KSRTC: ಅಶ್ವಮೇಧ ಇಂದೆಂಥಾ ಹಸರು.. ಯಾರ ಬಲಿ.?-ಹೀಗೆ ಹೇಳಿದ್ಯಾರು?-ಮಾಹಿತಿ ಇಲ್ಲಿದೆ
ಬೆಂಗಳೂರು, ಫೆಬ್ರವರಿ, 06: ಕೆಎಸ್‌ಆರ್‌ಟಿಸಿಯ ಅಶ್ವಮೇಧ ಎನ್ನುವ ಹೆಸರಿನ 100 ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ (ಫೆಬ್ರವರಿ 05) ಬೆಂಗಳೂರಿನ ವಿಧಾನಸೌಧದ ಮುಂದೆ ಚಾಲನೆ ನೀಡಿದ್ದರು. ಇನ್ನು ಈ ಅಶ್ವಮೇಧ ಹೆಸರಿಟ್ಟಿರುವ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಾಗಾದರೆ ಈ ಹೆಸರಿನ ಬಗ್ಗೆ ಏನೆಲ್ಲ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ನಿಗಮ (KSRTC) ಪರಿಚಯಿಸಿದ ನೂತನ ಬಸ್‌ಗೆ ಅಶ್ವಮೇಧ ಎಂದು ಹೆಸರಿಟ್ಟವರು ಯಾರೋ ತಿಳಿಯದು. ಅಶ್ವಮೇಧ ಎಂದರೆ ಕುದುರೆ ಬಲಿ ಎಂದರ್ಥ. ಇಲ್ಲಿ ಬಲಿಯಾಗುವುದು ಬಸ್ಸೋ? ಅಥವಾ ಪ್ರಯಾಣಿಕರೋ? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಫೆಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಎಂಥಾ ಅಸೂಕ್ಷ್ಮ ಹೆಸರು! ಕನ್ನಡ ಅಥವಾ ಸಂಸ್ಕೃತ ಗೊತ್ತಿಲ್ಲದ ಯಾರೋ ಈ ಹೆಸರು ಪ್ರಸ್ತಾಪಿಸಿದ್ದಾರೆ. ಅದನ್ನು ಅವರಂತಹ ಮತ್ತೊಬ್ಬರು ಒಪ್ಪಿಗೆ ನೀಡಿ ಇಟ್ಟಿದ್ದಾರೆ. ಸರ್ಕಾರದಲ್ಲಿ ಇನ್ನೆಂತಹ ಅಜ್ಞಾನಿ ಮತ್ತು ಅವಿವೇಕಿಗಳು ಇದ್ದರೋ ಎಂದು ಆತಂಕ ವ್ಯಕ್ತಪಡಿಸಿದ್ಧಾರೆ.
ಈ ಸೇವೆಗೆ ಚಾಲನೆ ಕೊಡುವಾಗ ನಮ್ಮ ಕನ್ನಡ ವ್ಯಾಕರಣದ ಪ್ರಕಾಂಡ ಪಂಡಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವ ರೀತಿಯ ಮಾನಸಿಕ ಆಘಾತವಾಗಿರಬಹುದು? ಎಂದು ರವಿಕೃಷ್ಣಾ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಕೂಡಲೇ ಇಂತಹ ಅನರ್ಥಕಾರಿ ಹೆಸರನ್ನು ಬದಲಾಯಿಸಬೇಕು. ಬೇಕಾದರೆ #ಕುದುರೆಸಾರೋಟು ಎಂದೋ, ಅಥವಾ ಸಂಸ್ಕೃತ ಮೂಲದ್ದೇ ಆಗಬೇಕು ಎಂದರೆ #ಅಶ್ವಸಂಚಾರ ಎಂದೋ ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ.
100 ಅಶ್ವಮೇಧ ಬಸ್‌ಗಳಿಗೆ ಚಾಲನೆ
ಈಗಾಗಲೇ ಸಾರಿಗೆ ಇಲಾಖೆ ಅಂಬಾರಿ ಉತ್ಸವ ಬಸ್, ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಪರಿಚಯಿಸಿದ್ದು, ನಿನ್ನೆ (ಫೆಬ್ರವರಿ 06)ಕೆಎಸ್‌ಆರ್‌ಟಿಸಿಯ ಹೊಸ ವಿನ್ಯಾಸದ 100 ಅಶ್ವಮೇಧ ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಹಾಗಾದರೆ ಈ ಬಸ್‌ನಲ್ಲಿ ಏನೆಲ್ಲ ವಿಶೇಷತೆಗಳಿರಲಿವೆ, ದರಗಳ ಮಾಹಿತಿ ಹಾಗೂ ಯಾವೆಲ್ಲ ಮಾರ್ಗಗಳಲ್ಲಿ ಸಂಚರಿಸಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಹಾಗೆಯೇ ಈ ಬಸ್‌ಗಳಲ್ಲಿಯೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಕೆಎಸ್‌ಆರ್‌ಟಿಸಿಯ ಕೆಂಗೇರಿ ವರ್ಕ್ ಶಾಪ್‌ಗೆ 100 ಹೊಸ ಬಸ್ ಬಂದಿವೆ. ಕೆಎಸ್ಆಆರ್ಟಿಸಿದೆ ಒಟ್ಟು 1,000 ಹೊಸ ಬಸ್‌ಗಳು ಬರಲಿವೆ. ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್ ಬಸ್‌ಗಳು ಬಂದಿವೆ. ಮೊದಲ ಹಂತದಲ್ಲಿ 100 ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಫೆಬ್ರುವರಿ 5) ಬೆಂಗಳೂರಿನ ವಿಧಾನಸೌಧದ ಮುಂಭಾಗ ಚಾಲನೆ ನೀಡಿದ್ದರು.
ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಕ್ಲಾಸಿಕ್ 800 ಬಸ್‌ಗಳನ್ನು 2024ರ ಮೇ ಅಂತ್ಯದೊಳಗೆ ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆ ಮಾಡಲು ಉದ್ದೇಶಿಸಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನಿಡಿದೆ. ಮೊದಲ ಹಂತದಲ್ಲಿ ರಸ್ತೆಗಿಳಿದಿರುವ ಈ 100 ಬಸ್‌ಗಳಿಗೆ ಅಶ್ವಮೇಧ ಕ್ಲಾಸಿಕ್ ಎಂದು ಹೆಸರಿಡಲಾಗಿದೆ. ಈ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅಶ್ವಮೇಧ ಕ್ಲಾಸಿಕ್ ಬಸ್‌ಗಳು 3.42 ಮೀಟರ್ ಎತ್ತರವಿದ್ದು, 12 ಪ್ಯಾನಿಕ್ ಬಟನ್, ಜಿಪಿಎಸ್, 2 ರೇರ್ ಕ್ಯಾಮರಾ ಹಾಗೂ 6 ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಟ್‌ಗಳನ್ನು ಒಳಗೊಂಡಿವೆ. 52 ಬಕೆಟ್ ಸೀಟು, ಬಸ್ ಒಳಗೆ ಮತ್ತು ಹೊರ ಭಾಗದಲ್ಲಿ ಎಲ್‌ಇಡಿ ಮಾರ್ಗಫಲಕ, ಪ್ರಯಾಣಿಕರು ಲಗೇಜ್ ಇಡಲು ಹೆಚ್ಚು ಸ್ಥಳಾವಕಾಶವನ್ನು ನೀಡಲಾಗಿದೆ.
ಈ ಬಸ್‌ಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತವೆ. ರಾಜ್ಯ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಈ ಬಸ್‌ಗಳಲ್ಲಿ ಲಭ್ಯ ಇದೆ ಎನ್ನುವ ಮಾಹಿತಿಯನ್ನು ಸಾರಿಗೆ ಇಲಾಖೆ ನೀಡಿದೆ.












Click it and Unblock the Notifications