ಬೆಂಗಳೂರಲ್ಲಿ ಕುಮಾರಸ್ವಾಮಿ ವಾರ್ಡ್ ಬದಲು ಯಾರಬ್ ನಗರ ವಾರ್ಡ್!, ಜಿಬಿಎ ವಿರುದ್ಧ ಆಕ್ರೋಶ
ಬೆಂಗಳೂರಿನ ಆಡಳಿತದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳಾಗಿವೆ. ಅದರಲ್ಲಿ ಮುಖ್ಯವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಿರುವುದು ಸಹ ಒಂದಾಗಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಳ, ವಾರ್ಡ್ ವಿಂಗಡಣೆ ಹಾಗೂ ವಾರ್ಡ್ ಗಡಿ ನಿಗದಿ ಪ್ರಕ್ರಿಯೆಗಳು ಸಹ ನಡೆದಿವೆ. ಕೆಲವೊಂದು ಪ್ರಮುಖ ವಾರ್ಡ್‌ಗಳ ಹೆಸರು ಬದಲಾವಣೆ ಮತ್ತು ಹೊಸ ವಾರ್ಡ್‌ಗಳ ಸೃಷ್ಟಿಯೂ ಆಗಿದೆ. ಆದರೆ ಈ ರೀತಿ ಮಾಡುವಾಗ ಜಿಬಿಎ ಎಡವಟ್ಟೊಂದನ್ನು ಮೈಮೇಲೆ ಎಳೆದುಕೊಂಡಿದೆ.
ವಾರ್ಡ್ ವಿಂಗಡಣೆ ಹಾಗೂ ವಾರ್ಡ್‌ಗಳ ಹೆಸರು ಬದಲಾವಣೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ವಿವಾದ ಸೃಷ್ಟಿಯಾಗಿದೆ. ಈಚೆಗೆ ಯಲಹಂಕ ಕ್ಷೇತ್ರದ ಆಕಾಶ್ ವಾರ್ಡ್ ಹೆಸರು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ವಾರ್ಡ್ ಹೆಸರನ್ನು ಏರೋ ಸಿಟಿ ಎಂದು ಮರು ನಾಮಕರಣ ಮಾಡಲಾಗಿದೆ. ಅಲ್ಲದೇ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುಮಾರಸ್ವಾಮಿ ಲೇಔಟ್ ವಾರ್ಡ್ ಹೆಸರನ್ನು ಯಾರಬ್ ನಗರ ವಾರ್ಡ್ ಎಂದು ಮರುನಾಮಕರಣ ಮಾಡಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಈ ಹೆಸರು ಬದಲಾವಣೆಯ ವಿವಾದದ ಬಗ್ಗೆ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಟೀಕೆ ಮಾಡಿವೆ. ಜಿಬಿಎ ವ್ಯಾಪ್ತಿಯ ವಾರ್ಡ್‌ಗಳ ಹೆಸರು ಬದಲಾವಣೆಯಲ್ಲಿಯೂ ಓಲೈಕೆ ರಾಜಕೀಯ ಮಾಡುತ್ತಿದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ. ಕುಮಾರಸ್ವಾಮಿ ಲೇಔಟ್ ವಾರ್ಡ್‌ನ ಹೆಸರನ್ನು ಯಾರಬ್ ನಗರ ಎಂದು ಬದಲಿಸಿರುವುದು ತುಷ್ಟೀಕರಣ ರಾಜಕಾರಣದ ಪರಮಾವಧಿ ಎಂದು ಬಿಜೆಪಿ ಟೀಕೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಬೇಕಿದ್ದರೆ, ನಿಮ್ಮ ಮನೆಗಳಿಗೆ ಯಾರಬ್ ನಿವಾಸ ಎಂದು ಹೆಸರಿಟ್ಟುಕೊಳ್ಳಿ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಕುಮಾರಸ್ವಾಮಿ ಲೇಔಟ್ ಹೆಸರನ್ನು ಬದಲಿಸಿದ್ದಕ್ಕೆ ನಾವು ಯಾವುದೇ ರೀತಿಯಲ್ಲೂ ಸಮ್ಮತಿಸುವುದಿಲ್ಲ. ಯಾರಬ್ ನಗರ ಎಂದು ಬದಲಾಯಿಸಿರುವ ವಾರ್ಡ್ ಹೆಸರನ್ನು ತಕ್ಷಣವೇ ಕುಮಾರಸ್ವಾಮಿ ಲೇಔಟ್ ವಾರ್ಡ್ ಎಂದು ಬದಲಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಬಿಜೆಪಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.
ಜೆಡಿಎಸ್ ಟ್ವೀಟ್
ಹಿಂದೂ ದ್ವೇಷಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂದು ರಾಮನ ಹೆಸರು ಇರುವ ಕಾರಣಕ್ಕೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ. ಇಂದು ಕುಮಾರಸ್ವಾಮಿ ಹೆಸರು ಇರುವ ಕಾರಣಕ್ಕೆ ಕುಮಾರಸ್ವಾಮಿ ಲೇಔಟ್ ಹೆಸರು ಬದಲಾವಣೆ. ಓಲೈಕೆಗೂ ಒಂದು ಮಿತಿ ಬೇಡವೇ ಡಿ.ಕೆ ಶಿವಕುಮಾರ್ ಅವರೇ ? ಕುಮಾರಸ್ವಾಮಿ ದೇವರ ದೇವಸ್ಥಾನ ಇರುವ ಕಾರಣ ಕುಮಾರಸ್ವಾಮಿ ಲೇಔಟ್ ವಾರ್ಡ್ ಎಂದು ನಾಮಕರಣ ಮಾಡಲಾಗಿತ್ತು. ಈಗ ಹೆಸರು ಬದಲಾಯಿಸಲು ಅಲ್ಲಿನ ಸ್ಥಳೀಯ ನಿವಾಸಿಗಳು ಅರ್ಜಿ ಹಾಕಿದ್ದರಾ ಬೆಂಗಳೂರು ಉಸ್ತುವಾರಿ ಸಚಿವರೇ ಎಂದು ಪ್ರಶ್ನೆ ಮಾಡಿದೆ.












Click it and Unblock the Notifications