ಪೀಣ್ಯ ಫ್ಲೈ ಓವರ್; ಟೋಲ್ ಸಂಗ್ರಹ ವಿರುದ್ಧ ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 18; ಪೀಣ್ಯ ಎಲಿವೇಡೆಡ್ ಮೇಲ್ಸೆತುವೆಯ ದುರಸ್ತಿ ಕಾಮಗಾರಿ ಪೂರ್ಣಗೊಂಡು ಲಘು ವಾಹನಗಳ ಸಂಚಾರ ಆರಂಭವಾಗಿದೆ. ಈಗ ಟೋಲ್ ಸಂಗ್ರಹದ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಶುಕ್ರವಾರ ಪ್ರತಿಭಟನೆ ನಡೆಸಿತು.
ಗೊರಗುಂಟೆಪಾಳ್ಯ-ನಾಗಸಂದ್ರವರೆಗಿನ ಮೇಲ್ಸೇತುವೆ ಸಂಚಾರಕ್ಕೆ ಯೋಗ್ಯವಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವಯುಗ ಟೋಲ್ ಸಂಸ್ಥೆಯ ಮೂಲಕ ವಾಹನ ಸವಾರರಿಂದ ಟೋಲ್ ಶುಲ್ಕವನ್ನು ಪಡೆಯುತ್ತಿದೆ.
ಫ್ಲೈ ಓವರ್ ಸಂಚಾರಕ್ಕೆ ಯೋಗ್ಯವೇ ಅಲ್ಲ ಎಂದ ಮೇಲೆ ವಾಹನ ಸವಾರರು ಏಕೆ ಟೋಲ್ ಕಟ್ಟಬೇಕು? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪ್ರಶ್ನೆ ಮಾಡಿದೆ. ರಸ್ತೆ ಅಭಿವೃದ್ಧಿಗಾಗಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಆದರೆ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗೆ ಏಕೆ ಟೋಲ್ ಕಟ್ಟಬೇಕು? ಎಂಬುದು ಪ್ರಶ್ನೆಯಾಗಿದೆ.

ಈ ಫ್ಲೈ ಓವರ್ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ಐಐಎಸ್‌ಸಿ ವರದಿ ನೀಡಿದೆ. ಈ ಬಗ್ಗೆ ವಿಧಾನಸಭೆಯಲ್ಲಿಯೂ ಚರ್ಚೆ ನಡೆದಿದೆ. ಆದರೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದು ಏಕೆ? ಎಂದು ಪ್ರತಿಭಟನಾನಿರತರು ಪ್ರಶ್ನೆ ಮಾಡಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಎನ್‌ಎಚ್‌ಎಐ ಅಧಿಕಾರಿ, "ಐಐಎಸ್‌ಸಿ ಫ್ಲೈ ಓವರ್‌ನ ಪರೀಕ್ಷೆಯನ್ನು ನಡೆಸಿದೆ. ಇದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿಲ್ಲ. ಲಘು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿದೆ" ಎಂದು ಹೇಳಿದೆ ಎಂದರು.
"ಐಐಎಸ್‌ಸಿ ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ಮಾಡುತ್ತಿದೆ. ಭಾರದ ವಾಹನಗಳ ಸಂಚಾರಕ್ಕೆ ಫ್ಲೈ ಓವರ್ ಪೂರಕವೇ ಎಂದು ವರದಿಯನ್ನು ನೀಡಲಿದ್ದಾರೆ. ತಜ್ಞರ ಸಮಿತಿ ಶಿಫಾರಸುಗಳನ್ನು ಪಾಲಿಸುತ್ತೇವೆ" ಎಂದು ಪ್ರತಿಭಟನಾನಿರತರಿಗೆ ಭರವಸೆ ನೀಡಿದರು.
ಟೋಲ್ ಸಂಗ್ರಹದ ಬಗ್ಗೆ ಮಾತನಾಡಿದ ಅಧಿಕಾರಿ, "ಟೋಲ್ ಶುಲ್ಕ ಕೇವಲ ಫ್ಲೈ ಓವರ್ ಮೇಲೆ ಸಂಚಾರ ನಡೆಸಲು ಮಾತ್ರ ಸಂಗ್ರಹ ಮಾಡುತ್ತಿಲ್ಲ. ಫ್ಲೈ ಓವರ್ ಕೆಳಭಾಗದ ರಸ್ತೆಗೂ ಸಂಗ್ರಹ ಮಾಡಲಾಗುತ್ತದೆ" ಎಂದರು.
"ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಅನ್ವಯ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಕೇವಲ ಫ್ಲೈ ಓವರ್ ಮೇಲಿನ ಸಂಚಾರಕ್ಕೆ ಶುಲ್ಕ ಸಂಗ್ರಹ ಮಾಡುತ್ತಿಲ್ಲ. ಫ್ಲೈ ಓವರ್ ಕೆಳಗಿನ ರಸ್ತೆಯನ್ನು ಸಹ ನಾವು ನಿರ್ವಹಣೆ ಮಾಡುತ್ತಿದ್ದೇವೆ. ಅದಕ್ಕಾಗಿ ಟೋಲ್ ಪಡೆಯುತ್ತಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.
ರಸ್ತೆ ಸರಿ ಇಲ್ಲದೇ ಸಂಚಾರ ದಟ್ಟಣೆ ಉಂಟಾದರೂ ಟೋಲ್ ಕಟ್ಟಬೇಕು ಎಂದು ನಿಮ್ಮ ಒಪ್ಪಂದದಲ್ಲಿ ಇದೆಯೇ? ಎಂದು ಪ್ರತಿಭಟನಾನಿರತರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸರಿಯಾಗಿ ರಸ್ತೆ ನಿರ್ವಹಣೆ ಮಾಡದಿದ್ದರೆ ನಾವು ಮಾರ್ಗಸೂಚಿಗಳ ಅನ್ವಯ ಕ್ರಮ ಕೈಗೊಳ್ಳುತ್ತೇವೆ. ಈ ರಸ್ತೆ ನಿರ್ವಹಣೆಗೆ ನವಯುಗ ಟೋಲ್ ಸಂಸ್ಥೆ ಟೋಲ್ ಶುಲ್ಕ ಸಂಗ್ರಹ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ನೀವು ಜನರ ತೆರಿಗೆ ದುಡ್ಡಿನಲ್ಲಿ ಕೆಲಸ ಮಾಡುತ್ತಿದ್ದೀರಿ. ನವಯುಗ ಟೋಲ್ ಕಂಪನಿಯ ನೌಕರರಲ್ಲ. ಜನರ ಸೇವೆಗೆ ನೀವು ಇರುವುದು. ಜನರಿಗಾಗಿ ಕೆಲಸ ಮಾಡಿ ಎಂದು ಪ್ರತಿಭಟನಾನಿರತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜನರು ವೇಗವಾಗಿ ಸಂಚಾರ ನಡೆಸಬಹುದು, ಬೇಗ ಸಂಚರಿಸಬಹುದು ಎಂದು ಟೋಲ್ ಕಟ್ಟುತ್ತಾರೆ. ಆದರೆ ಈ ಈ ರಸ್ತೆಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುತ್ತಿದೆ. ಆಂಬ್ಯುಲೆನ್ಸ್ ಸಿಕ್ಕಿ ಹಾಕಿಕೊಳ್ಳುತ್ತದೆ. ನೀವು ಸೇವೆ ನೀಡಲಾಗದಿದ್ದರೆ ಟೋಲ್ ಸಂಗ್ರಹಕ್ಕೆ ಹೇಗೆ ಅನುಮತಿ ನೀಡಿದಿರಿ? ಎಂದು ಪ್ರತಿಭಟನಾನಿರತರು ಪ್ರಶ್ನೆ ಮಾಡಿದರು.
ರಸ್ತೆ ಸಮಸ್ಯೆ ತಾತ್ಕಾಲಿಕ ಎಂದು ಅಧಿಕಾರಿಗಳು ಹೇಳುತ್ತಿದ್ದೀರಿ. ಹಾಗಾದರೆ ತಾತ್ಕಾಲಿಕವಾಗಿ ಟೋಲ್ ಸಂಗ್ರಹ ರದ್ದುಗೊಳಿಸಿ. ರಸ್ತೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾದ ಬಳಿಕ ಟೋಲ್ ಸಂಗ್ರಹ ಮಾಡಿ. 4.50 ಕಿ. ಮೀ. ಸಂಚಾರ ನಡೆಸಲು 3 ಗಂಟೆ ಕಾಯಬೇಕಿದೆ? ಇಂತಹ ವ್ಯವಸ್ಥೆಗೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದರು.












Click it and Unblock the Notifications