ಬೈಕ್ ಸವಾರನ ಕುತ್ತಿಗೆ ಸೀಳಿದ ಗಾಳಿಪಟ ದಾರ!
ಬೆಂಗಳೂರು, ಜೂನ್ 24: ರಾಜಧಾನಿ ಬೆಂಗಳೂರಿನಲ್ಲಿ ಯಮ ಯಾವ ರೂಪದಲ್ಲಿ ಕಾದಿರುತ್ತಾನೋ ಆ ಭಗವಂತನೇ ಬಲ್ಲ. ಮುಗ್ಧ ಜೀವಗಳನ್ನು ಗುಂಡಿಗಳು ಬಲಿ ಪಡೆಯುತ್ತವೆ. ರಸ್ತೆಯಲ್ಲಿ ಯಮ ಸ್ವರೂಪಿ ಬಸ್‌ಗಳು ಎಷ್ಟೋ ಮಂದಿಯ ಜೀವ ತೆಗೆದಿವೆ. ಅದರ ಸಾಲಿಗೆ ಇದೀಗ ಗಾಳಿಪಟದ ದಾರ ಕೂಡ ಸವಾರರ ಕತ್ತು ಸೀಳಲು ಬೆಂಗಳೂರು ರಸ್ತೆಗಳಲ್ಲಿ ಹಾರಾಡುತ್ತಿವೆ.
Recommended Video
ದ್ವಿಚಕ್ರ ವಾಹನದಲ್ಲಿ ಬ್ಯಾಂಕ್‌ಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಗಾಳಿಪಟ ದಾರ ಕತ್ತು ಸೀಳಿರುವ ಘಟನೆ ಆಡುಗೋಡಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ ಈ ಕುರಿತು ವಿಡಿಯೋ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇನ್ನೇನು ಕುತ್ತಿಗೆ ಸೀಳಿ ತಲೆ ಬೇರ್ಪಡಬೇಕಿತ್ತು. ಕ್ಷಾಣಾಕ್ಷತೆ ಮರೆದು ಜೀವ ಉಳಿಸಿಕೊಂಡಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ ಸವಾರರೇ ಈ ವಿಡಿಯೋ ನೋಡಿ !
— oneindiakannada (@OneindiaKannada) June 24, 2021
ಆಡುಗೋಡಿ ಟ್ರಾಫಿಕ್ ಸಿಗ್ನಲ್ ಬಳಿ ಗಾಳಿಪಟ ದಾರ ಬೈಕ್ ಸವಾರನ ಕುತ್ತಿಗೆ ಕತ್ತರಿಸಿದೆ. ಅದೃಷ್ಟವಶಾತ್ ಜೀವ ಉಳಿಸಿಕೊಂಡಿರುವ ಬೈಕ್ ಸವಾರನ ಮನದಾಳದ ಮಾತು ಕೇಳಿ.#Aadugodi #BikeRider #Bengaluru #ViralVideo pic.twitter.com/ZwU6I8jyo0
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ವಿಡಿಯೋ ಮಾಡಿದ್ದು, ಎಲ್ಲರಿಗೂ ನಮಸ್ಕಾರ, ನಾನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಹೋಗುತ್ತಿದ್ದೆ. ಆಡುಗೋಡಿ ಪೊಲೀಸ್ ಠಾಣೆ ಮುಂದೆ ಹೋಗುತ್ತಿದ್ದೆ. ಗಾಳಿಪಟದ ದಾರವೊಂದು ಕುತ್ತಿಗೆ ಸೀಳಿತು. ಕೂಡಲೇ ಎಚ್ಚೆತ್ತು ಕೈಯಿನಿಂದ ದಾರವನ್ನು ಎಳೆದೆ. ಅದರಿಂದ ನನ್ನ ಎರಡೂ ಬೆರಳು ತುಂಡಾಗುವಷ್ಟು ದಾರ ಕತ್ತರಿಸಿದೆ. ನಾನು ಸರ್ಕಾರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುವುದು ಇಷ್ಟೇ. ಬೆಂಗಳೂರಿನಲ್ಲಿ ಗಾಳಿಪಟ ಹಾರಿಸುವುದನ್ನು ನಿಷೇಧ ಮಾಡಿ. ಎಷ್ಟೋ ಪಕ್ಷಿಗಳು ಜೀವ ಕಳೆದುಕೊಳ್ಳುತ್ತಿವೆ. ಇದರ ಜತೆಗೆ ಇದೀಗ ಜನರು ಜೀವ ಕಳೆದುಕೊಳ್ಳುವಂತಾಗಿದೆ. ನಾನು ಸ್ವಲ್ಪ ಯಾಮಾರಿದ್ದರೆ ನನ್ನ ರುಂಡ ನೋಡಬೇಕಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ಗಾಳಿಪಟ ಹಾರಿಸುವುದನ್ನು ನಿಷೇಧ ಮಾಡಿ ಎಂದು ಆತ ಮನವಿ ಮಾಡಿಕೊಂಡಿದ್ದಾನೆ. ಅಂದಹಾಗೆ ಈ ವ್ಯಕ್ತಿಯ ವಿವರ ಬಹಿರಂಗ ಪಡಿಸಿಲ್ಲ. ಆದರೆ ಈತ ಮಾಡಿರುವ ವಿಡಿಯೋ ಮಾತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಪಕ್ಷಿಗಳಿಗೂ ಕಂಟಕ: ಬೆಂಗಳೂರಿನಲ್ಲಿ ಗಾಳಿಪಟದ ದಾರಗಳು ಪಕ್ಷಿಗಳ ಜೀವಕ್ಕೂ ಅಪಾಯ ತಂದೊಡ್ಡಿವೆ. ಇತ್ತೀಚೆಗೆ ದಾರಕ್ಕೆ ನವಿಲು ಸಿಲುಕಿ ಮೂರು ದಿನ ಊಟವಿಲ್ಲದೇ ಒದ್ದಾಡಿತ್ತು. ವನ್ಯ ಜೀವಿ ಸಂರಕ್ಷಕರು ಅದನ್ನು ರಕ್ಷಿಸಿದ್ದರು. ಅನೇಕ ಹದ್ದುಗಳು ಬೆಂಗಳೂರಿನಲ್ಲಿ ಜೀವ ಕಳೆದುಕೊಂಡಿವೆ. ಪಾರಿವಾಳಗಳೂ ಕೂಡ ಗಾಳಿಪಟ ದಾರಕ್ಕೆ ಸಿಲುಕಿ ಒದ್ದಾಡಿ ಜೀವ ಕಳೆದುಕೊಂಡಿವೆ. ಬೆಂಗಳೂರಿನಲ್ಲಿ ಗಾಳಿಪಟ ಹಾರಿಸುವುದನ್ನು ನಿಷೇಧಿಸುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಚಿಂತನೆ ಮಾಡಬೇಕಿದೆ.












Click it and Unblock the Notifications