ಸಿದ್ದರಾಮಯ್ಯ ನಾಟಕವಾಡುತ್ತಿದ್ದಾರೆ : ಯಡಿಯೂರಪ್ಪ

ಕೆಜೆಪಿ ಕಚೇರಿಯಲ್ಲಿ ಬುಧವಾರ ಗಾಂಧಿ ಜಯಂತಿ ಆಚರಣೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂದು ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ಇಂದು ಅಕ್ರಮ ಗಣಿಗಾರಿಕೆ ಆರೋಪ ಹೊತ್ತವರನ್ನು ತಮ್ಮ ಸಂಪುಟದಲ್ಲಿಟ್ಟುಕೊಂಡು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು. ದ್ವಂದ ನಿಲುವು ಅನುಸರಿಸುವ ಮೂಲಕ ಸಿಎಂ ನಾಟಕವಾಡುತ್ತಿದ್ದಾರೆ ಎಂದು ಅವರು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ವಿರುದ್ಧ ವೀರಾವೇಶದಿಂದ ಮಾತನಾಡಿದ್ದರು. ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದ್ದರು. ಇವೆಲ್ಲ ಕೇವಲ ನಾಟಕವೇ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಸಮಾಜ ಪರಿವರ್ತನಾ ಸಮುದಾಯದ ಹಿರೇಮಠ್ ಅವರು ಬಿಡುಗಡೆ ಮಾಡಿರುವ ದಾಖಲೆಯಲ್ಲಿ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆ ನಡೆಸಿರುವುದು ಸಾಬೀತಾಗಿದೆ. ಹಾಗಿದ್ದರೂ ಸಿದ್ದರಾಮಯ್ಯ ಅವರು ಲಾಡ್‌ರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಲಾಡ್ ಗೆ ಮತ್ತಷ್ಟು ಸಂಕಷ್ಟ : ಸಂತೋಷ್ ಲಾಡ್ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸದಿದ್ದರೆ ಹೋರಾಟ ಆರಂಭಿಸುವುದಾಗಿ ಕೆಜೆಪಿ ಘೋಷಿಸಿದೆ. ಈಗಾಗಲೇ ಬಿಜೆಪಿ, ಎಸ್.ಆರ್.ಹಿರೇಮಠ್, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಲಾಡ್ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಜೊತೆಗೆ ಕೆಜೆಪಿಯೂ ಸೇರಿದರೆ ಲಾಡ್ ಗೆ ಮತ್ತಷ್ಟು ಸಂಕಟ ಪ್ರಾರಂಭವಾಗಲಿದೆ.
ಯಾರ ಬಳಿಯೂ ಭಿಕ್ಷೆ ಬೇಡಲ್ಲ : ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಯಾವ ಪಕ್ಷಗಳ ಬಳಿಯೂ ಭಿಕ್ಷೆ ಬೇಡುವುದಿಲ್ಲ. ಯಾವ ಪಕ್ಷಗಳು ಮೈತ್ರಿಗೆ ಒಪ್ಪದಿದ್ದರೆ, ಸ್ವತಂತ್ರ್ಯವಾಗಿ ಸ್ಪರ್ಧಿಸುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.
ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಹಂಬಲದಿಂದ ಎನ್‌ಡಿಎಗೆ ಬೆಂಬಲ ನೀಡುತ್ತಿದ್ದೇನೆ. 10 ಸ್ಥಾನಗಳನ್ನು ಕೆಜೆಪಿಗೆ ಬಿಟ್ಟುಕೊಡುವಂತೆ ಕೇಳುತ್ತಿದ್ದೇನೆ. ಬಿಟ್ಟುಕೊಡದಿದ್ದಲ್ಲಿ, ಅವರಿಗೆ ನಷ್ಟ ಉಂಟಾಗಲಿದೆ. ಬಿಜೆಪಿ ನಾಯಕರಿಗೆ ಇಷ್ಟವಿದ್ದರೆ ಮಾತ್ರ ಮೈತ್ರಿ ಮಾಡಿಕೊಳ್ಳಲಿ ಎಂದರು.











Click it and Unblock the Notifications