ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಆರ್.ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ಸ್ಥಗಿತ

|
Google Oneindia Kannada News

ಬೆಂಗಳೂರು, ಜ.17 : ಕೆ.ಆರ್.ಮಾರುಕಟ್ಟೆಯ ವ್ಯಾಪಾರಿಗಳು ಬೃಹತ್ ಬೆಂಗಳುರು ಮಹಾನಗರ ಪಾಲಿಕೆ ವಿರುದ್ಧ ಮತ್ತೊಮ್ಮೆ ತಿರುಗಿ ಬಿದ್ದಿದ್ದಾರೆ. ಕೆ.ಆರ್.ಮಾರುಕಟ್ಟೆಯ ವಾಣಿಜ್ಯ ಸಂಕೀರ್ಣ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ್ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ.

ಕೆ.ಆರ್.ಮಾರುಕಟ್ಟೆ ಬಳಿಯ ಸೇತುರಾವ್ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಬಿಬಿಎಂಪಿ ಜಂಟಿ ಆಯುಕ್ತ ನರಸಿಂಹಯ್ಯ ಅವರ ನೇತೃತ್ವದಲ್ಲಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಲು ಜೆಸಿಬಿಯೊಂದಿಗೆ ಆಗಮಿಸಿದ್ದರು. ರಸ್ತೆ ಅಗಲೀಕರಣ ಮಾಡಲು ಮೊದಲು ವಾಣಿಜ್ಯ ಸಂಕೀರ್ಣವನ್ನು ನೆಲಸಮಗೊಳಿಸಬೇಕು ಎಂದು ಅಧಿಕಾರಿಗಳು ಯೋಜನೆ ರೂಪಿಸಿದ್ದರು.

KR Market

ಆದರೆ, ಮಾರುಕಟ್ಟೆ ವ್ಯಾಪಾರಿಗಳು ಬಿಬಿಎಂಪಿ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಯಾವುದೇ ಕಾರಣಕ್ಕೂ ವಾಣಿಜ್ಯ ಸಂಕೀರ್ಣ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಕಟ್ಟಡ ಕೆಡವಲು ಮುಂದಾದರೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳವುದಾಗಿ ವ್ಯಾಪಾರಿಗಳು ಬೆದರಿಕೆ ಹಾಕಿದರು.

ಬಿಬಿಎಂಪಿ ವಾಣಿಜ್ಯ ಸಂಕೀರ್ಣದಲ್ಲಿರುವ ವ್ಯಾಪಾರಿಗಳಿಗೆ ಯಾವುದೇ ರೀತಿಯ ನೋಟಿಸ್ ನೀಡದೇ ಏಕಾ-ಏಕಿ ತೆರವು ಕಾರ್ಯಾಚರಣೆ ಆರಂಭಿಸಿದ ಬಿಬಿಎಂಪಿ ವಿರುದ್ಧ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವಾಣಿಜ್ಯ ಸಂಕೀರ್ಣ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ ಹೇಳಿದ್ದಾರೆ.

ವಿರೋಧವೇಕೆ : 1964ರಲ್ಲಿ ಇದೇ ವಾಣಿಜ್ಯ ಸಂಕಿರ್ಣದಲ್ಲಿರುವ 17ಮಳಿಗೆಗಳನ್ನು ಬಿಬಿಎಂಪಿ ವ್ಯಾಪಾರಸ್ಥರಿಗೆ ಹಂಚಿತ್ತು. ಅಂದಿನಿಂದಲೂ ಅವರು ಈ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಸದ್ಯ ಕಟ್ಟಡ ನೆಲಸಮಗೊಳಿಸಲು ಮುಂದಾಗಿರುವುದರಿಂದ ವ್ಯಾಪಾರಸ್ಥರಿಗೆ ಸ್ಥಳವಕಾಶದ ಕೊರತೆ ಉಂಟಾಗುತ್ತದೆ. ಆದ್ದರಿಂದ ಅವರು ಸಂಕೀರ್ಣ ತೆರವುಗೊಳಿಸಲು ಅಡ್ಡಿಪಡಿಸುತ್ತಿದ್ದಾರೆ.

ಬಿಬಿಎಂಪಿ ತೆರವು ಕಾರ್ಯಾಚರಣೆ ಕೈಗೊಳ್ಳುತ್ತದೆ ಎಂಬ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಶಾಸಕ ಜಮೀರ್ ಅಹಮ್ಮದ್ ಖಾನ್, ಸಹ ಬಿಬಿಎಂಪಿ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಮುಂದಾದರು.

ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಆಯುಕ್ತ ಲಕ್ಷ್ಮೀ ನಾರಾಯಣ್ ಹಾಗೂ ಮೇಯರ್ ಕಟ್ಟೆ ಸತ್ಯನಾರಾಯಣ ಆಗಮಿಸಿದಾಗ ಅವರಿಗೆ ಘೇರಾವ್ ಹಾಕಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆಗೆ ತಡೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಘೋಷಿಸಿದರು.

ಸೋಮವಾರ ಸಭೆ : ರಸ್ತೆ ಅಗಲೀಕರಣ ಮಾಡಲು ವಾಣಿಜ್ಯ ಸಂಕೀರ್ಣ ತೆರವುಗೊಳಿಸುವುದು ಅನಿವಾರ್ಯ ಎಂದು ಹೇಳಿರುವ ಬಿಬಿಎಂಪಿ ಆಯುಕ್ತರು, ಸೋಮವಾರ ವ್ಯಾಪಾರಿಗಳ ಜೊತೆ ಈ ಕುರಿತು ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ವಾಣಿಜ್ಯ ಸಂಕೀರ್ಣದಲ್ಲಿನ 9 ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

English summary
Traders of KR Market protest against BBMP on Friday, Jan 17. Bruhat Bengaluru Mahanagara Palike (BBMP) plans to demolish their shops in Market. By the traders protest BBMP stopped demolition work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X