KWIN City Updates: ಪ್ರಾಕ್ಸ್ಏರ್ ಇಂಡಿಯಾದಿಂದ ರಾಜ್ಯದಲ್ಲಿ 210 ಕೋಟಿ ರೂ. ಹೂಡಿಕೆ: ಎಂಬಿ ಪಾಟೀಲ್
ಲಂಡನ್/ಬೆಂಗಳೂರು, ನವೆಂಬರ್ 27: ಕೈಗಾರಿಕಾ ಅನಿಲ ಮತ್ತು ಸಂಬಂಧಿತ ಉತ್ಪಾದನೆಯಲ್ಲಿ ಸಕ್ರಿಯವಾಗಿರುವ ಪ್ರಾಕ್ಸ್ಏರ್ ಇಂಡಿಯಾ ಕಂಪನಿಯು ಕರ್ನಾಟಕದಲ್ಲಿ ಲಿಕ್ವಿಡ್ ಆಕ್ಸಿಜನ್ ಮತ್ತು ನೈಟ್ರೋಜನ್ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಮಾಹಿತಿ ನೀಡಿದರು.
ಹೂಡಿಕೆ ಆಕರ್ಷಣೆಗಾಗಿ ಅಧಿಕೃತ ನಿಯೋಗದೊಂದಿಗೆ ಲಂಡನ್ ಪ್ರವಾಸ ಕೈಗೊಂಡಿರುವ ಸಚಿವರು ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದಾರೆ. ಪ್ರಾಕ್ಸ್ಏರ್ ಇಂಡಿಯಾ ಕಂಪನಿಯು ಕರ್ನಾಟಕದಲ್ಲಿ ಮುಂದಿನ 3 ವರ್ಷಗಳಲ್ಲಿ ಬರೋಬ್ಬರಿ 210 ಕೋಟಿ ರೂ. ಬಂಡವಾಳ ಹೂಡಲಿದೆ. ಈ ಹಣಕಾಸು ವರ್ಷದಿಂದಲೇ ತನ್ನ ಈ ಹೂಡಿಕೆ ಆರಂಭಿಸಲಿದೆ. ಸರ್ಕಾರ ಕಂಪನಿ ಜೊತೆಗೆ ಮಹತ್ವ ಒಪ್ಪಂದಕ್ಕೆ ಸಹಿ ಹಾಕಿದೆ. ನಮ್ಮ ಸರ್ಕಾರ ಕೂಡ ಭೂಮಿ, ಏಕಗವಾಕ್ಷಿ ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ತ್ವರಿತವಾಗಿ ಪೂರೈಸಲಿದೆ ಎಂದು ತಿಳಿಸಿದರು.

ವೈಮಾಂತರಿಕ್ಷ, ರಕ್ಷಣೆ ಮತ್ತು ಡ್ರೋನ್ ವಲಯಗಳಲ್ಲಿ ಉಪಯೋಗಕ್ಕೆ ಬರುವ ಹೆಲಿಕ್ಯಾಲ್-ಆ್ಯಂಟೆನಾ ತಂತ್ರಜ್ಞಾನಕ್ಕೆ ಹೆಸರಾಗಿರುವ ಹೆಲಿಕ್ಸ್ ಜಿಯೋಸ್ಪೇಸ್, ಉಪಗ್ರಹಗಳಿಗೆ ಬೇಕಾಗುವ ಆ್ಯಂಟೆನಾ ತಯಾರಿಕೆಗೆ ಹೆಸರಾಗಿರುವ ಆಕ್ಸಫರ್ಡ್ ಸ್ಪೇಸ್ ಸಿಸ್ಟಮ್ಸ್ ಕಂಪನಿ (ಒಎಸ್ಎಸ್) ಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಒಎಸ್ಎಸ್ ಕಂಪನಿಗೆ ತನ್ನ ನಿರ್ದಿಷ್ಟ ಅಗತ್ಯ, ಬೇಕಾದ ಬೆಂಬಲ ಇವುಗಳನ್ನು ವಿವರಿಸಿ, ರಾಜ್ಯ ಸರ್ಕಾರಕ್ಕೆ ಟಿಪ್ಪಣಿ ಸಲ್ಲಿಸುವಂತೆ ಹೇಳಲಾಗಿದೆ ಎಂದರು.
ಕ್ವಿನ್ ಸಿಟಿಯಲ್ಲಿ ಯುಕೆ ಟೆಕ್ ಪಾರ್ಕ್..?
ಬ್ರಿಟನ್‌ನಲ್ಲಿ ಭಾರತದ ಹೈಕಮಿಷನರ್ ಆಗಿರುವ ವಿಕ್ರಮ್ ದೊರೆಸ್ವಾಮಿ ಅವರನ್ನು ಕೂಡ ಈ ಸಂದರ್ಭದಲ್ಲಿ ಭೇಟಿ ಮಾಡಲಾಯಿತು. ಯುಕೆ ಮತ್ತು ಕರ್ನಾಟಕದ ನಡುವಿನ ಕೈಗಾರಿಕಾ ಸಂಬಂಧ ಕುರಿತು ಚರ್ಚಿಸಲಾಗಿದೆ. ಉದ್ದೇಶಿತ ಕ್ವಿನ್ ಸಿಟಿ ಪ್ರದೇಶದಲ್ಲಿ 'ಯು.ಕೆ. ಟೆಕ್ ಪಾರ್ಕ್' ಸ್ಥಾಪಿಸಲು ಇರುವ ಅವಕಾಶಗಳ ಬಗ್ಗೆ ಅವರೊಂದಿಗೆ ವಿಚಾರ ವಿನಿಮಯ ನಡೆಸಿದ್ದೇನೆ. ಇದು ಸಾಧ್ಯವಾದರೆ ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮ ಮತ್ತು ಉನ್ನತ ಮಟ್ಟದ ತಯಾರಿಕೆ ಕಾರ್ಯಪರಿಸರದ ಬಲವರ್ಧನೆ ಆಗಲಿದೆ. ಈ ಸಂಬಂಧ ನಮ್ಮ ಹೈಕಮಿಷನರ್ ಅವರು ಇಲ್ಲಿನ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಶೀಘ್ರವೇ ಈ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಇಂಗ್ಲೆಂಡ್‌ನಲ್ಲಿ ಮೂರು ದಿನಗಳ ಕೈಗಾರಿಕೆ ಉದ್ದೇಶದಲ್ಲಿ ಪ್ರವಾಸ ಕೈಗೊಂಡಿರುವ ಸಚಿವ ಎಂಬಿ ಪಾಟೀಲ್ ಅವರು ಅಲ್ಲಿ ವಿವಿಧ ಬೃಹತ್ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ. ಈ ಬಾರಿಯು ಅಪಾರ ಪ್ರಮಾಣದ ಬಂಡವಾಳ ಹೂಡಿಕೆ ಕರ್ನಾಟಕಕ್ಕೆ ಹರಿದು ಬರುವ ನಿರೀಕ್ಷೆ ಇದೆ.












Click it and Unblock the Notifications