ನಿಮ್ಹಾನ್ಸ್ ಸಂಸ್ಥೆಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಖಡಕ್ ಆದೇಶ!
ಬೆಂಗಳೂರು, ಸೆ. 11: ಹಲವು ವರ್ಷಗಳಿಂದ ನಿಮ್ಹಾನ್ಸ್ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 19 ಸಫಾಯಿ ಕರ್ಮಚಾರಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಕ್ರಮವನ್ನು ಖಂಡಿಸಿ, ಈ ಕೂಡಲೆ ಸೇವೆಗೆ ವಾಪಸ್ಸು ತೆಗೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರು ನಿಮ್ಹಾನ್ಸ್ ಸಂಸ್ಥೆ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಎರಡು ತಿಂಗಳಿಂದ ಆಸ್ಪತ್ರೆ ಆವರಣದಲ್ಲಿ ಧರಣಿ ಸತ್ಯಾಗ್ರಹದಲ್ಲಿ ತೊಡಗಿದ್ದವರನ್ನು ಅಧ್ಯಕ್ಷ ಎಂ. ಶಿವಣ್ಣ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ನಂತರ ಸತ್ಯಾಗ್ರಹದಲ್ಲಿ ನಿರತ ಕಾರ್ಮಿಕರನ್ನು ಕುರಿತು ಮಾತನಾಡಿ, "ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವುದು ನ್ಯಾಯಸಮ್ಮತವಲ್ಲ. ಧರಣಿ ಸಂದರ್ಭದಲ್ಲಿ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯದಿರುವುದು ತುಂಬಾ ಖಂಡಾನೀಯವಾಗಿದ್ದು, ಅಲ್ಲಿ ಪೊಲೀಸ್ ಸಿಬ್ಬಂದಿ ನಡೆಸಿಕೊಂಡ ರೀತಿ ಅಮಾನೀಯವಾಗಿದೆ" ಎಂದರು.
ಇದೇ ವೇಳೆ ನಿಮ್ಹಾನ್ಸ್ ನಿರ್ದೇಶಕರು ಮತ್ತು ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು. ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಿ ಶೀಘ್ರವೇ 19 ಜನ ಸಫಾಯಿ ಕರ್ಮಚಾರಿಗಳನ್ನು ತೆಗೆದು ಹಾಕಿದ ಬಗ್ಗೆ, ಸಂಸ್ಥೆಯ ವಿರುದ್ಧ ಕಾನೂನು ರೀತಿ ಕ್ರಮ ಕೈಕೊಳ್ಳಲಾಗುವುದು ಹಾಗೂ ಹೊರಗುತ್ತಿಗೆ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗುವುದು ಎಂದರು.

ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ 484 ಮಹಿಳೆಯರು ಹಾಗೂ 214 ಪುರುಷ ಸೇರಿದಂತೆ ಒಟ್ಟು 748 ಸಫಾಯಿ ಕರ್ಮಚಾರಿಗಳ ಬಗ್ಗೆ ಮತ್ತೊಮ್ಮೆ ಸಭೆ ಕರೆಯಲಾಗುವುದು ಎಂದರು. ಸಭೆಯಲ್ಲಿ ಆರೋಗದ ಕಾರ್ಯದರ್ಶಿ ಆರ್. ರಮಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಲಕ್ಷ್ಮಣ ರೆಡ್ಡಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೈತ್ರಿ ಉಪಸ್ಥಿತರಿದ್ದರು.
ಅಪೌಷ್ಠಿಕತೆ ಮುಕ್ತ ಜಿಲ್ಲೆಯನ್ನಾಗಿಸಲು ಪ್ರಯತ್ನ: ಬೆಂಗಳೂರು ನಗರ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪೋಷಣೆಯಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಕಾರ್ಯ ಬಹುಮುಖ್ಯವಾಗಿದ್ದು, ಎಲ್ಲರೂ ಜಿಲ್ಲೆಯನ್ನು ಅಪೌಷ್ಠಿಕತೆ ಮುಕ್ತವಾಗಿಸಲು ಪಣತೊಡಬೇಕೆಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಲ್ಲೇಶ್ವರಂನ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಭಾರತದಲ್ಲಿ ಮಕ್ಕಳ ಸಂಖ್ಯೆ ಅಗಾಧವಾಗಿದೆ. ಪಾಲನೆ ಪೋಷಣೆ ಮಾಡಿ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿದರೆ ಮುಂದೆ ದೇಶದ ಶಕ್ತಿಯಾಗುತ್ತಾರೆ ಎಂದರು.

ಜಿಲ್ಲೆಯಲ್ಲಿ 8400 ಮಕ್ಕಳು ಸಾಧಾರಣ ಅಪೌಷ್ಠಿಕತೆ (ಮಾಡರೇಟ್ ಅಕ್ಯೂಟ್ ಮಾಲ್ ನ್ಯೂಟ್ರಿಷನ್ (ಮ್ಯಾಮ್) ಸಮಸ್ಯೆಗೆ ಹಾಗೂ 152 ಮಕ್ಕಳು ತೀವ್ರ ಅಪೌಷ್ಠಿಕತೆಗೆ( ಸಿವಿಯರ್ ಅಕ್ಯೂಟ್ ಮಾಲ್ ನ್ಯೂಟ್ರಿಷನ್ (ಸ್ಯಾಮ್) ತುತ್ತಾಗಿದ್ದಾರೆ. ಅವರ ಅಪೌಷ್ಠಿಕತೆಯನ್ನು ದೂರ ಮಾಡಲು ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ 2587 ಅಂಗನವಾಡಿಗಳಿದ್ದು, ಜನಸಂಖ್ಯೆಗೆ ಅನುಗುಣವಾಗಿಲ್ಲ ಇನ್ನೂ ಹೆಚ್ಚಿನ ಅಂಗನವಾಡಿಗಳ ಅವಶ್ಯಕತೆ ಇದೆ. ಸದ್ಯದಲ್ಲೇ ಇನ್ನೂ ಕೆಲವು ಅಂಗನವಾಡಿಗಳು ಸ್ವಂತ ಕಟ್ಟಡದೊಂದಿಗೆ ಹಾಗೂ ಮೂಲಭೂತ ಸೌಲಭ್ಯಗಳೊಂದಿಗೆ ಸೇರ್ಪಡೆಯಾಗಲಿವೆ. ಕೋವಿಡ್ -19 ನ ಈ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರು, ಹಾಲುಣಿಸುವ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳುವಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಯಾವುದೇ ಆತಂಕವಿಲ್ಲದೇ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ. ಅನುರಾಧ ಮಾತನಾಡಿ, "ಕೋವಿಡ್ 2ನೇ ಅಲೆಯ ನಂತರ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿದೆ. ಶಾಲಾ ಕಾಲೇಜು ಈಗಾಗಲೇ ಆರಂಭವಾಗಿದ್ದು, ಅಂಗನವಾಡಿಗಳನ್ನು ಕೂಡ ತೆರೆಯಲಾಗುತ್ತದೆ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳು ಪೌಷ್ಠಿಕಾಂಶಭರಿತ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಮುಂದೆ ಬರುವ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಶಾ ಕಾರ್ಯಕರ್ತೆಯರು, ಎಎನ್ಎಂ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖವಾದ ಪಾತ್ರ ನಿರ್ವಹಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ನಿಮ್ಮ ಬೆಂಬಲದ ಅವಶ್ಯಕತೆ ಇದೆ ಅದಕ್ಕೆ ಬೇಕಾದ ತರಬೇತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುತ್ತದೆ" ಎಂದರು.
ಮಾತೃವಂದನಾ ಸಪ್ತಾಹದ ಸೆಲ್ಫಿ ಕಾರ್ನರ್, ಪೌಷ್ಠಿಕ ಮಳಿಗೆಯನ್ನು ಉದ್ಘಾಟಿಸಲಾಯಿತು. ಸೀಮಂತ ಕಾರ್ಯಕ್ರಮದೊಂದಿಗೆ ಸಾಧಾರಣ ಹಾಗೂ ವಿಪರೀತ ಕಡಿಮೆ ತೂಕದ ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರ,ಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಎಚ್. ನಿಶ್ಚಲ್, ಇಲಾಖೆಯ ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.












Click it and Unblock the Notifications