ಮಲ್ಲೇಶ್ವರಂ ಸ್ಫೋಟ : ಲಿಷಾಗೆ 3 ಲಕ್ಷ ಮಧ್ಯಂತರ ಪರಿಹಾರ
ಬೆಂಗಳೂರು, ಜುಲೈ 13 : ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ವಿದ್ಯಾರ್ಥಿನಿ ಲಿಷಾಗೆ 3 ಲಕ್ಷ ರೂ.ಮಧ್ಯಂತರ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ.
1 ಕೋಟಿ ಪರಿಹಾರ ನೀಡಬೇಕು ಮತ್ತು ಅಂಗವಿಕಲ ಕೋಟಾದಡಿ ಉದ್ಯೋಗ ನೀಡಬೇಕೆಂದು ಕೋರಿ ಲಿಷಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, 3 ರೂ.ಲಕ್ಷ ಮಧ್ಯಂತರ ಪರಿಹಾರವನ್ನು ಮೂರು ವಾರದಲ್ಲಿ ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿದೆ. [ಕೋರ್ಟ್ ಮೊರೆ ಹೋದ ಮಲ್ಲೇಶ್ವರಂ ಸ್ಫೋಟದ ಗಾಯಾಳು]

ವಿದ್ಯಾರ್ಥಿನಿ ಲಿಷಾಗೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ಅವರು ಮಧ್ಯಂತರ ಪರಿಹಾರ ಕೇಳುತ್ತಿದ್ದು, ಈ ಬಗ್ಗೆ ಸರ್ಕಾರದ ನಿಲುವು ಏನೆಂದು ಉತ್ತರ ನೀಡಿ ಎಂದು ಕೋರ್ಟ್ ಕೆಲವು ದಿನಗಳ ಹಿಂದೆ ಸರ್ಕಾರಕ್ಕೆ ಸೂಚನೆ ನೀಡಿತ್ತು. [ಲಿಷಾಗೆ ಪರಿಹಾರ ನೀಡಿದ ಸಿದ್ದರಾಮಯ್ಯ]
ಸೋಮವಾರ ಅರ್ಜಿಯ ವಿಚಾರಣೆ ಮುಂದುವರೆಸಿದ ಕೋರ್ಟ್ ಮಧ್ಯಂತರ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ. ಇದುವರೆಗೂ ಶಸ್ತ್ರ ಚಿಕಿತ್ಸೆಗಾಗಿ 7 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇವೆ. ಮುಂದಿನ ಚಿಕಿತ್ಸೆಗಾಗಿ ಮಧ್ಯಂತರ ಪರಿಹಾರ ನೀಡಬೇಕು ಎಂದು ಲಿಷಾ ಕೋರ್ಟ್‌ಗೆ ಮನವಿ ಮಾಡಿದ್ದರು. [ಬಿಜೆಪಿ ಕಚೇರಿ ಬಳಿ ಸ್ಫೋಟ, 14 ಮಂದಿ ವಿರುದ್ಧ FIR]
2013ರ ಏ.17ರಂದು ಬೆಳಗ್ಗೆ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಈ ಸಂದರ್ಭದಲ್ಲಿ ಕಾಲೇಜಿಗೆ ಹೋಗುತ್ತಿದ್ದ ಲಿಷಾ ಗಾಯಗೊಂಡಿದ್ದರು. ಕಬ್ಬಿಣದ ಚೂರುಗಳು ಅವರ ಎಡಗಾಲಿಗೆ ಹೊಕ್ಕಿತ್ತು. ಇದುವರೆಗೂ ಅವರು ಸುಮಾರು 7 ಲಕ್ಷ ರೂ.ಗಳನ್ನು ಶಸ್ತ್ರ ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಆದರೆ, ಇನ್ನೂ ಗುಣಮುಖರಾಗಿಲ್ಲ.












Click it and Unblock the Notifications