ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಆಗಬೇಕೆಂದೇನಿಲ್ಲ -ಪರಮೇಶ್ವರ್
ಬೆಂಗಳೂರು, ಜೂನ್ 4: ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿ ಆಗಬೇಕು ಎಂಬ ಯಾವ ನಿಯಮಾವಳಿಯೂ ಇಲ್ಲ. ಅದು ಕೇವಲ ಸಂಪ್ರದಾಯದಂತೆ ನಡೆದು ಬಂದಿದೆ ಅಷ್ಟೆ. ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಶಾಸಕಾಂಗ ಪಕ್ಷ ಮುಖ್ಯಮಂತ್ರಿಯನ್ನು ನೇಮಿಸಬೇಕು," ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದ್ದಾರೆ.[ಕಾಂಗ್ರೆಸ್ ಜಾತಿ ಸಮೀಕರಣ, ನೆನಪಿಸುತ್ತಿದೆ ದೇವೇಗೌಡರ ರಾಜಕಾರಣ]

ದಲಿತ ಸಮುದಾಯದಲ್ಲಿ ಜನಿಸಿರುವುದು ಕೇವಲ ಆಕಸ್ಮಿಕ
ಇದೇ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್, "ಸದ್ಯಕ್ಕೆ ದಲಿತ ಮುಖ್ಯಮಂತ್ರಿಯ ಕೂಗು ಅಪ್ರಸ್ತುತ. ದಲಿತ ಸಮುದಾಯದಲ್ಲಿ ನಾನು ಜನಿಸಿರುವುದೇನಿದ್ದರೂ ಕೇವಲ ಆಕಸ್ಮಿಕ. ನಾನೇನು ಅರ್ಜಿ ಹಾಕಿ ಆ ಸಮುದಾಯದಲ್ಲಿ ಹುಟ್ಟಿದ್ದಲ್ಲ. ನನ್ನನ್ನು ದಲಿತ ಮುಖ್ಯಮಂತ್ರಿ ಪಟ್ಟಕ್ಕೆ ಪರಿಗಣಿಸಿದ್ದಾದರೂ ಯಾಕೆ ಎಂಬುದೇ ಗೊತ್ತಿಲ್ಲ," ಎಂದು ಹೇಳಿದ್ದಾರೆ.
ಇನ್ನು, ದೇಶದಲ್ಲೇ ಕಾಂಗ್ರೆಸ್ ಕುಸಿಯುತ್ತಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಉಳಿದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, "ಈ ಆರೋಪ ಇದೆ ನಿಜ. ಆದರೆ, ಕಾಂಗ್ರೆಸ್‌ನ ಮತಗಳಿಕೆಯ ಶೇಕಡಾವಾರು ಪ್ರಮಾಣ ಇಳಿಕೆಯಾಗಿಲ್ಲ. ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸು ಎಂದಿಗೂ ನನಸಾಗುವುದಿಲ್ಲ," ಎಂದಿದ್ದಾರೆ.[ಪರಂಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿದ್ದುಗೆ ಚುನಾವಣೆ ನೇತೃತ್ವ]
ಸಾಲ ಮನ್ನಾ ಇಲ್ಲ
ಇದೇ ವೇಳೆ ಮಾತನಾಡಿದ ಅವರು 'ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡುವವರೆಗೂ ರಾಜ್ಯ ಸರಕಾರ ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಮಾಡುವುದಿಲ್ಲ," ಎಂದು ತಿಳಿಸಿದರು.
"ಒಬ್ಬರನ್ನೇ ಸತತ 3ನೇ ಅವಧಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ದಾಖಲೆಯೇ ಸರಿ. ಇದು ಹೈ ಕಮಾಂಡ್ ನನಗೆ ಕೊಟ್ಟಿರುವ ಅತ್ಯುನ್ನತ ಗೌರವ. ಈ ಹೊಣೆಯನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ'," ಎಂದು ಪರಮೇಶ್ವರ್ ಹೇಳಿದ್ದಾರೆ.
ಇನ್ನು "ಯಾರಿಗೆಲ್ಲಾ ಅನ್ನಬಾಗ್ಯ ಯೋಜನೆಯಿಂದ ಉಯೋಗವಾಗಿದೆಯೋ ಅವರು ಅದನ್ನು ವಿರೋಧಿಸುತ್ತಿಲ್ಲ. ಕೂಲಿ ಕಾರ್ಮಿಕರಿಗೆ ಬಡಜನರಿಗೆ ಹಸಿವು ನೀಗಿಸು ಅನ್ನಭಾಗ್ಯ ಯೋಜನ ಸಹಕಾರಿಯಾಗಿದೆ," ಎಂದು ಹೇಳಿದರು.[ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಪರಂ ಮುಂದುವರಿಕೆಗೆ ಹೈಕಮಾಂಡ್ ಒಲವು]
ಇದೇ ವೇಳೆ ನರೇಂದ್ರ ಮೋದಿಯನ್ನು ಟೀಕಿಸಿದ ಪರಮೇಶ್ವರ್, "ನರೇಂದ್ರ ಮೋದಿ ದೇಶದ ಜನರಿಗೆ ಕನಸು ತೋರಿಸಿ ಅದನ್ನು ಮಾರ್ಕೆಟಿಂಗ್ ಮಾಡಿದರು. ಆದರೆ ಮೂರು ವರ್ಷವಾದರೂ ಕನಸು ನನಸಾಗುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲ. ಇದು ದೇಶಕ್ಕೆ ಬಂದೊದಗಿದ ದೌರ್ಭಾಗ್ಯ," ಎಂದು ಪರಮೇಶ್ವರ್ ಹೇಳಿದರು.












Click it and Unblock the Notifications