ಸರ್ಕಾರಕ್ಕೆ ಪತ್ರ ಬರೆದ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ - ಪತ್ರದಲ್ಲೇನಿದೆ?
ಬೆಂಗಳೂರು, ಸೆಪ್ಟೆಂಬರ್ , 15: ಲೋಕಾಯುಕ್ತ ಸಂಸ್ಥೆಗೆ ಪವರ್ ಬಂದಿದ್ದೆ ಲೋಕಾಯುಕ್ತರು ಆಕ್ಟೀವ್ ಆಗಿದ್ದಾರೆ. ಯುದ್ದಕ್ಕೆ ತೆರಳುವ ಮುನ್ನ ಶಸ್ತ್ರಾಸ್ತ್ರ ಮತ್ತು ಯೋಧರನ್ನು ಅಣಿಗೊಳಿಸುವತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಎಸಿಬಿ ಕಚೇರಿಯನ್ನೆ ಸ್ಥಳೀಯ ಲೋಕಾಯುಕ್ತ ಠಾಣೆಯಾಗಿಸಲು ಲೋಕಾಯುಕ್ತರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಭ್ರಷ್ಟರ ವಿರುದ್ಧ ಸಮರ ಶುರುಮಾಡಿರುವ ಲೋಕಾಯುಕ್ತರು ಎಸಿಬಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಸೇರಿ ರಾಜ್ಯ ವಿಭಾಗವಾರು ಎಸಿಬಿ ಕಚೇರಿಗಳು ಹಾಗೂ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಯಥಾವತ್ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾ.ಬಿ.ಎಸ್.ಪಾಟೀಲ್ ಪತ್ರ ಬರೆದಿದ್ದಾರೆ.
ಕಳೆದ ಆರು ವರ್ಷಗಳ ಬಳಿಕ ಪೊಲೀಸ್ ಬಲ ಪಡೆದುಕೊಂಡಿರುವ ಲೋಕಾಯುಕ್ತ ಈಗಾಗಲೇ ಭ್ರಷ್ಟರಿಗೆ ಸಿಂಹಸ್ವಪ್ನವಾಗುವ ಸೂಚನೆ ನೀಡಿದೆ. ಇದಕ್ಕೆ ಪೂರಕವೆಂಬಂತೆ ಲಂಚ ಪ್ರಕರಣದಲ್ಲಿ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಆಪ್ತ ಸಹಾಯಕ ಉಮೇಶ್ ತಮ್ಮ ಖೆಡ್ಡಾಕ್ಕೆ ಬೀಳಿಸಿ ಜೈಲಿಗಟ್ಟಿದೆ. ಹೈಕೋರ್ಟ್ ಆದೇಶದಂತೆ ಎಸಿಬಿಯು ಪ್ರಕರಣ ಹಸ್ತಾಂತರ ಪ್ರಕ್ರಿಯೆ ನಡೆಸುತ್ತಿದೆ. ಇದರ ಬೆನ್ನಲೇ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಂದಿತಾ ಶರ್ಮಾಗೆ ಪತ್ರ ಬರೆದಿದ್ದಾರೆ.

ವಾಹನದ ಜೊತೆಗೆ ಕಚೇರಿಯ ವಸ್ತುಗಳು ಹಸ್ತಾಂತರ
ಎಸಿಬಿಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಅಧಿಕಾರಿಗಳು ಹಾಗೂ ಇತರ ವೃಂದದ ಸಿಬ್ಬಂದಿಯನ್ನ ತಮ್ಮ ತೆಕ್ಕೆಗೆ ನೀಡಬೇಕು. ಎಸಿಬಿ ಪ್ರಧಾನ ಕಚೇರಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಭಾಗವಾರು ಎಸಿಬಿ ಕಚೇರಿಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಬೇಕು. ಪ್ರಕರಣಗಳ ವರ್ಗಾಯಿಸುವುದರ ಜೊತೆಗೆ ಎಸಿಬಿಯಲ್ಲಿ ಬಳಸುತ್ತಿದ್ದ ವಾಹನಗಳು, ಉಪಕರಣಗಳು, ಡಿಜಿಟಲ್ ಸಾಕ್ಷ್ಯಾಧಾರಗಳು, ಎಲೆಕ್ಟ್ರಾನಿಕ್ ಡಿವೈಸ್‌ಗಳು ಸೇರಿ ಇನ್ನಿತರ ಸೌಲಭ್ಯಗಳನ್ನು ಹಸ್ತಾಂತರಿಸುವಂತೆ ಪತ್ರದಲ್ಲಿ ಲೋಕಾಯುಕ್ತರು ಉಲ್ಲೇಖಿಸಿದ್ದಾರೆ.

ಸವಿಸ್ತಾರ ಪತ್ರ ಬರೆದಿರುವ ಲೋಕಾಯುಕ್ತರು
ಎಸಿಬಿಯು 2016ರಲ್ಲಿ ಸ್ಥಾಪನೆಯಾದಾಗ ನೀಡಲಾಗಿದ್ದ ಪೊಲೀಸ್ ಠಾಣೆ ಅಧಿಕಾರಗಳನ್ನು ಮೊಟಕುಗೊಳಿಸಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತ ಹಸ್ತಾಂತರಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಪ್ರಕರಣಗಳನ್ನ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ರಾಜ್ಯ ಸರ್ಕಾರವು ಎಸಿಬಿ ಮುಖ್ಯಸ್ಥರಿಗೆ ಆದೇಶಿಸಿತ್ತು. ಇದರಂತೆ ಕೇಸ್‌ಗಳ ವರ್ಗಾವಣೆ ಪ್ರಕ್ರಿಯೆ ಎಸಿಬಿ ನಡೆಸುತ್ತಿದೆ. ಪ್ರಕರಣ ಹಸ್ತಾಂತರ ಬಳಿಕ ತನಿಖೆ ಹಾಗೂ ವಿಚಾರಣೆ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ಅಗತ್ಯವಿದೆ. ದಾಳಿ ಅಥವಾ ಟ್ರ್ಯಾಪ್ ಕಾರ್ಯಾಚರಣೆ ನಡೆಸಲು ವಾಹನಗಳ ಅವಶ್ಯಕತೆಯಿದೆ. ಲೋಕಾಯುಕ್ತ ಪ್ರಧಾನ ಕಚೇರಿ ಕಿರಿದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜನೆಯಾದರೆ ಸ್ಥಳಾವಕಾಶ ತೊಂದರೆಯಾಗಲಿದೆ. ಜಿಲ್ಲಾ ಲೋಕಾಯುಕ್ತ ಕಚೇರಿಗಳಲ್ಲಿ ಇದೇ ಪರಿಸ್ಥಿತಿ ಎದುರಾಗಲಿದೆ.
ಹೀಗಾಗಿ ಪ್ರಸ್ತಕ ಕಾರ್ಯನಿರ್ವಹಿಸುತ್ತಿದ್ದ ಎಸಿಬಿ ಕಚೇರಿಗಳನ್ನೇ ಲೋಕಾಯುಕ್ತ ಕಚೇರಿಗಳಾಗಿ ಪರಿವರ್ತಿಸಬೇಕು. ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಹಾಗೂ ಕೆಪಿಎಸ್ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕು. ಎಲೆಕ್ಟ್ರಾನಿಕ್ ಉಪಕರಣಗಳು, ಕಂಪ್ಯೂಟರ್ ಇನ್ನಿತರ ಲಾಜೆಸ್ಟಿಕ್ ವಸ್ತುಗಳನ್ನು ಲೋಕಾಯುಕ್ತ ವ್ಯಾಪ್ತಿಗೆ ಒಳಪಡಿಸಬೇಕು. ಸರ್ಕಾರವು ಎಸಿಬಿ ಅಧಿಕಾರಿ-ಸಿಬ್ಬಂದಿ ವೇತನ, ಇನ್ನಿತರ ಖರ್ಚು-ವೆಚ್ಚಗಳನ್ನ ಲೋಕಾಯುಕ್ತಗೆ ವರ್ಗಾಯಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಎಸಿಬಿಯಲ್ಲಿರುವ ಅಧಿಕಾರಿಗಳು ಲೋಕಾಯುಕ್ತಕ್ಕೆ?
ಎಸಿಬಿಯಲ್ಲಿ ದಾಖಲಾಗಿರುವ ಸುಮಾರು 1 ಸಾವಿರ ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲಿ 300ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ. ಲೋಕಾಯುಕ್ತರ ಸೂಚನೆಯಂತೆ ಎಸಿಬಿ ಹಿರಿಯ ಅಧಿಕಾರಿಗಳು ಎಸಿಬಿಯಲ್ಲಿ ಕೆಲಸ ಮಾಡುತ್ತಿದ್ದ 141 ಪೊಲೀಸ್ ಕಾನ್ ಸ್ಟೇಬಲ್‌ಗಳು ಹಸ್ತಾಂತರಿಸಲಾಗಿದ್ದು ಇನ್ನಷ್ಟೇ ಲೋಕಾದಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಂಟು ಎಸಿಬಿ ವಲಯಗಳಿವೆ. ದಲಾಯತ್, ಲಿಪಿಕ ಸಿಬ್ಬಂದಿ ಹುದ್ದೆಗಳು ಹೊರತುಪಡಿಸಿದರೆ ಒಟ್ಟು 447 ಕಾರ್ಯಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿದ್ದಾರೆ.

ಸಿಬ್ಬಂದಿಗಳು ಎಷ್ಟಿದ್ದಾರೆ ಎಂಬುದರ ವಿವರ
ಎಸಿಬಿ ಲೋಕಾಯುಕ್ತ
ಎಡಿಜಿಪಿ 1 1
ಎಸ್ಪಿ 10 23
ಡಿವೈಎಸ್ಪಿ 35 43
ಪಿಐ 75 90
ಪಿಎಸ್ಐ 0 13
ಎಸ್ಐಐ 0 04
ಸಿಎಚ್ ಸಿ 50 145
ಸಿಪಿಸಿ 150 234
ಚಾಲಕರು 81 148
ಒಟ್ಟು 447 747
ಎಸಿಬಿ ಪ್ರಕರಣಗಳು ಲೋಕಾಯುಕ್ತಕ್ಕೆ ಹಸ್ತಾಂತರ ಆಗುತ್ತಿವೆ. ಇದರಿಂದಾಗಿ ಎಸಿಬಿಗೆ ಅಂಥ ಕೆಲಸವೇನು ಇರುವುದಿಲ್ಲ. ಲೋಕಾಯುಕ್ತಕ್ಕೆ ಬೇಕಾಗಿರು ಅಧಿಕಾರಿಗಳನ್ನು ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾಯಿಸಿದರೇ ಲೋಕಾಯುಕ್ತವು ಸಮರ್ಥವಾಗಿ ಕರ್ತವ್ಯ ನಿರ್ವಹಿಸಲಿದೆ.












Click it and Unblock the Notifications