ಫೆ 4, ಬೆಂಗಳೂರು ಬಂದ್: ಕನ್ನಡಪರ ಹೋರಾಟಗಾರರಿಗೆ ಹಿನ್ನಡೆ
ಬೆಂಗಳೂರು, ಜ 29: ಯಾವ ಒಂದು ಹೋರಾಟ ಸಮಿತಿ ಮಂಚೂಣಿಯಲ್ಲಿ ನಿಂತು ಪ್ರತಿಭಟನೆ ನಡೆಸಬೇಕಾಗಿತ್ತೋ, ಆ ಸಂಘಟನೆಯೇ ಭಾನುವಾರ, ಫೆಬ್ರವರಿ 4ರಂದು ಕರೆಯಲಾಗಿರುವ ಬೆಂಗಳೂರು ಬಂದ್ ನಿಂದ ಹಿಂದಕ್ಕೆ ಸರಿದಿದೆ.
ಮಹಾದಾಯಿ ಹೋರಾಟ ಸಮಿತಿ ಬೆಂಗಳೂರು ಬಂದ್ ಗೆ ತಮ್ಮ ಬೆಂಬಲವಿಲ್ಲ ಎಂದು ಘೋಷಿಸುವ ಮೂಲಕ, ಮಾತೆತ್ತಿದರೆ ಬಂದ್ ಗೆ ಕರೆ ನೀಡುವ ಕನ್ನಡಪರ ಸಂಘಟನೆಗಳು ತೀವ್ರ ಮುಜುಗರ ಎದುರಿಸಬೇಕಾಗಿ ಬಂದಿದೆ.
ಮಹಾದಾಯಿ ಹೋರಾಟ ಸಮಿತಿಯ ಮುಖ್ಯಸ್ಥ ವೀರೇಶ್ ಸೊಬರದಮಠ ಈ ಸಂಬಂಧ ಹೇಳಿಕೆ ನೀಡಿ, ಬಂದ್ ನಿಂದ ಯಾವುದೇ ಪರಿಹಾರ ಸಿಗದು ಎನ್ನುವುದನ್ನು ನಾವು ಮನವರಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಜೊತೆಗೆ, ಬಂದ್ ಕರೆಯ ಹಿಂದೆ ರಾಜಕೀಯದ ವಾಸನೆ ಬರುತ್ತಿರುವುದರಿಂದ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬೆಂಗಳೂರ್ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಸೊಬರದಮಠ ಹೇಳಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕಾರಣಿಗಳಿಗೆ ಬೇರೆ ರೀತಿ ಪಾಠ ಕಲಿಸಬೇಕಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕರ್ನಾಟಕ ಅಸೆಂಬ್ಲಿ ಚುನಾವಣೆ ಎದುರಿಸಬೇಕಾಗಿದ್ದು, ಪ್ರಮುಖವಾಗಿ ರಾಜ್ಯದ ಐದು ಜಿಲ್ಲೆಗಳಲ್ಲಿ ಮಹಾದಾಯಿ ಹೋರಾಟಗಾರರು ಮತ್ತು ರೈತರ ನಿಲುವೇನು ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪ್ರಧಾನಿ ಮೋದಿ ಬಿಜೆಪಿ ಸಮಾವೇಶಕ್ಕೆ ಬೆಂಗಳೂರಿಗೆ ಭಾನುವಾರ ಆಗಮಿಸಲಿದ್ದು, ಆ ವೇಳೆ ಮಹಾದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯಿಸಿ, ಬೆಂಗಳೂರು ಬಂದ್ ಗೆ ಕನ್ನಡಪರ ಸಂಘಟನೆಗಳ ಪರವಾಗಿ ವಾಟಾಳ್ ನಾಗರಾಜ್ ಕರೆ ನೀಡಿದ್ದರು. ನಾರಾಯಣ ಗೌಡರ ಕರವೇ ಬಣ, ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದವು.
ಮಹಾದಾಯಿ ಹೋರಾಟಗಾರರ ಈ ನಿರ್ಧಾರದ ನಂತರ, ಕನ್ನಡಪರ ಸಂಘಟನೆಗಳ ಮುಂದಿನ ನಿಲುವೇನು ಎನ್ನುವುದು ಸದ್ಯಕ್ಕೆ ತಿಳಿದುಬಂದಿಲ್ಲ.












Click it and Unblock the Notifications