕಟ್ಟೆಯಲ್ಲಿ 247 ವ್ಯಾಪಾರಿಗಳಿದ್ದಾರೆ. ಆದರೆ, ಕೆಲವು ತಾತ್ಕಾಲಿಕ ಮಳಿಗೆಗಳನ್ನು ಸ್ಥಾಪಿಸಿ ಎಲ್ಲಾ ವ್ಯಾಪಾರಿಗಳು ತಕ್ಷಣ ಸ್ಥಳಾಂತರಗೊಳ್ಳಬೇಕು ಎಂದು ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ. ಈ ವರೆಗೂ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿದ್ದಾರೆ.
ವ್ಯಾಪರಸ್ಥರ ಅಳಲು: ರಾಜಕಾಲುವೆಯನ್ನು ಅತಿಕ್ರಮಿಸಿ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ನಾವು ಒಂದು ವೇಳೆ ಅಲ್ಲಿಗೆ ಸ್ಥಳಾಂತರಗೊಂಡರೆ ಮತ್ತೆ ನಮ್ಮನ್ನು ಅಲ್ಲಿಂದಲೂ ಓಡಿಸುತ್ತಾರೆ. ಹೀಗಾಗಿ ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸುವವರೆಗೂ ನಾವು ಜಾಗವನ್ನು ಖಾಲಿ ಮಾಡುವುದಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಮಾರುಕಟ್ಟೆ ಇರುವ ಜಾಗ ಸುಮಾರು 300 ಕೋಟಿ ರು ಗೂ ಅಧಿಕ ಬೆಲೆ ಬಾಳುತ್ತಿದ್ದು, ಈ ಜಾಗದಲ್ಲಿ ಮಾಲ್ ನಿರ್ಮಾಣ ಮಾಡಲು ಅಧಿಕಾರಿಗಳು ವ್ಯಾಪಾರಸ್ಥರನ್ನು ತೆರವುಗೊಳಿಸುತ್ತಿದ್ದಾರೆ. ಮೊದಲೇ ನಷ್ಟದಲ್ಲಿರುವ ಬಿಬಿಎಂಪಿ ಮಾರುಕಟ್ಟೆ ಇರುವ ಜಾಗವನ್ನು ಬ್ಯಾಂಕ್‌ವೊಂದಕ್ಕೆ ಅಡವಿಟ್ಟಿದೆ ಎಂಬ ಸುದ್ದಿಯೂ ಇದೆ.












Click it and Unblock the Notifications