ಲೊಡ್ಡೆ ಸಿನಿಮಾದಲ್ಲಿ ಲಾಸ್: ವಂಚನೆ ಮಾಡಿ ಲಾಕ್ ಆದ ನಿರ್ಮಾಪಕ!
ಬೆಂಗಳೂರು, ಜೂ. 4: ಸಿನಿಮಾ ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದ್ದ ಚಿತ್ರ ನಿರ್ಮಾಪಕ ಇದೀಗ ರಿಯಲ್ ಎಸ್ಟೇಟ್ ವ್ಯಾಪಾರದ ಸೋಗಿನಲ್ಲಿ ಮೋಸ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಿರ್ಮಾಪಕ ಮಂಜುನಾಥ್ ಸೇರಿ ನಾಲ್ವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಹಾಸ್ಯ ನಟ ಕೋಮಲ್ ಕುಮಾರ್ ಅಭಿನಯದ 'ಲೊಡ್ಡೆ' ಸಿನಿಮಾ ನಿರ್ಮಾಣ ಮಾಡಿದ್ದ ಮಂಜುನಾಥ್, ಶಿವಕುಮಾರ್, ಗೋಪಾಲ್, ಚಂದ್ರಶೇಖರ್ ಬಂಧಿತರು. ಕೋಟ್ಯಂತರ ರೂಪಾಯಿ ಸಿನಿಮಾಗೆ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿದ್ದ. ಸಿನಿಮಾ ಒಂದೇ ದಿನಕ್ಕೆ ಮೂಲೆ ಸೇರಿತ್ತು. ಹಾಕಿದ್ದ ಬಂಡವಾಳ ಕೂಡ ಬಂದಿರಲಿಲ್ಲ. ಇದರಿಂದ ಬೇಸತ್ತ ನಿರ್ಮಾಪಕ ಮಂಜುನಾಥ್, ತಮ್ಮ ಗೆಳೆಯರ ಜತೆ ನಿವೇಶನ ಡೀಲಿಂಗ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಈ ಸಂಬಂಧ ರಾಜಾಜಿನಗರದಲ್ಲಿ ಕಚೇರಿ ತೆರೆದು ನಿವೇಶನ ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ.
ಈಗಲ್ ಟ್ರಿ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಎಂಬ ಹೆಸರಿನ ಕಂಪನಿ ತೆಗೆದಿದ್ದರು. ನಿವೇಶನ ಮಾರಾಟ ಮಾಡುವ ಜಾಹೀರಾತುಗಳನ್ನು ನೀಡಿದ್ದರು. ಇದನ್ನು ನೋಡಿ ನಿರ್ಮಾಪಕ ಮಂಜುನಾಥ್ ನನ್ನು ಪುಷ್ಪ ಕುಮಾರ್ ಎಂಬಾತ ಸಂಪರ್ಕಿಸಿದ್ದ. ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಹೇಳಿ 2 ಲಕ್ಷ ರೂ. ಹಾಕಿಸಿಕೊಂಡಿದ್ದರು. ಯಾರದ್ದೋ ನಿವೇಶನ ತೋರಿಸಿ ಮುಂಗಡ ಹಣ ಪೆಡೆದಿದ್ದ ಮಂಜುನಾಥ್‌ನನ್ನು ದಾಖಲೆಗಳು ಕೇಳಿದಾಗ ಕೊಟ್ಟಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಪುಷ್ಪಕುಮಾರ್ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮಂಜುನಾಥ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ನಾಲ್ವರು ಹಲವರಿಗೆ ನಿವೇಶನ ಹೆಸರನಲ್ಲಿ ವಂಚನೆ ಮಾಡಿರುವುದು ಗೊತ್ತಾಗಿದೆ. ರಾಜಾಜಿನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಾಯು ವಿಹಾರಿಗಳಿಗೆ ಬೆದರಿಸಿ ಸುಲಿಗೆ:
ಕಬ್ಬನ್ ಪಾರ್ಕ್‌ನಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯನ್ನು ಪೊಲೀಸರ ಸೋಗಿನಲ್ಲಿ ಹೆದರಿಸಿ ಹಣ ಪಡೆದುಕೊಂಡು ಪರಾರಿಯಾಗಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ವಾಯು ವಿವಾರ ಮಾಡುವರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುವ ಗ್ಯಾಂಗ್ ಹುಟ್ಟಿಕೊಂಡಿದೆ. ಈ ಗ್ಯಾಂಗ್ ಕಣ್ಣಿಗೆ ಬಿದ್ದರೆ ಹಣ ಕಳೆದಕೊಳ್ಳುವುದು ಗ್ಯಾರೆಂಟಿ. ಹೈಕೋರ್ಟ್, ಪೊಲೀಸ್ ಅಧಿಕಾರಿಗಳು, ವಿಧಾನಸೌಧ ಸಮೀಪದಲ್ಲಿಯೇ ಇರುವ ಕಬ್ಬನ್ ಪಾರ್ಕ್ ನಲ್ಲಿ ಹೊಸತನದ ಸುಲಿಗೆ ದಂಧೆ ಶುರುವಾಗಿದೆ.

ರಾಜೇಶ್ ಎಂಬಾತ ಕಬ್ಬನ್ ಪಾರ್ಕ್‌ನಲ್ಲಿ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿ, ತಾನು ಪೊಲೀಸ್, ನೀನು ಇಲ್ಲೇನು ಮಾಡುತ್ತಿದ್ದಿಯಾ ? ಎಂದು ಪ್ರಶ್ನಿಸಿದ್ದಾನೆ. ಮೊದಲು ತಾನು ಪೊಲೀಸ್ ಎಂದು ಪರಿಚಯಿಸಿಕೊಂಡ ಸುಲಿಗೆಕೋರ, ಇಲ್ಲಿ ಕೊಲೆ ನಡೆದಿದೆ. ನೀನೇ ಇದನ್ನು ಮಾಡಿದ್ದೀಯ ಎಂದು ಕೇಸು ದಾಖಲಿಸುತ್ತೇನೆ. ಈ ಕೇಸಿನಿಂದ ದೂರ ಇಡಬೇಕಾದರೆ ಹಣ ಕೊಡು ಎಂದು ಹೆದರಿಸಿದ್ದಾನೆ. ಸುಲಿಗೆಕೋರನ ಮಾತು ನಂಬಿ ರಾಜೇಶ್ ಕಾವೇರಿಭವನದ ಬಳಿ ಎಟಿಎಂನಲ್ಲಿ 40 ಸಾವಿರ ರೂ. ತೆಗೆದು ಕೊಟ್ಟಿದ್ದಾನೆ. ಹಣ ಪಡೆದ ಬಳಿಕ ಅರೋಪಿ ಎಸ್ಕೇಪ್ ಆಗಿದ್ದು, ರಾಜೇಶ್ ಈ ಕುರಿತು ಮೊದಲು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ವರ್ಗಾವಣೆ ಮಾಡಲಾಗಿದೆ.












Click it and Unblock the Notifications