KSP Safe Connect: ಪೊಲೀಸ್ ಇಲಾಖೆಯಿಂದ ಹೊಸ ಆ್ಯಪ್ ಬಿಡುಗಡೆ, ಒಂದೇ ಕ್ಲಿಕ್‌ನಲ್ಲಿ ಏನೆಲ್ಲ ಅನುಕೂಲ?
ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ನಗರ ಪೊಲೀಸ್ ವತಿಯಿಂದ ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಸೇಫ್ ಕನೆಕ್ಟ್ (KSP Safe Connect) ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ನಗರದಲ್ಲಿ ಮಹಿಳೆಯರು, ನಾಗರಿಕರು ಮತ್ತು ಪೊಲೀಸ್ ಇಲಾಖೆಯ ಸಂಪರ್ಕವನ್ನು ಸುಲಭಗೊಳಿಸುವ ಈ ಹೊಸ ವ್ಯವಸ್ಥೆ ರೂಪಿಸಲಾಗಿದೆ. ಈ ಆ್ಯಪ್‌ನ ಮುಖ್ಯ ಉದ್ದೇಶ ಮಹಿಳೆಯರು ಮತ್ತು ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ತಕ್ಷಣ ಸಹಾಯ ಪಡೆಯಲು, ಮತ್ತು ಪೊಲೀಸ್ ಠಾಣೆಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡುವುದಾಗಿದೆ.
ಕೆ.ಎಸ್.ಪಿ ಸೇಫ್ ಕನೆಕ್ಟ್ ಆ್ಯಪ್ ಅನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ್ದು, ಒಂದು ಕ್ಲಿಕ್ ಮೂಲಕ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ. ಈ ವ್ಯವಸ್ಥೆಯಿಂದ ಪೊಲೀಸರಿಂದ ತಕ್ಷಣದ ಸಹಾಯ ಪಡೆಯಬಹುದು. KSP ಆಪ್‌ನಲ್ಲಿ ಸೇಫ್ ಕನೆಕ್ಟ್‌ನೊಂದಿಗೆ ನೀವು ಎಂದಿಗೂ ಒಂಟಿಯಾಗಿರುವುದಿಲ್ಲ. ನೈಜ-ಸಮಯದ ವಿಡಿಯೋ ಕರೆಗಳು, ನಿರ್ದಿಷ್ಟ ಸ್ಥಳದ ಟ್ರ್ಯಾಕಿಂಗ್, ತ್ವರಿತ ವರದಿಗಳು-ನಿಮ್ಮ ಸುರಕ್ಷತೆ ಒಂದು ಟ್ಯಾಪ್ ದೂರದಲ್ಲಿದೆ ಈಗಲೇ ಡೌನ್‌ಲೋಡ್ ಮಾಡಿ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಸೇಫ್ ಕನೆಕ್ಟ್ ಒಂದು ದ್ವಿಮುಖ ಆಡಿಯೋ ವಿಡಿಯೋ ಕರೆಗಳನ್ನು ಒದಗಿಸುವ ಮೂಲಕ ನಾಗರಿಕರು ಹಾಗೂ ಪೊಲೀಸ್ ಸಂಸ್ಥೆಗಳನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಹೊಸ ವ್ಯವಸ್ಥೆ. ಈ ಅತ್ಯಾಧುನಿಕ ವ್ಯವಸ್ಥೆ ಯಾವುದೇ ಘಟನೆಯ ನೈಜ ಸಮಯದ ವಿಡಿಯೋ ಕರೆಗಳು, ಲೈವ್ ಲೊಕೇಶನ್ ಟ್ರ್ಯಾಕಿಂಗ್ ಮಾಹಿತಿಯನ್ನು ಸಿಟಿ ಕಮಾಂಡ್ ಸೆಂಟರ್‌ಗೆ ವರದಿ ಮಾಡಲು ನೆರವಾಗುತ್ತದೆ. ಸಹಾಯವು ಯಾವಾಗಲೂ ಒಂದು ಕ್ಲಿಕ್ ದೂರದಲ್ಲಿದೆ ಎಂದು ಖಚಿತಪಡಿಸುತ್ತದೆ. ತಕ್ಷಣದ ಮತ್ತು ಪರಿಣಾಮಕಾರಿ ಸಂವಹನವನ್ನು ನಾಗರಿಕರ ಕೈಯಲ್ಲಿ ಇರಿಸಿ, ಸುರಕ್ಷಿತ ವಾತಾವರಣ ನಿರ್ಮಾಣದತ್ತ ಒಂದು ಮಹತ್ವದ ಹೆಜ್ಜೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಸೇಫ್ ಕನೆಕ್ಟ್‌ನಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಒಂದು ಕ್ಲಿಕ್‌ನೊಂದಿಗೆ ಪೊಲೀಸ್ ಸಹಾಯವನ್ನು ಪಡೆಯಬಹುದು. ನಿಮ್ಮ ಸ್ಥಳಕ್ಕೆ ಹತ್ತಿರದ ಪೊಲೀಸ್ ಠಾಣೆಯ ಮಾಹಿತಿ ಪಡೆಯಬಹುದು. ಯಾವುದೇ ಘಟನೆ ಅಥವಾ ಪ್ರಕರಣವನ್ನು ಆನ್‌ಲೈನ್‌ನಲ್ಲಿ ಪೊಲೀಸ್‌ಗೆ ವರದಿ ಮಾಡಬಹುದು. ಕಳೆದುಹೋದ ವಸ್ತುಗಳ ಬಗ್ಗೆಯೂ ಆನ್‌ಲೈನ್‌ನಲ್ಲಿ ರಿಪೋರ್ಟ್ ನೀಡಬಹುದು. ಇದು ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್‌ನಲ್ಲಿ ಲಭ್ಯವಿದೆ. ನಾಗರಿಕರು ಸುಲಭವಾಗಿ ಇದನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಮಾಹಿತಿ ಹಂಚಿಕೊಂಡಿದೆ.
ಜುಲೈ 12ಕ್ಕೆ ಮಾಸಿಕ ಜನಸಂಪರ್ಕ ದಿವಸ
ಬೆಂಗಳೂರು ನಗರ ಪೊಲೀಸರ ಹಿರಿಯ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡುವ ಅವಕಾಶವನ್ನು ಕಲ್ಪಿಸಿದೆ. ಮಾಸಿಕ ಜನಸಂಪರ್ಕ ದಿವಸ ಮತ್ತು ಸಂಚಾರ ಸಂಪರ್ಕ ದಿವಸವನ್ನು ಜುಲೈ 12 ಶನಿವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಬೆಂಗಳೂರಿನ ಕ್ವಾಲ್ಕಾಮ್ ಕಂಪನಿ ಆಡಿಟೋರಿಯಂ, ಕುಂದಲಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಆಯೋಜಿಸಲಾಗಿದೆ. ಸಿಟಿ ಪೊಲೀಸ್ ಕಮೀಷನರ್, ಟ್ರಾಫಿಕ್ ವಿಭಾಗ ಸೇರಿದಂತೆ ಹಿರಿಯ ಅಧಿಕಾರಿಗಳು ಸಂಚಾರ ನಿರ್ವಹಣೆ ಮತ್ತು ಕಾನೂನು-ಸುವ್ಯವಸ್ಥೆ ಕುರಿತು ನಿಮ್ಮ ಕಳವಳ, ಸಮಸ್ಯೆಗಳನ್ನು ಆಲಿಸಲು ಹಾಜರಿರುತ್ತಾರೆ. ಸುರಕ್ಷಿತ, ಸ್ಮಾರ್ಟ್ ಬೆಂಗಳೂರಿಗಾಗಿ ಒಗ್ಗೂಡಿ ಕೆಲಸ ಮಾಡೋಣ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications