ಸ್ವಾತಂತ್ರ್ಯೋತ್ಸವ ಪುಷ್ಪಪ್ರದರ್ಶನಕ್ಕೆ ಮನಸೋತವರು 5 ಲಕ್ಷ ಮಂದಿ
ಬೆಂಗಳೂರು, ಆಗಸ್ಟ್ 16: ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಗಸ್ಟ್ 4ರಿಂದ ಪುಷ್ಪ ಪ್ರದರ್ಶನ ಆರಂಭಗೊಂಡಿತ್ತು. ಆಗಸ್ಟ್ 15ರಂದು ಕೊನೆಯ ದಿನ 5 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ.
ಲಾಲ್‌ಬಾಗ್‌ಗೆ ನಿರೀಕ್ಷೆಗಿಂತಲೂ ಹೆಚ್ಚಿನ ಮಂದಿ ಭೇಟಿ ನೀಡಿದ್ದು, ಸುಸೂತ್ರವಾಗಿ ಪ್ರದರ್ಶನ ಮುಕ್ತಾಯಗೊಂಡಿದೆ. 2.36 ಕೋಟಿಗೂ ಅಧಿಕ ಟಿಕೆಟ್ ಹಣ ಸಂಗ್ರಹವಾಗಿದೆ. ಪ್ರದರ್ಶನದ ಕೊನೆಯ ದಿನವಾದ ಬುಧವಾರ 1,28,407 ವಯಸ್ಕರು, 48500 ಮಕ್ಕಳು ಸೇರಿ 1,76,907 ಜನ ಭೇಟಿ ನೀಡಿದ್ದು ಟಿಕೆಟ್ ಶುಲ್ಕದ ಮೂಲಕ 75.18 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.
ವಾಹನ ನಿಲುಗಡೆಗೆ ಶಾಂತಿನಗರ ಬಸ್ ನಿಲ್ದಾಣ, ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ, ಅಲ್‌ಅಮೀನ್ ಕಾಲೇಜುಗಳ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಹೆಚ್ಚಿನ ವಾಹನಗಳು ಬಂದಿದ್ದರಿಂದ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಲಾಲ್‌ಬಾಗ್‌ನ ಮುಖ್ಯದ್ವಾರ, ಹೊಸೂರು ರಸ್ತೆ,ಶಾಂತಿನಗರ ಬಸ್ ನಿಲ್ದಾಣ, ಬಳಿ ಭಾರಿ ಸಂಖ್ಯೆಯಲ್ಲಿ ವಾಹನಗಳು ಜಮಾವಣೆಗೊಂಡಿದ್ದವು. ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಬುಧವಾರ ಬೆಳಗ್ಗೆಯಿಂದಲೇ ಪ್ರದರ್ಶನಕ್ಕೆ ಜನಸಾಗರ ಹರಿದುಬಂದಿತ್ತು, ಮಧ್ಯಾಹ್ನದ ವೇಳೆಗೆ ಲಾಲ್‌ಬಾಗ್‌ನಾದ್ಯಂತ ಜನಜಂಗುಳಿ ಕಂಡುಬಂತು. ಗಾಜಿನ ಮನೆಗೆ ತಲುಪಲು ಜನರು ಕಷ್ಟಪಡಬೇಕಾಯಿತು. ಲಾಲ್‌ಬಾಗ್‌ನ ನಾಲ್ಕು ದ್ವಾರಗಳಲ್ಲೂ ಜನಸಂದಣಿ ಕಂಡುಬಂದಿತ್ತು. ಯೋಧರಿಗೆ ಪುಷ್ಪನಮನ ಸಲ್ಲಿಸಲು ಈ ಬಾರಿ ಭಾರತದ ಸಮಗ್ರ ರಕ್ಷಣಾ ವ್ಯವಸ್ಥೆಯು ಅನಾವರಣಗೊಂಡಿತ್ತು.












Click it and Unblock the Notifications