Second Airport: ರಾಮನಗರ ಅಥವಾ ಬೆಂ.ಗ್ರಾಮಾಂತರದಲ್ಲಿ ಹೊಸ ಏರ್‌ಪೋರ್ಟ್?
ಬೆಂಗಳೂರು, ಜುಲೈ 02: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಲಿ ಕೆಐಎ ಜನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ವ್ಯಾಪ್ತಿಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಸರ್ಕಾರ ಕೈ ಹಾಕಿದೆ. ಈ ಸಂಬಂಧ ಪ್ರಾಥಮಿಕ ಕಾರ್ಯಗಳಿಗೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
ತಮಿಳುನಾಡಿನ ಹೊಸೂರು ಬಳಿ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಆ ರಾಜ್ಯ ಸರ್ಕಾರ ಘೋಷಿಸಿದ ಬೆನ್ನಲ್ಲೆ, ಈ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಕರ್ನಾಟಕ ಸರ್ಕಾರ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಜಾಗ ಹುಡುಕುವ ಕೆಲಸಕ್ಕೆ ಚಾಲನೆ ನೀಡಿದೆ. ಅಲ್ಲದೇ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಹಾಲಿ ಬೆಂಗಳೂರು ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಎರಡು ಟರ್ಮಿನಲ್ ಗಳಿಗೂ ವಾರ್ಷಿಕವಾಗಿ ವಿಮಾನಯಾನ ಮಾಡುವ ಪ್ರಯಾಣಿಕ ಸಂಖ್ಯೆ ಏರುತ್ತಲೇ ಇದೆ. ಪ್ರತಿ ವರ್ಷ ಶೇಕಡಾ 10ರಷ್ಟು ಏರಿಕೆ ಆಗುತ್ತಲೇ ಇದೆ. ಹೀಗಾಗಿ ಇದರ ಮೇಲಿನ ಒತ್ತಡ ಕಡಿಮೆ ಮಾಡಲು ರಾಜ್ಯ ಸರ್ಕಾರ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಿಂತನೆ ನಡೆಸಲು ಆರಂಭಿಸಿತು.
ಜಾಗಕ್ಕಾಗಿ ಎಲ್ಲೆಲ್ಲಿ ಹುಡುಕಾಟ?
ಇದೇ ವೇಳೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಘೋಷಣೆ ಆದ ಬೆನ್ನಲ್ಲೆ ಕರ್ನಾಟಕ ಸರ್ಕಾರ ಅಲರ್ಟ್ ಆಗಿದೆ. ಎರಡನೇ ವಿಮಾನ ನಿಲ್ದಾಣಕ್ಕಾಗಿ ಬೆಂಗಳೂರು ಗ್ರಾಮಾಂತರ ಹಾಗು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಜಾಗ ಹುಡುಕಾಟದಲ್ಲಿದೆ. ಮತ್ತೊಂದು ಕಡೆ ನೆಲಮಂಗಲ/ತುಮಕೂರು ಸುತ್ತಮುತ್ತ ಸಹ ಜಾಗ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಮತ್ತೊಂದೆಡೆ ಸಚಿವ ಎಂಬಿ ಪಾಟೀಲ್ ಅವರು ಈಗಾಗಲೇ ನೀಡಿದ್ದ ಸೂಚನೆಯಂತೆ ಅಧಿಕಾರಿಗಳು ಡಿಪಿಆರ್ ಸಿದ್ಧಪಡಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ KIA ನಿರ್ಮಾಣದ ವೇಳೆ ಈ ನಿಲ್ದಾಣದ ಸುತ್ತಮುತ್ತಲಿನ 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮುಂದಿನ 25 ವರ್ಷಗಳ ಕಾಲ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸದಂತೆ ಒಪ್ಪಂದ ಮಾಡಿಕೊಂಡಿತ್ತು. ಆ ಒಪ್ಪಂದ ಪೂರ್ಣಗೊಳ್ಳಲು ಇನ್ನೂ 9 ವರ್ಷಗಳು (2033) ಬಾಕಿ ಇವೆ. ಹೀಗಿರುವಾಗಲೇ ಕರ್ನಾಟಕ ಸರ್ಕಾರ ಎರಡನೇ ವಿಮಾನ ನಿಲ್ದಾಣ ವಿಚಾರವಾಗಿ ಸೂಕ್ತ ತಿರ್ಮಾನ ಕೈಗೊಂಡಿದೆ ಎನ್ನಲಾಗಿದೆ.
150 ಕಿ.ಮೀ. ಒಪ್ಪಂದ ಯಾಕೆ?
ಹಾಲಿ ಇರುವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಾರ್ಷಿಕವಾಗಿ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಸಾವಿರಾರು ವಿಮಾನಗಳು ಹಾರಾಟ ನಡೆಸುತ್ತವೆ. ಈ ಮಧ್ಯೆ 150 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಿದರೆ ಹಾಲಿ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ತೊಂದರೆ ಆಗುತ್ತದೆ. ಟೇಕ್ ಆಫ್, ಲ್ಯಾಂಡಿಂಗ್, ಇನ್ನಿತರ ಸಮಸ್ಯೆ ಉಂಟಾಗಬಹುದು ಎಂಬ ಕಾರಣಕ್ಕೆ ಅಂದು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಒಪ್ಪಂದ ಅಂತ್ಯದ ಹೊತ್ತಿಗೆ ಹೊಸ ಏರ್‌ಪೋರ್ಟ್ ಸಿದ್ಧ?
ಸದ್ಯ ಏರ್‌ಫೋರ್ಟ ಅಥಾರಿಟಿ ಆಫ್ ಇಂಡಿಯಾದ ಸೂಚನೆ ಮೇರೆಗೆ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಅಥವಾ ಬೇರೆ ಕಡೆಗಳಲ್ಲಿ ಸಾವಿರಾರು ಎಕರೆ ಜಾಗ ಹುಡುಕಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಒಟ್ಟಾರೆ ಎರಡನೇ ವಿಮಾನ ನಿಲ್ದಾಣಕ್ಕೆ ಡಿಪಿಆರ್ ಆಗಬೇಕು, ಜಾಗ ಸಿಗಬೇಕು. ಡಿಪಿಆರ್‌ಗೆ ಅನುಮೋದನೆ ದೊರೆಯಬೇಕು. ಗುರುತಿಸಿದ ಜಾಗದ ಭೂಸ್ವಾಧಿನಕ್ಕೆ ಚಾಲನೆ ಸಿಗಬೇಕು.
ಯಾವುದೇ ತಂಟೆ ತಕರಾರಿಲ್ಲದೇ ಅದು ಸರ್ಕಾರದ ವಶವಾಗಬೇಕು. ಬಳಿಕ ಟೆಂಡರ್ ಕರೆದು ನಿರ್ಮಾಣಕ್ಕೆ ನೀಡಬೇಕು. ಅದಾಗಿ ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ತಲೆ ಎತ್ತಲಿದೆ. ಅಷ್ಟರಲ್ಲಾಗಲೇ ಕೆಐಎ ಜತೆಗಿನ ಒಪ್ಪಂದದ ಅವಧಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ದೂರದೃಷ್ಟಿಯ ಯೋಜನೆ ಇದಾಗಿದೆ.












Click it and Unblock the Notifications