ಬುಧವಾರ ಸೀಮಾಂಧ್ರಕ್ಕೆ ಕೆಎಸ್ಆರ್ ಟಿಸಿ ಬಸ್ಸುಗಳಿಲ್ಲ
ಬೆಂಗಳೂರು, ಫೆ.19 : ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಿಸಿ ಕೆಎಸ್ಆರ್ ಟಿಸಿಗೆ ಮತ್ತೆ ತಟ್ಟಿದೆ. ಆಂಧ್ರ ವಿಭಜನೆ ಖಂಡಿಸಿ ಬುಧವಾರ ಸೀಮಾಂಧ್ರ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಸೀಮಾಂಧ್ರ ಭಾಗಕ್ಕೆ ಸಂಚರಿಸುವ ಎಲ್ಲಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಪ್ರಸಾದ್, ಮಂಗಳವಾರ ರಾತ್ರಿ ಎಂದಿನಂತೆ ಬೆಂಗಳೂರಿನಿಂದ ಸೀಮಾಂಧ್ರಕ್ಕೆ ತಡರಾತ್ರಿವರೆಗೆ ಬಸ್ಸುಗಳು ಸಂಚರಿಸಿವೆ. ಆದರೆ, ಬುಧವಾರ ಬೆಳಗ್ಗೆ 6 ಗಂಟೆಯಿಂದಲೇ ಸೀಮಾಂಧ್ರ ಭಾಗಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು, ಮುಂದಿನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. [ತೆಲಂಗಾಣ ವಿಧೇಯಕಕ್ಕೆ ಸಂಸತ್ ಒಪ್ಪಿಗೆ]

ಬೆಂಗಳೂರಿನಿಂದ ಸೀಮಾಂಧ್ರ ಭಾಗದ ಪ್ರದೇಶಗಳಿಗೆ ಪ್ರತಿನಿತ್ಯ 500 ಬಸ್‌ಗಳು ಸಂಚರಿಸುತ್ತವೆ. ಆ ಪೈಕಿ ಶೇ.70ರಿಂದ 75ರಷ್ಟು ಬಸ್‌ಗಳು ರಾತ್ರಿ ವೇಳೆ ಸಂಚರಿಸುತ್ತವೆ. ಉಳಿದ ಬಸ್ಸುಗಳು ಹಗಲಿನಲ್ಲಿ ಕಾರ್ಯನಿರ್ವಹಿಸುತ್ತವೆ. ಬುಧವಾರ ಹಗಲು ಸಂಚರಿಸುವ ಬಸ್ಸುಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. [ತೆಲಂಗಾಣ ಪ್ರತಿಭಟನೆ, ಕೆಎಸ್ಆರ್ ಟಿಸಿಗೆ ನಷ್ಟ]
ಸೀಮಾಂಧ್ರ ಭಾಗಕ್ಕೆ ಸಂಚರಿಸಲು ಬುಧವಾರ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬುಧವಾರ ಮಾತ್ರ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.[ತೆಲಂಗಾಣಕ್ಕೆ ಸಚಿವ ಸಂಪುಟ ಒಪ್ಪಿಗೆ]
ಖಾಸಗಿ ಬಸ್ ಗಳು ಇವೆ : ಕೆಎಸ್ಆರ್ ಟಿಸಿ ಮಾತ್ರ ಬುಧವಾರ ಸೀಮಾಂಧ್ರ ಭಾಗಕ್ಕೆ ತನ್ನ ಬಸ್ಸುಗಳ ಸಂಚಾರವನ್ನು ನಿಲ್ಲಿಸಿದೆ. ಆದರೆ, ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. ತಡರಾತ್ರಿವರೆಗೂ ಬಸ್ಸುಗಳು ಸಂಚಾರ ಕೈಗೊಂಡಿದ್ದವು, ಒಂದು ವೇಳೆ ಪ್ರತಿಭಟನೆ ಹೆಚ್ಚಾದರೆ ಅವುಗಳು ಸಹ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಅಂದಹಾಗೆ ಸೀಮಾಂಧ್ರ ಭಾಗದಲ್ಲಿ ವಿಶಾಖಪಟ್ಟಣ, ವಿಜಯವಾಡ, ಗುಂಟೂರು, ರಾಜಮಂಡ್ರಿ, ತಿರುಪತಿ ಸೇರಿದಂತೆ ಅನೇಕ ಪ್ರಮುಖ ನಗರಗಳು ಒಳಪಡಲಿದ್ದು, ಈ ನಗರಗಳಿಗೆ ಪ್ರತಿದಿನ 450 ರಿಂದ 500 ಕೆಎಸ್ಆರ್ ಟಿಸಿ ಬಸ್ಸುಗಳು ಸಂಚರಿಸುತ್ತವೆ.












Click it and Unblock the Notifications