ಚುನಾವಣಾ ಎಫೆಕ್ಟ್: ಕೆಪಿಸಿಸಿಯಲ್ಲಿ ಬದಲಾವಣೆ ಪರ್ವ
ಬೆಂಗಳೂರು, ಮೇ 28: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ ಅಭೂತಪೂರ್ವವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳಲ್ಲೂ ಆಮೂಲಾಗ್ರ ಬದಲಾವಣೆಯ ಕಾಲ ಅತ್ಯಗತ್ಯ/ಅನಿವಾರ್ಯವೆನಿಸಿದೆ.
ಈಗಿನ ಆಡಳಿತಾರೂಢ ಬಿಜೆಪಿ ಆದಿಯಾಗಿ ಎಲ್ಲ ಪಕ್ಷಗಳಲ್ಲೂ ಭಾರಿ ಸ್ಥಿತ್ಯಂತರಗಳು ಘಟಿಸಲಿವೆ. ಕೆಲ ಸರ್ವಾಧಿಕಾರಿ ಪಕ್ಷಗಳಲ್ಲಂತೂ ಆಗಲೇ ಬದಲಾವಣೆಗಳು ಆಗಿವೆ. ಇನ್ನು ಜಯಲಲಿತಾ, ಮಾಯಾವತಿ ಪಕ್ಷಗಳಲ್ಲಿ ಅದಾಗಲೇ ಭಾರಿ ಮಾರ್ಪಾಡುಗಳಾಗಿವೆ.
ಕಾಂಗ್ರೆಸ್ ಪಕ್ಷದಲ್ಲಿ AICC ಮಟ್ಟದಲ್ಲಿ ಹೆಚ್ಚಾನೂ ಬದಲಾವಣೆಗಳಾಗದೆ ಕುಟುಂಬ ರಾಜಕಾರಣಕ್ಕೆ ಜೋತುಬಿದ್ದಿರುವಾಗ ರಾಜ್ಯದಲ್ಲಿ ಕೆಪಿಸಿಸಿಯಲ್ಲಿ ಒಂದಷ್ಟು ಬದಲಾವನೆಗಳು ಖಚಿತವೆನ್ನಲಾಗಿದೆ. ಇನ್ನು KPCC ಸಾರಥ್ಯವೂ ಬದಲಾವಣೆಗೆ ಹಾತೊರೆಯುತ್ತಿದೆ. ಹಾಗೆಯೇ ಜೆಡಿಎಸ್ಸಿನಲ್ಲೂ ಬದಲಾವಣೆ ಆಗಬೇಕಿದೆ. ಮುಖ್ಯವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸ ನೇಮಕವಾಗಲಿದೆ.

ಪಕ್ಷದ ಮಟ್ಟದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಆತ್ಮಾವಲೋಕನ ಸಭೆ ಕರೆಯಲಾಗಿದೆ. ಸರಕಾರದ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಚಿವರುಗಳ ಕಾರ್ಯವೈಖರಿ ಪ್ರಗತಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರು ತಮ್ಮ ಮಂತ್ರಿಮಂಡಲವನ್ನು ಪುನಾರಚಿಸುವುದು ಖಚಿವಾಗಿದೆ.
ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಹುದ್ದೆಗೆ ಪಟ್ಟುಹಿಡಿದಂತೆ ಕಾಣುತ್ತಿದೆ. ದಶಕದ ಬಳಿಕ ಪಕ್ಷವನ್ನು ಅಧಿಕಾರಕ್ಕೆ ತರವುಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ತಾನು ಯಶಸ್ವಿಯಾಗಿದ್ದೇನೆ. ಹಾಗಾಗಿ, ತಮಗೆ ಕೊಡುವುದಾದರೆ ಉಪಮುಖ್ಯಮಂತ್ರಿ ಹುದ್ದೆಯನ್ನೇ ಕೊಡಿ ಇಲ್ಲವಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವುದಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರಕಾರದಲ್ಲಿ ಬಯಸಿರುವ ಸ್ಥಾನಮಾನ ನೀಡುವುದಾಗಿ ಲೋಕಸಭಾ ಚುನಾವಣೆಗೆ ಮುನ್ನ ಪರಮೇಶ್ವರ್ ಅವರಿಗೆ ಹೈಕಮಾಂಡ್ ಭರವಸೆ ನೀಡಿತ್ತು. ಈಗ ಚುನಾವಣೆ ಬಳಿಕ ಪರಮೇಶ್ವರ್ ಅವರೂ ಸಹ ಸರಕಾರದಲ್ಲಿ ಸೂಕ್ತ ಸ್ಥಾನಮಾನ ಬಯಸಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಈ ಪ್ರಯತ್ನದಲ್ಲಿ ಪರಮೇಶ್ವರ್ ಯಶಸ್ವಿಯಾಗುತ್ತಾರಾ?












Click it and Unblock the Notifications