ಪದ್ಮನಾಭನಗರ ಅಭ್ಯರ್ಥಿಗೆ ಫೋನ್ ಕರೆ, ಕೈ ಸೇರಿತು ಕಾಂಗ್ರೆಸ್ ಬಿ-ಫಾರಂ!
ಬೆಂಗಳೂರು, ಏಪ್ರಿಲ್ 13; ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ. ರಘುನಾಥ ನಾಯ್ಡುಗೆ ಬಿ-ಫಾರಂ ವಿತರಣೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಫೋನ್ ಕರೆ ಮಾಡಿ ಅಭ್ಯರ್ಥಿಯನ್ನು ಕರೆಸಿಕೊಂಡು ಬಿ-ಫಾರಂ ವಿತರಣೆ ಮಾಡಿದ್ದಾರೆ. ಆದರೆ ಗುರುವಾರ ಬೆಳಗ್ಗೆ ಅವರ ನಡೆ ಕುತೂಹಲಕ್ಕೆ ಕಾರಣವಾಗಿತ್ತು, ರಾಜ್ಯ ರಾಜಕೀಯದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು.
ಡಿ. ಕೆ. ಶಿವಕುಮಾರ್ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ತನ್ನ 2ನೇ ಪಟ್ಟಿಯಲ್ಲಿ ಪದ್ಮನಾಭನಗರ ಕ್ಷೇತ್ರಕ್ಕೆ ವಿ. ರಘುನಾಥ ನಾಯ್ಡು ಅಭ್ಯರ್ಥಿ ಎಂದು ಹೆಸರಿಸಿತ್ತು. ಅವರು ಬಿ-ಫಾರಂ ಪಡೆಯಲು ಅವರು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು. ಆದರೆ ಬಿ-ಫಾರಂ ವಿತರಣೆ ಆಗದ ಕಾರಣ ವಾಪಸ್ ತೆರಳಿದ್ದರು.

ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಹಾಲಿ ಶಾಸಕರು ಆರ್. ಅಶೋಕ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಶೋಕಗೆ ರಾಮನಗರದ ಕನಕಪುರ ಮತ್ತು ಪದ್ಮನಾಭನಗರದಲ್ಲಿ ಕಣಕ್ಕಿಳಿಯಲು ಅವಕಾಶ ನೀಡಿದೆ. ಕನಕಪುರದಲ್ಲಿ ಡಿ. ಕೆ. ಶಿವಕುಮಾರ್ ಎದುರಾಳಿ ಅಶೋಕ. ಆದ್ದರಿಂದ ಡಿ. ಕೆ. ಶಿವಕುಮಾರ್ ತಂತ್ರ ರೂಪಿಸಿ ವಿ. ರಘುನಾಥ ನಾಯ್ಡುಗೆ ಬಿ-ಫಾರಂ ನೀಡಿಲ್ಲ ಎಂಬ ಚರ್ಚೆ ಆರಂಭವಾಗಿತ್ತು. ಅಲ್ಲದೇ ಡಿ. ಕೆ. ಸುರೇಶ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ವಿ. ರಘುನಾಥ ನಾಯ್ಡು ಮಾಧ್ಯಮಗಳ ಜೊತೆ ಮಾತನಾಡಿ, "ಸಂಸದ ಡಿ. ಕೆ. ಸುರೇಶ್ ಕಣಕ್ಕಿಳಿಯುವುದಾದರೆ ನಾನೇ ಕ್ಷೇತ್ರ ಬಿಟ್ಟುಕೊಡುವೆ. 60 ರಿಂದ 70 ಸಾವಿರ ಮತಗಳ ಅಂತದಲ್ಲಿ ಅವರನ್ನು ಗೆಲ್ಲಿಸುತ್ತೇವೆ. ಹೇಗೆ ಗೆಲ್ಲಿಸುತ್ತೇವೆ ಎಂದು ಡಿ. ಕೆ. ಶಿವಕುಮಾರ್‌ಗೆ ವಿವರಣೆ ನೀಡಿದ್ದೇವೆ" ಎಂದು ಹೇಳಿದ್ದರು.

ಡಿಕೆಶಿ ಫೋನ್ ಕರೆ; ಬಿ-ಫಾರಂ ಸಿಗದೆ ವಿ. ರಘುನಾಥ ನಾಯ್ಡು ವಾಪಸ್ ಆಗಿದ್ದರು. ಡಿ. ಕೆ. ಶಿವಕುಮಾರ್ ಕರೆ ಮಾಡಿ ಅವರನ್ನು ವಾಪಸ್ ಕರೆಸಿಕೊಂಡು ಬಿ-ಫಾರಂ ವಿತರಣೆ ಮಾಡಿದ್ದಾರೆ. ಈ ಮೂಲಕ ಕೂತೂಹಲಕ್ಕೆ ತೆರೆ ಬಿದ್ದಿದೆ. ಕರ್ನಾಟಕ ವಿಧಾನಸಭೆ ಚುನಾವಣಾ ಅಧಿಸೂಚನೆ ಇಂದು ಪ್ರಕಟವಾಗಿದೆ. ಏಪ್ರಿಲ್ 14 ಮತ್ತು 16ರ ಸರ್ಕಾರಿ ರಜೆ ದಿನ ಹೊರತುಪಡಿಸಿ ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶವಿದೆ.
ಗುತ್ತಿಗೆದಾರ ವಿ. ರಘುನಾಥ ನಾಯ್ಡು ಈ ಬಾರಿಯ ಚುನಾವಣೆಯಲ್ಲಿ ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಇವರ ಜೊತೆ ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ, 2008ರಲ್ಲಿ ಸೋಲು ಕಂಡಿದ್ದ ಗುರಪ್ಪ ನಾಯ್ಡು, ಸಂಜಯ್ ಗೌಡ ಅವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ಕಾಂಗ್ರೆಸ್‌ನ 2ನೇ ಪಟ್ಟಿಯಲ್ಲಿ ವಿ. ರಘುನಾಥ ನಾಯ್ಡು ಅಭ್ಯರ್ಥಿ ಎಂದು ಘೋಷಣೆಯಾಗಿತ್ತು.
ಆದರೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಕಂದಾಯ ಸಚಿವ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಅಶೋಕಗೆ ಕನಕಪುರ ಮತ್ತು ಪದ್ಮನಾಭನಗರದಲ್ಲಿ ಕಣಕ್ಕಿಳಿಯಲು ಅವಕಾಶ ನೀಡಿತ್ತು. ಇದರಿಂದಾಗಿ ಪದ್ಮನಾಭನಗರದ ಲೆಕ್ಕಾಚಾರ ಬದಲಾಗಿತ್ತು. ಮಾಧ್ಯಮಗಳಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಪದ್ಮನಾಭನಗರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಬಂದಿದ್ದವು.
ಕನಕಪುರದಲ್ಲಿ ತಮ್ಮ ಎದುರಾಳಿಯಾದ ಆರ್. ಅಶೋಕಗೆ ಸೋಲಿಸಲು ಡಿ. ಕೆ. ಶಿವಕುಮಾರ್ ಪದ್ಮನಾಭನಗರದಲ್ಲಿ ಡಿ. ಕೆ. ಸುರೇಶ್ ಕಣಕ್ಕಿಳಿಸುವ ತಂತ್ರ ರೂಪಿಸಿದ್ದಾರೆ. ಆದ್ದರಿಂದ ಘೋಷಿತ ಅಭ್ಯರ್ಥಿ ವಿ. ರಘುನಾಥ ನಾಯ್ಡುಗೆ ಬಿ-ಫಾರಂ ನೀಡಿಲ್ಲ ಎಂಬ ವಿಶ್ಲೇಷಣೆ ನಡೆದಿತ್ತು. ಇದರ ನಡವೆಯೇ ಗುರುವಾರ ವಿ. ರಘುನಾಥ ನಾಯ್ಡು ಬಿ-ಫಾರಂ ಸಿಗದೇ ವಾಪಸ್ ಹೋಗಿದ್ದು, ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿತ್ತು.












Click it and Unblock the Notifications