ಜಾತ್ಯತೀತ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತ ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು
ಬೆಂಗಳೂರು, ಏಪ್ರಿಲ್ 7: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಚಿಂತಕರು, ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಕರೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಬೆಂಬಲಿಸಿ ಸಂವಿಧಾನವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಅವರು ಮತದಾರರಿಗೆ ಮನವಿ ಮಾಡಿದರು.
ಹೆಚ್ ಎಸ್ ದೊರೆಸ್ವಾಮಿ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧೋರಣೆಯನ್ನು ಖಂಡಿಸಿದರು. ಪ್ರಧಾನಮಂತ್ರಿಗಳು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಆ ಗೋಷ್ಠಿಯಲ್ಲಿ ತಾನು ಇಂಗ್ಲೀಷ್‍ನಲ್ಲಿ ಮಾತನಾಡುವುದಿಲ್ಲ. ಬದಲಿಗೆ ಹಿಂದಿಯಲ್ಲಿ ಮಾತನಾಡುವುದಾಗಿ ಪತ್ರಕರ್ತರಲ್ಲಿ ಹೇಳಿಕೊಂಡರು. ಆಗ ಪತ್ರಕರ್ತರೊಬ್ಬರು ಹಿಂದಿಯಲ್ಲೇ ಮಾತನಾಡಿ. ಆದರೆ, ನಾವು ಕೇಳುವ ಪ್ರಶ್ನೆಗೆ ಯಾವುದೇ ಕಾರಣಕ್ಕೂ ನುಣುಚಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದರು.
ಅಷ್ಟಕ್ಕೆ ಪ್ರಧಾನಮಂತ್ರಿಗಳು ಪತ್ರಿಕಾಗೋಷ್ಠಿಯನ್ನು ನಡೆಸುವುದನ್ನೇ ಬಿಟ್ಟಿದ್ದಾರೆ. ಒಂದು ವೇಳೆ ನಡೆದರೂ ತಮಗೆ ಸಹ್ಯವಾಗುವಂತಹ ಪ್ರಶ್ನೆಗಳನ್ನು ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇಂತಹ ಪ್ರಧಾನಮಂತ್ರಿಗಳು ದೇಶದ ಸಮಸ್ಯೆಗಳನ್ನು ಪತ್ರಿಕೆಗಳ ಮುಂದೆ ಹಂಚಿಕೊಳ್ಳದೇ ಇನ್ನೆಲ್ಲಿ ಹಂಚಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಪ್ರೋ ಮರುಳಸಿದ್ದಯ್ಯ, ಪ್ರೋ ಜಿ ಕೆ ಗೋವಿಂದರಾವ್, ಡಾ ಕೆ ಷರಿಫಾ, ಡಾ ವಿಜಯಮ್ಮ, ಇಂದೂಧರ ಹೊನ್ನಾಪುರ, ಬಿ ಟಿ ಲಲಿತಾ ನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದು ಪ್ರಜಾಪ್ರಭುತ್ವದ ಅಣಕವಾಗಿದೆ
ಸಂಸತ್ತಿಗೆ ಬರುತ್ತಾರೆ. ಅವರು ಎರಡು ನಿಮಿಷ ಮಾತಾನಾಡಿದ್ದನ್ನು ಬಿಟ್ಟರೆ ಹೆಚ್ಚು ಸಮಯ ಮಾತನಾಡಿದ್ದನ್ನು ನೋಡಿಯೇ ಇಲ್ಲ. ಮಾತನಾಡಿದರೂ ಅವರ ಮಾತಿನಲ್ಲಿ ಯಾವುದೇ ಸ್ಪಷ್ಟತೆಯೇ ಇರುವುದಿಲ್ಲ ಎಂದು ಟೀಕಿಸಿದ ದೊರೆಸ್ವಾಮಿ ಅವರು, ಪ್ರಧಾನಮಂತ್ರಿಗಳು ದೇಶದ ಸಮಸ್ಯೆಗಳ ಬಗ್ಗೆ ಪತ್ರಕರ್ತರ ಮುಂದೆ ಹೇಳಿಕೊಳ್ಳುವ ಬಗ್ಗೆ ರೇಡಿಯೋದಲ್ಲಿ ಮನ್ ಕಿ ಬಾತ್ ಎಂಬ ಕಾರ್ಯಕ್ರಮದ ಮೂಲಕ ಭಾಷಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಂಸತ್ತಿನಲ್ಲಿ ಒಂದೆರಡು ನಿಮಿಷ ಮಾತನಾಡಲಾಗದವರು ಸಾರ್ವಜನಿಕ ಸಮಾರಂಭಗಳಲ್ಲಿ ಘರ್ಜಿಸುತ್ತಾರೆ. ಇದನ್ನು ಬಿಟ್ಟರೆ ದೇಶದ ಅಭಿವೃದ್ಧಿ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮಾತನಾಡಿ
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸದೇ, ಈತನನ್ನು ಹೀಗೆಯೇ ಬಿಟ್ಟರೆ ಪ್ರಜಾಪ್ರಭುತ್ವ ನಾಶವಾಗಿ ಏಕಚಕ್ರಾಧಿಪತ್ಯ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದಲ್ಲಿ ಆಸಕ್ತಿ ಇರುವ ನಾವೆಲ್ಲಾ ಸೇರಿ ನಾವು ಈ ಒಂದು ಗಂಡಾಂತರದಿಂದ ದೇಶವನ್ನು ಪಾರು ಮಾಡಬೇಕಿದೆ ಎಂದು ಹೇಳಿದ ದೊರೆಸ್ವಾಮಿ ಅವರು, ನಾವೆಲ್ಲಾ ಸೇರಿ ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಿ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ,
ರಾಜ್ಯಸಭಾ ಸದಸ್ಯ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ, ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರ ಆಶೀರ್ವಾದ ನಮ್ಮ ಮೇಲಿರಬೇಕು. ಬಿಕ್ಕಟ್ಟಿನಲ್ಲಿ ಸಿಲುಕಿರುವ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನಿಮ್ಮ ಮಾರ್ಗದರ್ಶನ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ಉಳಿಸುವ ಬಗ್ಗೆ ಕಾಳಜಿ ಇರುವ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಸಾಹಿತಿ ಡಾ.ಎಲ್. ಹನುಮಂತಯ್ಯ ಅವರು ಮಾತನಾಡಿ
ರಾಜ್ಯಸಭಾ ಸದಸ್ಯ ಹಾಗೂ ಸಾಹಿತಿ ಡಾ.ಎಲ್. ಹನುಮಂತಯ್ಯ ಅವರು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ದೇಶದ ರಾಜಕಾರಣ ದ್ವೇಷದ ರಾರಾಜಕಾರಣವಾಗಿ ಮಾರ್ಪಟ್ಟಿದೆ. ಸಂವಿಧಾನದ ಆಶಯಗಳ ಮೇಲೆ ಪ್ರಮಾಣವಚನ ಸ್ವೀಕರಿಸಿ ಬಂದವರು ಆ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡಲು ಆರಂಭ ಮಾಡಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಬುದ್ಧಿಜೀವಿಗಳು, ಲೇಖಕರ ಕೊಲೆ ಬಗ್ಗೆ
ಅಭಿವ್ಯಕ್ತಿ ಹಕ್ಕು, ಪ್ರಾರ್ಥನೆ ಹಕ್ಕು, ನಮ್ಮ ನಂಬಿಕೆಯಂತೆ ಜೀವಿಸುವ ಹಕ್ಕು, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಈ ಎಲ್ಲಾ ಹಕ್ಕುಗಳಿಗೆ ಈಗ ಸಂಚಕಾರ ಬಂದಿದೆ ಎಂಬುದು ನಮ್ಮೆಲ್ಲರ ಆತಂಕವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಾಲನೆ ಮಾಡಿದರೆ ನಮ್ಮನ್ನು ಕೊಲ್ಲಲಾಗುತ್ತಿದೆ. ಬುದ್ಧಿಜೀವಿಗಳು, ಲೇಖಕರ ಕೊಲೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ ನಾಲ್ಕೈದು ವರ್ಷಗಳಲ್ಲಿ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರಿಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಕೇಸುಗಳನ್ನು ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಶಕ್ತಿಗಳು ಮತ್ತೆ ಅಧಿಕಾರಕ್ಕೆ ತರುವುದನ್ನು ಬೇಡ ಎಂದು ಮತದಾರರಿಗೆ ಮನವಿ ಮಾಡುತ್ತಿದ್ದೇವೆ ಎಂದರು.

ಇದು ಪ್ರಜಾಪ್ರಭುತ್ವದ ಒಳ್ಳೆಯ ಲಕ್ಷಣವಲ್ಲ
ಜಾತಿ ಆಧಾರದ ಮೇಲೆ, ಲಿಂಗ, ಧರ್ಮದ ಆಧಾರದ ಮೇಲೆ ಅಸಮಾನತೆ ಇರಬಾರದು ಎಂಬುದು ನಮ್ಮ ಸಂವಿಧಾನದ ಆಶಯವಾಗಿದೆ. ಆದರೆ, ಧರ್ಮದ ಆಧಾರದಲ್ಲಿ ಬಹು ದೊಡ್ಡ ಅಸಮಾನತೆ ಉಂಟಾಗುತ್ತಿದೆ. ಅಮಾಯಕರ ಮೇಲೆ ಗುಂಪು ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದು ಪ್ರಜಾಪ್ರಭುತ್ವದ ಒಳ್ಳೆಯ ಲಕ್ಷಣವಲ್ಲ. ಇಂತಹ ಪರಿಸ್ಥಿತಿ ನಮಗೆ ಬೇಕೆ? ದೇಶವನ್ನು ವಿಭಜನೆ ಮಾಡುತ್ತಿರುವವರು ಲಿಂಚಿಂಗ್, ದ್ವೇಷದ ರಾಜಕಾರಣ ಮಾಡುತ್ತಿರುವವರು ವಿಭಜನೆ ಮಾಡುತ್ತಿದ್ದಾರೆ. ಇಂತಹ ರಾಜಕಾರಣವನ್ನು ನಾವು ವಿರೋಧಿಸುತ್ತಿದ್ದೇವೆ. ಇದರ ವಿರುದ್ಧ ದನಿ ಎತ್ತಿತದೆ ಕೊಲೆ ಆಗುತ್ತದೆ ಎಂಬ ಭಯ ಲೇಖಕರನ್ನು, ಕಲಾವಿದರನ್ನು ಕಾಡುತ್ತಿದೆ. ನಮಗೆ ಬೇಕಾಗಿರುವುದು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸರ್ಕಾರ ಬೇಕು ಎಂದು ಅಭಿಪ್ರಾಯಪಟ್ಟರು.

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮಾತನಾಡಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮಾತನಾಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಒಬ್ಬ ಅವಿವೇಕಿಯಾಗಿದ್ದು, ಮತಾಂಧನಂತೆ ಮಾತನಾಡುತ್ತಾನೆ. ಮಹಿಳೆಯರ ಬಗ್ಗೆ ಆತ ಯಾವ ರೀತಿಯಲ್ಲಿ ಮಾತನಾಡಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಇಂತಹವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿದರೆ ಏನಾಗುತ್ತದೆ ಎಂಬುದನ್ನು ಯೋಚನೆ ಮಾಡಿ ಎಂದರು.
ಮತ್ತೋರ್ವ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು. ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರನ್ನು ಆಯ್ಕೆ ಮಾಡೋಣ ಎಂದು ಹೇಳಿದರು.

ಡಾ.ಕೆ.ಮರುಳಸಿದ್ದಪ್ಪ ಅವರು ಮಾತನಾಡಿ
ಡಾ.ಕೆ.ಮರುಳಸಿದ್ದಪ್ಪ ಅವರು ಮಾತನಾಡಿ, ದೇಶದ ಭದ್ರತೆ ಎಂದರೆ ಗಡಿ ಭದ್ರತೆಯಷ್ಟೇ ಅಲ್ಲ. ಆರ್ಥಿಕತೆ, ಆಹಾರ, ಅಭಿವೃದ್ಧಿ, ಸಮಾಜ, ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರೆ ಕ್ಷೇತ್ರಗಳ ಭದ್ರತೆಯೂ ಇರಬೇಕು.
ನಮ್ಮ ಸೇನೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಾಹಸವನ್ನು ತೋರಿಸುತ್ತಲೇ ಬಂದಿದೆ. ಆದರೆ, ಈಗ ಅದನ್ನು ತಮ್ಮ ಸಾಧನೆ ಎಂದು ಆ ವಿಚಾರವನ್ನು ಬಳಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಅವರ ಸಣ್ಣತನದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದ ಅವರು, ಸೇನೆಯ ಶೌರ್ಯವನ್ನು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ತಾಕೀತು ಮಾಡಿದರು.
ದೇಶವನ್ನು ಕಿತ್ತು ತಿನ್ನುತ್ತಿರುವ ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ದೇಶಪ್ರೇಮ ಯಾವುದು? ದೇಶದ್ರೋಹ ಯಾವುದು ಎಂಬ ವಿಚಾರಗಳ ಬಗ್ಗೆ ಅಪವ್ಯಾಖ್ಯಾನಗಳು ನಡೆಯುತ್ತಿರುವುದು ವಿಷಾದಕರ ಎಂದರು.

ದೇಶದ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ
ಮೋದಿ ವಿರೋಧಿಗಳು ಎಂದರೆ ದೇಶದ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ನಾಶ ಆಗುವ ಲಕ್ಷಣವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರು ಸೇರಿದಂತೆ ಎಲ್ಲರೂ ಜಾಗೃತರಾಗಬೇಕಾದ ಅಗತ್ಯವಿದೆ ಎಂದು ಹೇಳಿದ ಅವರು, ಎಲ್ಲರೂ ಒಟ್ಟಾಗಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಧರ್ಮದ ವಿಚಾರದ ಬಗ್ಗೆ ಮಾತನಾಡುವವರ ಬಗ್ಗೆ ಮೋದಿ ಬುದ್ಧಿ ಹೇಳುವುದಿಲ್ಲ. ಆದರೆ, ಮೋದಿ ವಿರುದ್ಧ ಮಾತನಾಡಿದರೆ ಹಲ್ಲೆ ಮಾಡುತ್ತಾರೆ. ನನಗೂ ಈ ರೀತಿಯ ಅನುಭವವಾಗಿದೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ಆಗುವ ಸಂದರ್ಭವನ್ನೂ ನಾನು ಎದುರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಇನ್ನೊಂದು ಅವಧಿಗೆ ಮೋದಿ ಆಯ್ಕೆಯಾಅದರೆ ದೇಶದಲ್ಲಿ ಬಹಳ ಕಷ್ಟದ ಪರಿಸ್ಥಿತಿ ಎದುರಾಗಲಿದೆ.












Click it and Unblock the Notifications