ಶಾಂತಿನಗರದಲ್ಲಿ ರಾಹುಲ್ ಅವರನ್ನು ಸ್ವಾಗತಿಸುತ್ತಿರುವವರು ಯಾರು?
ಬೆಂಗಳೂರು, ಮೇ 23 : ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸ್ವಾಗತಕ್ಕಾಗಿ ಬೆಂಗಳೂರಿನ ಎಲ್ಲೆಡೆ ಭಿತ್ತಿಪತ್ರಗಳು, ಬೋರ್ಡ್ ಗಳು ರಾರಾಜಿಸುತ್ತಿವೆ.
ಆದರೆ, ಬೆಂಗಳೂರಿನ ನಾಗರಿಕರನ್ನು ಆವಾಕ್ಕಾಗಿಸಿದ್ದು ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಲೈಟ್ ಕಂಬಕ್ಕೆ ತೂಗು ಹಾಕಿರುವ ಸ್ವಾಗತ ಕೋರುವ ಭಿತ್ತಿ ಪತ್ರವೊಂದು. ಈ ಭಿತ್ತಿಪತ್ರ ಸಾಮಾಜಿಕ ತಾಣದಲ್ಲಿ ನೋಡುಗರನ್ನು ನಿಬ್ಬೆರಗಾಗಿಸುತ್ತಿದೆ.
ಅದರಲ್ಲಿ, ಬೆಂಗಳೂರಿಗೆ ಈಗಾಗಲೆ ಆಗಮಿಸಿರುವ ರಾಹುಲ್ ಗಾಂಧಿ, ಶಾಂತಿನಗರದ ಶಾಸಕ ಎನ್ ಎ ಹ್ಯಾರಿಸ್ ಅವರ ಜೊತೆ ರಾರಾಜಿಸುತ್ತಿರುವುದು ಯುಬಿ ಸಿಟಿಯಲ್ಲಿ ವಿದ್ವತ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲಿನಲ್ಲಿರುವ ಮೊಹಮ್ಮದ್ ನಾಲಪಾಡ್!

ಸೋನಿಯಾಜಿ, ರಾಹುಲ್ ಜಿ, ಪ್ರಮಾಣ ವಚನ ಸಮಾರಂಭಕ್ಕೆ ನಿಮಗೆ ಸ್ವಾಗತ ಸುಸ್ವಾಗತ ಎಂದು ಬರೆಯಲಾಗಿದ್ದು, ಚಿತ್ರದಲ್ಲಿ ಸೋನಿಯಾ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ, ಡಿಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂ ರಾವ್ ಅವರ ಚಿತ್ರವನ್ನು ಕೂಡ ಮುದ್ರಿಸಲಾಗಿದೆ.
ಶಾಂತಿನಗರದ ಕಾಂಗ್ರೆಸ್ ಕಾರ್ಯಕರ್ತರು, ಹ್ಯಾರಿಸ್ ಬೆಂಬಲಿಗರು ತಮ್ಮ ವ್ಯಕ್ತಿನಿಷ್ಠೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹೋಟೆಲ್ ಹೊಡೆದಾಟ ಪ್ರಮುಖ ಆರೋಪಿ, ಹತ್ಯೆಗೆ ಯತ್ನಿಸಿದ ವ್ಯಕ್ತಿ ಫ್ಲೆಕ್ಸ್ ನಲ್ಲಿ ತನ್ನ ಪಕ್ಷದ ಮುಖಂಡನನ್ನು ಸ್ವಾಗತಿಸುತ್ತಿದ್ದಾನೆ ಎಂದು ಶಿವಕುಮಾರ್ ಎಂಬುವವರು ವ್ಯಂಗ್ಯವಾಡಿದ್ದಾರೆ.
Wow this is absolutely taking things to next level by Shantinagar INC supporters / party workers.
— Shivakumar L Narayan (@sierralimaa) May 23, 2018
Posting photo of a prime accused in a hotel brawl who is now in jail on attempt to murder case on a flex welcoming party chief to Karnataka for new CM swearing in ceremony #karnataka pic.twitter.com/dEvurmGZHG
ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ಬರಲು ಆರಂಭಿಸಿವೆ. ಇಂಥವರು ನಮ್ಮ ಕರ್ನಾಟಕವನ್ನು ಆಳುತ್ತರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಒಬ್ಬರೆಂದಿದ್ದರೆ, ಇಂಥದನ್ನು ನೋಡುತ್ತಿರುವುದಕ್ಕೆ ಅಸಹ್ಯವಾಗುತ್ತಿದೆ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ. ಇದಕ್ಕೆ ಶಾಂತಿನಗರದ ಮತದಾರ ಮಹಾಪ್ರಭುಗಳು ಏನಂತಾರೆ?
ಅಂದ ಹಾಗೆ, ಶಾಂತಿನಗರದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಎನ್ಎ ಹ್ಯಾರಿಸ್ ಅವರು ಬಿಜೆಪಿಯ ಕೆ ವಾಸುದೇವ ಮೂರ್ತಿಯನ್ನು ಸೋಲಿಸಿ, ಈ ಬಾರಿಯೂ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹ್ಯಾರಿಸ್ ಅವರು 60,009 ಮತಗಳನ್ನು ಗಳಿಸಿದ್ದರೆ, ವಾಸುದೇವಮೂರ್ತಿಯವರು 41,804 ಮತಗಳನ್ನು ಗಳಿಸಿ ಸೋತಿದ್ದಾರೆ. ಇದರ ಶ್ರೇಯಸ್ಸು ಶಾಂತಿನಗರದ ಮತದಾರರಿಗೆ ಸಲ್ಲಬೇಕು.












Click it and Unblock the Notifications