ಬೆಂಗಳೂರಿನ ಬಿಬಿಎಂಪಿಯಲ್ಲಿ ಹೆಚ್ಚಾಯ್ತು ಇಂಗ್ಲಿಷ್ ಪ್ರೀತಿ, ಕನ್ನಡಿಗರು ಕೆಂಡ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಯಲ್ಲಿ ಹಿಂದಿ ಹಾಗೂ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಈ ಮಹಾನಗರ ಪಾಲಿಕೆಯ ಚುನಾವಣೆಯು ಕಳೆದ ಐದು ವರ್ಷಗಳಿಂದ ನಡೆಯದೆ ಇರುವುದರಿಂದ ಇಲ್ಲಿ ಅಧಿಕಾರಿಗಳದ್ದೇ ದರ್ಬಾರು ಎನ್ನುವಂತೆ ಆಗಿದೆ. ಗುರುವಾರ ಪಾಲಿಕೆಯ ಸಭಾಂಗಣದಲ್ಲಿ ನಡೆದಿರುವ ಕಾರ್ಯಕ್ರಮವು ಸಂಪೂರ್ಣ ಇಂಗ್ಲಿಷ್ ಮಯವಾಗಿರುವುದು ಭಾರೀ ಟೀಕೆಗೆ ಕಾರಣವಾಗಿದೆ. "ನಮ್ಮ ರಸ್ತೆ 2025" ಕಾರ್ಯಕ್ರಮ ಎನ್ನುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಗುರುವಾರ ಚಾಲನೆ ನೀಡಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಒಂದಕ್ಷರವೂ ಕನ್ನಡ ಕಾಣಿಸಿಲ್ಲ.
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಿಕರ ಹಾಗೂ ಹಿಂದಿ ಹೇರಿಕೆಯಾಗುತ್ತಿದೆ ಎನ್ನುವ ಆರೋಪ ಈ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕನ್ನಡದ ಬಳಕೆ ಹಾಗೂ ಕನ್ನಡಕ್ಕೆ ಆದ್ಯತೆ ಹೆಚ್ಚಾಗಿ ಕೊಡಬೇಕು ಎನ್ನುವ ಆಗ್ರಹಗಳ ನಡುವೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಇಂಗ್ಲಿಷ್ ಹಾಗೂ ಹಿಂದಿ ವ್ಯಾಮೋಹಕ್ಕೆ ಜೋತು ಬೀಳುತ್ತಿದ್ದಾರೆ. ಪಾಲಿಕೆಗೆ ಚುನಾವಣೆಯೇ ನಡೆಯದೆ. ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಜಾಗೃತಿ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಾಯಿಗಳ ಉತ್ಸವ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದಕ್ಕೆ ಬಿಬಿಎಂಪಿಯು ಕುಕುರ್ ತಿಹಾರ್ ಎನ್ನುವ ಉತ್ತರ ಭಾರತದ ಪದವನ್ನು ಬಳಸಿ ಛೀಮಾರಿ ಹಾಕಿಸಿಕೊಂಡಿತ್ತು. ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಯ ಕಿವಿ ಹಿಂಡಿತ್ತು. ಆದರೆ, ಇದೀಗ ಕೆಲವೇ ದಿನಗಳಲ್ಲಿ ಬಿಬಿಎಂಪಿಯು ಇಂಗ್ಲೀಷ್ ವ್ಯಾಮೋಹವನ್ನು ಪ್ರದರ್ಶಿಸಿದೆ.
ಬಿಬಿಎಂಪಿಯ ಈ ನಡೆಗೆ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಭಾರೀ ವಿರೋಧ ವ್ಯಕ್ತವಾಗಿದೆ. ಬೆಂಗಳೂರನ್ನು ಬಿಬಿಎಂಪಿಯು ಇಂಗ್ಲಿಷ್ ಮಯವನ್ನಾಗಿಸಲು ನೋಡುತ್ತಿದೆ. ಬೇರೆಯವರಿಗೆ ಪಾಠ ಮಾಡುವ ಮುಂಚೆ ಬಿಬಿಎಂಪಿಯವರಿಗೇ ಬುದ್ಧಿ ಕಲಿಸಬೇಕು ಅಂತ ಜನ ಹೇಳುತ್ತಿದ್ದಾರೆ.
ಆರ್. ಅಶೋಕ್ ಟ್ವೀಟ್: ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ಸರ್ಕಾರದಿಂದ ಕನ್ನಡದ ಕಗ್ಗೂಲೆ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತಿಗೆ ಕೊಳ್ಳಿ ಇಟ್ಟಿದೆ. ಕೆ.ಪಿ.ಎ.ಸ್ಸಿ ಪ್ರಶ್ನೆ ಪತ್ರಿಗಳಲ್ಲಿ ಪದೇ ಪದೆ ಕನ್ನಡ ವ್ಯಾಕರಣ ತಪ್ಪಾಗಿ ಮುದ್ರಿಸಿ ಕನ್ನಡದ ಕಗ್ಗೊಲೆ ಮಾಡಿದ್ದಾಯ್ತು. ಇದೀಗ ಕನ್ನಡ ಶಾಲೆಗಳನ್ನು ಮುಚ್ಚಿಸಿ ಕನ್ನಡ ಕಲಿಕೆಗೆ ಎಳ್ಳು ನೀರು ಬಿಟ್ಟಿದ್ದಾಯ್ತು. ಈಗ ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಗಾಜಿನ ಮನೆಯಲ್ಲಿ ನಡೆಯುತ್ತಿರುವ 'ನಮ್ಮ ರಸ್ತೆ, ನಮ್ಮ ಹೆಮ್ಮೆ' ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಹೀಗೆ ಮುಂದುವರಿದರೆ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಕರುನಾಡಲ್ಲಿ ಕನ್ನಡವನ್ನ ಶಾಶ್ವತವಾಗಿ ಅಳಿಸಿ ಹಾಕುವುದು ಮಾತ್ರ ಗ್ಯಾರಂಟಿ ಎಂದೂ ಅವರು ಹೇಳಿದ್ದಾರೆ.












Click it and Unblock the Notifications