Lok Sabha Election 2024: ವೇತನ ಹೆಚ್ಚಳದ ನಡುವೆಯೂ ಉದ್ಯೋಗ ಖಾತ್ರಿಗೆ ಇಲ್ಲ ಡಿಮ್ಯಾಂಡ್!
ಬೆಂಗಳೂರು, ಏಪ್ರಿಲ್. 01: ಇತ್ತೀಚೆಗಷ್ಟೇ ಉದ್ಯೋಗ ಖಾತ್ರಿ ಯೋಜನೆಯ ವೇತನ ಪರಿಷ್ಕರಣೆ ಮಾಡಲಾಗಿದೆ. ಇದು ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರ ಮಾಡುತ್ತಿರುಗವ ಗಿಮಿಕ್ ಎಂದು ಕಾಂಗ್ರೆಸ್ ಕೊಂಕು ನುಡಿಯುತ್ತಿದೆ. ಆದರೆ, ರಾಜ್ಯದಲ್ಲಿ ವೇತನ ಹೆಚ್ಚಳದ ನಡುವೆಯೂ ಉದ್ಯೋಗ್ಯ ಖಾತ್ರಿಗೆ ಡಿಮ್ಯಾಂಡ್ ಫುಲ್ ಡಲ್ ಆಗಿದೆ.
ದೇಶದಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದಾಗಿನಿಂದ ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್) ಅಡಿಯಲ್ಲಿ ಕೆಲಸ ಮಾಡುವವರ ಸಂಖ್ಯೆ ಗಣನೀಯವಾಗಿ ಕುಸಿದೆ. ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದ್ದರು ಕೂಡ ಬೇಡಿಕೆಯು ಶೇಕಡಾ 85 ರಷ್ಟು ಕುಸಿದಿದೆ.

ಪ್ರಚಾರಕ್ಕೆ ಹಾಜರ್.. ಉದ್ಯೋಗ ಖಾತ್ರಿಗೆ ಚಕ್ಕರ್!
ರಾಜಕೀಯ ಪಕ್ಷಗಳು ಈಗಾಗಲೇ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿವೆ. ಪ್ರಚಾರ ಮೆರವಣಿಗೆಯಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರ ಜೊತೆಗೆ ಇತರ ಕೃಷಿ, ಕಟ್ಟಡ ನಿರ್ಮಾಣ ಕಾರ್ಮಿಕರು ಕೂಡ ಸೇರಿಕೊಳ್ಳುತ್ತಾರೆ. ಹೀಗಾಗಿಯೇ ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡೆಕ್ಕನ್ ಹೆರಾಲ್ಡ್ ಮಾಹಿತಿಯ ಪ್ರಕಾರ ಚುನಾವಣೆ ಘೋಷಣೆಯಾದ ನಂತರ ರಾಜ್ಯದ 5,963 ಗ್ರಾಮ ಪಂಚಾಯತಿಗಳಲ್ಲಿ 60% ಗ್ರಾಮ ಪಂಚಾಯಿತಿಗಳಲ್ಲಿ ಒಂದೇ ಒಂದು ಕೆಲಸ ಕೂಡ ಆಗಿಲ್ಲ.

ಇದಕ್ಕೆ ಕಾರಣ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದ ಬಹುಪಾಲು ಕಾರ್ಮಿಕರು ಚುನಾವಣಾ ಪ್ರಚಾರಗಳಿಗೆ ತೆರಳುತ್ತಿದ್ದಾರೆ. ಇದಕ್ಕೆ ನರೇಗಾ ಯೋಜನೆಯಲ್ಲಿ ಸಂಬಳ ನಿಧಾನವಾಗಿ ಸಿಗುವುದು ಕೂಡ ಪ್ರಮುಖ ಕಾರಣ. ಇದಲ್ಲದೆ, ರಾಜಕೀಯ ಮೆರವಣಿಗೆಗಳು ಮತ್ತು ಮನೆ-ಮನೆ ಪ್ರಚಾರದಲ್ಲಿ ಭಾಗವಹಿಸಿದರೆ ದುಪ್ಪಟ್ಟು ಹಣ ಸಿಗಲಿದೆ. ಜೊತೆಗೆ ಉಚಿತ ಬ್ರೇಕ್‌ಫಾಸ್ಟ್ ಮತ್ತು ಊಟ ಸಹ ಸಿಗುತ್ತದೆ.
ವೇತನ ಹೆಚ್ಚಳದ ಬಳಿಕವೂ ಇಲ್ಲ ಡಿಮ್ಯಾಂಡ್!
ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕ್ಕೆ 316 ರೂಪಾಯಿ ಸಂಬಳ ಸಿಗುತ್ತಿತ್ತು. ಅದನ್ನು ಇತ್ತೀಚೆಗೆ 349 ರೂಪಾಯಿಗೆ ಹೆಚ್ಚಿಸಲಾಗಿದೆ. ನಿಯಮಗಳ ಪ್ರಕಾರ ಕೂಲಿಕಾರರು 15 ದಿನಕ್ಕೊಮ್ಮೆ ಕೂಲಿ ಪಡೆಯಬೇಕು. ಆದರೆ, ವೇತನ ಪಾವತಿಯಲ್ಲಿ ತುಂಬಾ ವಿಳಂಬವಾಗುತ್ತಿದ್ದು, ಕಾರ್ಮಿಕರು ನರೇಗಾ ಯೋಜನೆಯಿಂದಲೇ ಹೊರಗೆ ಉಳಿಯುತ್ತಿದ್ದಾರೆ.
ಇನ್ನು, ಉದ್ಯೋಗ ಖಾತ್ರಿ ಫಲಾನುಭವಿಗಳು ಡಿಸೆಂಬರ್ ಮೂರನೇ ವಾರದಲ್ಲಿ ತಮ್ಮ ಸಂಬಳ ಪಡೆದಿದ್ದಾರೆ. ಆದರೆ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಯಾವುದೇ ಸಂಬಳ ಪಡೆದಿಲ್ಲ. ಬಳಿಕ ಮಾರ್ಚ್ 21 ರಂದು ವೇತನ ಪಡೆದಿದ್ದಾರೆ. ಚುನಾವಣಾ ಪ್ರಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ 2023-24ರಲ್ಲಿ ಈ ಯೋಜನೆಯಡಿ 13.81 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಪ್ರತಿ ವ್ಯಕ್ತಿಯ ದಿನವನ್ನು ಒಬ್ಬ ವ್ಯಕ್ತಿ ಎಂಟು ಗಂಟೆಗಳ ಕಾಲ ಕೆಲಸ ಮಾಡುತ್ತಾನೆ ಎಂದು ಲೆಕ್ಕಹಾಕಲಾಗುತ್ತದೆ. 100 ಜನರು ಎಂಟು ಗಂಟೆಗಳ ಕಾಲ ಕೆಲಸ ಮಾಡಿದರೆ ಅದನ್ನು 100 ಮಾನವ ದಿನಗಳು ಎಂದು ಪರಿಗಣಿಸಲಾಗುತ್ತದೆ. ಇತ್ತ, ಕೂಲಿಕಾರರು ಚುನಾವಣಾ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿರುವ ಕಾರಣ ಕಟ್ಟಡ ನಿರ್ಮಾಣ ಕೆಲಸಗಳು, ಕೃಷಿ ಕೆಲಸಗಳು ಮತ್ತು ಇತರರ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ.












Click it and Unblock the Notifications