ಬನ್ನೇರುಘಟ್ಟಕ್ಕೆ ಕುತ್ತು ತರಲಿದೆಯೇ ಆನೇಕಲ್ ಕ್ರಿಕೆಟ್ ಕ್ರೀಡಾಂಗಣ? ಯೋಜನೆ ಕೈಬಿಡಲು ಕೆಆರ್‌ಎಸ್ ಆಗ್ರಹ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಯೋಜನೆಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗಿದೆ. ಕ್ರೀಡಾಂಗಣ ನಿರ್ಮಾಣದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಅದರ ಪರಿಸರ ವ್ಯವಸ್ಥೆಗೆ ಭಾರಿ ಹಾನಿ ಉಂಟಾಗಲಿದೆ ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ (KRS), ಈ ಕೂಡಲೇ ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಆರ್‌ಎಸ್ ನಾಯಕರು, "ರಾಷ್ಟ್ರೀಯ ಉದ್ಯಾನವನದಿಂದ ಕೇವಲ 1.5 ಕಿ.ಮೀ ದೂರದಲ್ಲಿ ಬೃಹತ್ ಕ್ರೀಡಾಂಗಣವನ್ನು ನಿರ್ಮಿಸುವುದರಿಂದ ಈ ಭಾಗದ ವನ್ಯಜೀವಿಗಳು ಮತ್ತು ಜೀವವೈವಿಧ್ಯತೆಯ ಮೇಲೆ ತೀವ್ರವಾದ ದುಷ್ಪರಿಣಾಮ ಬೀರಲಿದೆ" ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

KRS

ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ಉದ್ದೇಶಿತ ಆನೇಕಲ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಅಂದಾಜು 900 ಕೋಟಿ ರೂ. ವೆಚ್ಚವಾಗಲಿದೆ. 70 ಎಕರೆ ಜಾಗದಲ್ಲಿ ತಲೆ ಎತ್ತಲಿರುವ ಈ ಕ್ರೀಡಾಂಗಣವು ಸುಮಾರು 80,000 ವೀಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಆದರೆ ಈ ಯೋಜನೆ ಕೇವಲ ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿರದೆ, ಇದರ ಜೊತೆಗೆ ವಿವಿಧ ಕ್ರೀಡಾ ಸಂಕೀರ್ಣಗಳು ಕೂಡ ನಿರ್ಮಾಣವಾಗಲಿವೆ. ಇದರಿಂದಾಗಿ ಕಾವೇರಿ ವನ್ಯಜೀವಿ ಧಾಮ ಮತ್ತು ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮಗಳನ್ನು ಬೆಸೆಯುವ ಪ್ರಮುಖ ಅರಣ್ಯ ಕಾರಿಡಾರ್‌ಗಳಲ್ಲಿ ಭಾರಿ ಪ್ರಮಾಣದ ನಗರೀಕರಣ ಮತ್ತು ವಾಣಿಜ್ಯೀಕರಣ ಹೆಚ್ಚಾಗಲಿದೆ. ಇದು ಕಾಡು ಪ್ರಾಣಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ಭವಿಷ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷಕ್ಕೂ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಕ್ರೀಡಾಂಗಣ ಯೋಜನೆಗೆ ಸಂಬಂಧಿಸಿದ ಪರಿಸರ ಪ್ರಭಾವ ಮೌಲ್ಯಮಾಪನ (EIA) ವರದಿ ಮತ್ತು ವಿಸ್ತೃತ ಯೋಜನಾ ವರದಿ (DPR) ಯನ್ನು ಸರ್ಕಾರ ಕೂಡಲೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಕೆಆರ್‌ಎಸ್ ಮುಖಂಡರು ಒತ್ತಾಯಿಸಿದ್ದಾರೆ. 2020ರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು (ESZ) 268 ಚದರ ಕಿ.ಮೀ.ನಿಂದ 168 ಚದರ ಕಿ.ಮೀ.ಗೆ ಕಡಿತಗೊಳಿಸಿರುವುದನ್ನು ಅವರು ಈ ಸಂದರ್ಭದಲ್ಲಿ ಮಾತನಾಡಿದ್ದಾರೆ.

ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್) ಕಡಿತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣವನ್ನು ಉಲ್ಲೇಖಿಸಿದ ಅವರು, "ಕೇಂದ್ರ ಉನ್ನತಾಧಿಕಾರ ಸಮಿತಿ (CEC) ತನ್ನ ಜನವರಿ 5ರ ವರದಿಯಲ್ಲಿ 2016ರಲ್ಲಿ ಅಧಿಸೂಚಿಸಲಾದ ಮೂಲ 268 ಚದರ ಕಿ.ಮೀ. ಪರಿಸರ ಸೂಕ್ಷ್ಮ ವಲಯವನ್ನು ಮರುಸ್ಥಾಪಿಸಲು ಶಿಫಾರಸು ಮಾಡಿದೆ ಎನ್ನಲಾಗಿದೆ.

ಹೀಗಿರುವಾಗ, ಉದ್ದೇಶಿತ ಕ್ರೀಡಾಂಗಣವು ಇದೇ ವಿವಾದಿತ ವಲಯದ ವ್ಯಾಪ್ತಿಯಲ್ಲಿ ಬರುವ ಸಾಧ್ಯತೆಯಿದೆ. ನ್ಯಾಯಾಲಯದಲ್ಲಿ ಈ ವಿಚಾರ ಇನ್ನೂ ಇತ್ಯರ್ಥವಾಗದ ಇದ್ದಾಗ, ಸರ್ಕಾರ ಕ್ರೀಡಾಂಗಣ ನಿರ್ಮಾಣದ ಯೋಜನೆಯೊಂದಿಗೆ ಮುಂದಡಿ ಇಡುತ್ತಿರುವುದು ಎಷ್ಟರಮಟ್ಟಿಗೆ ಸರಿ?" ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬನ್ನೇರುಘಟ್ಟದಂತಹ ಸೂಕ್ಷ್ಮ ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದ್ದು, ಪರಿಸರ ನಾಶದಂತಹ ಅಭಿವೃದ್ಧಿ ಯೋಜನೆಗಳಿಗೆ ಅವಕಾಶ ನೀಡಬಾರದು ಎಂದು ಪರಿಸರ ಪ್ರೇಮಿಗಳು ಸಹ ಧ್ವನಿಗೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+